ಅಯೋಧ್ಯೆಯ ಮಂತ್ರಾಕ್ಷತೆ ಸ್ವೀಕರಿಸಲು ಷರತ್ತುಗಳಿಲ್ಲ, ಸೂತಕ ಅಡ್ಡಿಯಿಲ್ಲ: ವಿಎಚ್‌ಪಿ

KannadaprabhaNewsNetwork | Published : Jan 2, 2024 2:15 AM

ಸಾರಾಂಶ

ಅಯೋಧ್ಯೆಯ ಮಂತ್ರಾಕ್ಷತೆ ಸ್ವೀಕರಿಸಲು ಯಾವುದೇ ಷರತ್ತು, ನಿರ್ಬಂಧಗಳಿಲ್ಲ, ವ್ರತಾಚರಣೆಯ ಅಗತ್ಯವಿಲ್ಲ ಮತ್ತು ಸೂತಕದ ಅಡ್ಡಿ ಇಲ್ಲ. ಅಯೋಧ್ಯೆಯ ಮಂತ್ರಾಕ್ಷತೆ ