ಗಬ್ಬು ನಾರುತ್ತಿದೆ ಕೆಎಸ್ಆರ್ ಟಿಸಿ ಬಸ್ ನಿಲ್ದಾಣ: ಪ್ರಯಾಣಿಕರ ಆರೋಪ

KannadaprabhaNewsNetwork | Published : Jan 2, 2024 2:15 AM

ಸಾರಾಂಶ

ನಿಲ್ದಾಣದಲ್ಲಿ ಬೆಳಗಿನಿಂದ ಸಂಜೆವರೆಗೂ ಸಾವಿರಾರು ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಪ್ರತಿದಿನ ಶಿವಮೊಗ್ಗ-ಬೆಂಗಳೂರು ಸೇರಿದಂತೆ, ಗ್ರಾಮೀಣ ಭಾಗದ ಜನರು ವಿವಿಧೆಡೆಗೆ ತೆರಳಲು ಈ ನಿಲ್ದಾಣಕ್ಕೆ ಬರುತ್ತಾರೆ. ಆದರೆ ಇಲ್ಲಿ ಕುಡಿಯುವ ನೀರು, ನೈರ್ಮಲ್ಯದ ಕೊರತೆಯಿಂದ ಪರದಾಡುವ ಪರಿಸ್ಥಿತಿ ಇದೆ.

- ಪಾರ್ಕಿಂಗ್ ಗೆ ಜಾಗವಿದ್ದರು ಬಳಸಿಕೊಳ್ಳದ ಇಲಾಖೆ: ಶಾಲಾ ಕಾಲೇಜು ವಿದ್ಯಾರ್ಥಿಗಳ ಕುಡಿಯುವ ನೀರಿಗೂ ತೊಂದರೆಎನ್.ಗಿರೀಶ್,

ಕನ್ನಡಪ್ರಭ ವಾರ್ತೆ, ಬೀರೂರು.

ಕುಡಿಯುವ ನೀರು ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿರುವ ಬೀರೂರು ಕೆಎಸ್ಆರ್ ಟಿಸಿ ಬಸ್ ನಿಲ್ದಾಣ ಇಲಾಖೆ ದಿವ್ಯ ನಿರ್ಲಕ್ಷಕ್ಕೆ ಒಳಗಾಗಿದೆ.

ಈ ನಿಲ್ದಾಣದಲ್ಲಿ ಬೆಳಗಿನಿಂದ ಸಂಜೆವರೆಗೂ ಸಾವಿರಾರು ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಪ್ರತಿದಿನ ಶಿವಮೊಗ್ಗ-ಬೆಂಗಳೂರು ಸೇರಿದಂತೆ, ಗ್ರಾಮೀಣ ಭಾಗದ ಜನರು ವಿವಿಧೆಡೆಗೆ ತೆರಳಲು ಈ ನಿಲ್ದಾಣಕ್ಕೆ ಬರುತ್ತಾರೆ. ಆದರೆ ಇಲ್ಲಿಗೆ ಬರುವ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳಿಗೇನಾದರೂ ದಾಹವಾದರೇ ಕುಡಿಯುವ ನೀರನ್ನು ಹೊಟೆಲ್ ಮತ್ತಿತರ ಅಂಗಡಿಗಳಿಂದ ದುಡ್ಡು ಕೊಟ್ಟು ಖರೀದಿಸಿ ಕುಡಿಯುವ ಪರಿಸ್ಥಿತಿ ಇದೆ.

ನಿಲ್ದಾಣದಲ್ಲಿ ಶೌಚಾಲಯವಿದ್ದರೂ ಶುಚಿತ್ವ ಹಾಗೂ ನೀರಿನ ಕೊರತೆಯಿಂದ ಗಬ್ಬು ನಾರುತ್ತಿದೆ. ಇನ್ನೊಂ ದೆಡೆ ಪಕ್ಕದಲ್ಲೇ ಇರುವ ವಿಶಾಲವಾದ ಕೆ.ಎಲ್.ಕೆ ಮೈದಾನದ ತುಂಬಾ ಬೆಳಗ್ಗೆ ಮತ್ತು ಸಂಜೆ ವೃದ್ದರು, ಯುವಕರು ವಾಯುವಿಹಾರಕ್ಕೆ ಬಂದಾಗ ಶೌಚಾಲಯದ ಸಮೀಪಿಸಿದರೇ ಗಬ್ಬು ವಾಸನೆ ಇವರ ಮೂಗಿಗೆ ಬಡಿದು ಅಧಿಕಾರಿಗಳ ನಿರ್ಲಕ್ಷಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.

ಪಾರ್ಕಿಂಗ್ ವ್ಯವಸ್ಥೆ ಇಲ್ಲ: ಆದಾಯಕ್ಕೆ ಜಾಗವಿದ್ದರು ಬಳಸಿಕೊಳ್ಳದ ಅಧಿಕಾರಿಗಳು:

ಕೆಎಸ್ಆರ್ ಟಿಸಿ ನಿಲ್ದಾಣದಿಂದ ಪ್ರಯಾಣಿಸುವ ಜನರು ತಮ್ಮ ದ್ವಿಚಕ್ರ ವಾಹನ ನಿಲ್ಲಿಸಲು ಪಾರ್ಕಿಂಗ್ ಇಲ್ಲದ್ದನ್ನು ಕಂಡು ನಿಲ್ದಾಣದ ಎದುರಿನ ಖಾಸಗಿ ಜಾಗದ ಮನೆಗಳು, ಹೋಟೆಲ್, ಬ್ಯಾಂಕ್ ಗಳ ಮುಂಭಾಗ ತಮ್ಮ ವಾಹನಗಳನ್ನು ನಿಲ್ಲಿಸಿ ಹೋಗುವ ಪರಿಸ್ಥಿತಿ ಇದೆ.

ಸಂಜೆಯಾದರೇ ಒಳಬಾರದ ಕೆಎಸ್ಆರ್ ಟಿಸಿ ಬಸ್ಸ್ ಗಳು:

ಕಳೆದ ಬಾರಿ ಪತ್ರಿಕೆಯಲ್ಲಿ ಬಸ್ಸುಗಳು ಒಳ ಬರುತ್ತಿಲ್ಲ ಎಂದು ಪತ್ರಿಕೆ ವರದಿ ಮಾಡಿದ ಬಳಿಕ ಎಚ್ಚೆತ್ತ ಅಧಿಕಾರಿಗಳು, ಕಾಟಾಚಾರಕ್ಕೆ ಒಂದೆರಡು ತಿಂಗಳು ಅವರೇ ಬಸ್ಸುಗಳನ್ನು ಒಳ ಕಳುಹಿಸುತ್ತಿದ್ದುದಕ್ಕೆ ಪ್ರಯಾಣಿಕರು ಸಂತಸ ಪಟ್ಟಿದ್ದರು, ಆದರೆ ಜಾಣ ಕಿವುಡರಂತೆ ಮತ್ತೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಸ್ಸ್ ಚಾಲಕರು ಸಂಜೆಯಾಗುತ್ತಿದ್ದಂತೆ ನಿಲ್ದಾಣದ ಒಳಗೆ ಬಾರದೆ, ನಿಲ್ದಾಣದ ಮುಂಭಾಗ ಅಥವಾ ಮಹಾತ್ಮ ಗಾಂಧಿ ವೃತ್ತದ ಬಳಿ ನಿಲ್ಲಿಸುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುವ ಜತೆ ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತಿದೆ.

---ಕೋಟ್ಸ್‌---

ಬೆಳಗಿನ ಸಮಯದಲ್ಲಿ ಕಡೂರು-ಚಿಕ್ಕಮಗಳೂರು, ಶಿವಮೊಗ್ಗಕ್ಕೆ ತೆರಳಲು ಆಗಮಿಸುವ ಸಾವಿರಾರು ವಿದ್ಯಾರ್ಥಿಗಳಿಗೆ ಇಲ್ಲ. ಬೆ.8.30 ರಿಂದ 10 ರವರೆಗು ಸರಿಯಾಗಿ ಬಸ್ಸ್ ಗಳಿಲ್ಲದೆ ಕಾಲೇಜಿಗೆ ತೆರಳಲು ಕಷ್ಟವಾಗಿದೆ. ಇಲಾಖೆ ಅಧಿಕಾರಿಗಳು ಇಲ್ಲಿನ ಸಮಸ್ಯೆ ಬಗೆಹರಿಸಿದರೆ ವಿದ್ಯಾರ್ಥಿಗಳಿಗೆ ಒಳಿತಾಗುತ್ತದೆ ಎನ್ನುತ್ತಾರೆ.

ಯಶ್ವಂತ್

ದ್ವಿತೀಯ ಪಿಯುಸಿ ವಿದ್ಯಾರ್ಥಿ,

ಕಡೂರು.

ಮೂಲಭೂತ ಸಮಸ್ಯೆಗಳ ವಿರುದ್ಧ ಅನೇಕ ಬಾರಿ ಡಿಪೋ ವ್ಯವಸ್ಥಾಪಕರಿಗೆ ದೂರು ನೀಡಿದ್ದರೂ ಸಹ ಯಾವ ಪ್ರಯೋಜನವಿಲ್ಲ. ಸರ್ಕಾರ ಜನಸಾಮಾನ್ಯರಿಗೆ ಅನೇಕ ಯೋಜನೆ ರೂಪಿಸಿದೆ. ಇಲ್ಲಿ ಬಸ್ಸ್ ನಿಲ್ದಾಣವಿದ್ದರು ಇಲ್ಲದಂತಾಗಿದೆ. ಒಬ್ಬರೆ ನಿಯಂತ್ರಣಾಧಿಕಾರಿ ಕೆಲಸ ಮಾಡುವುದು. ಸಂಜೆ 6 ಕ್ಕೆ ಅವರು ಮನೆಗೆ ತೆರಳುತ್ತಾರೆ. ವಾಹನಗಳನ್ನು ನಿಲ್ಲಿಸಲು ಬೇಕಾದಷ್ಟು ಜಾಗವಿದ್ದರೂ ಇಲಾಖೆ ಬಳಸಿಕೊಳ್ಳದ ಕಾರಣ ಜನರು ಬೇಸತ್ತು ತಮ್ಮ ವಾಹನಗಳನ್ನು ತಮಗೆ ಅನುಕೂಲವಾದ ಜಾಗದಲ್ಲಿ ನಿಲ್ಲಿಸುತ್ತಿದ್ದಾರೆ. ಸಂಜೆಯಾಗುತ್ತಿದ್ದಂತೆ ನಿಲ್ದಾಣ ಸ್ವಚ್ಛತೆ ಇಲ್ಲದ ಕಾರಣ ಬಸ್ಸ ಗಾಗಿ ಕಾಯುವವರಿಗೆ ಸೊಳ್ಳೆಗಳು ಕಡಿದು ರೋಗ ಆಹ್ವಾನಿಸುತ್ತಿವೆ.

ಯತೀಶ್. ಬೀರೂರು ನಿವಾಸಿ.

ಪುರಸಭೆಯಿಂದ ಕುಡಿಯುವ ನೀರಿನ ಕನೆಕ್ಷನ್ ತೆಗೆದುಕೊಳ್ಳಲಾಗಿದೆ ಆದರೆ ನಿಲ್ದಾಣಕ್ಕೆ ಬೇಕಾದಷ್ಟು ನೀರು ಲಭ್ಯವಿಲ್ಲವಾದ್ದರಿಂದ ನಾವೇ ಡಿಪೋದಿಂದ ವಾಹನದಲ್ಲಿ ನೀರನ್ನು ಸಂಪಿಗೆ ಹಾಕುತ್ತೇವೆ. ಜೊತೆಗೆ ವಿದ್ಯಾರ್ಥಿಗಳ ಅನುಕೂಲಕ್ಕೆ ಕುಡಿಯುವ ನೀರಿನ ಫಿಲ್ಟರ್ ಅಳವಡಿಸಿದ್ದೆವು ಅದು ಹಾಳಾಗಿದೆ. ನಿಲ್ದಾಣ ದ ಅಭಿವೃದ್ಧಿಗೆ ಇಲಾಖೆಯಿಂದ ನಾವು ನಿರೀಕ್ಷಿಸುವಷ್ಟು ಅನುದಾನ ಬರುವುದಿಲ್ಲ. ಸಮಸ್ಯೆಗಳು ಕಂಡು ಬಂದಲ್ಲಿ ಭೇಟಿ ನೀಡಿ ಸಮಸ್ಯೆ ಬಗೆಹರಿಸಲಾಗುವುದು.

ಪುಟ್ಟಸ್ವಾಮಿ.

ಕಡೂರು ಡಿಪೋ ಪ್ರಭಾರಿ ವ್ಯವಸ್ಥಾಪಕ.

31 ಬೀರೂರು 1

ಬೀರೂರಿನ ಕೆಎಸ್ಆರ್ ಟಿಸಿ ಬಸ್ ನಿಲ್ದಾಣ.

2. ಕುಡಿಯುವ ನೀರಿನ ತೊಟ್ಟಿಯಲ್ಲಿ ನೀರು ಬಾರದೆ ಇರದ ಕಾರಣ ಜನ ಹಾಳು ಮಾಡಿರುವುದು. 3.ಗಬ್ಬು ನಾರುವ ಶೌಚಾಲಯ.

Share this article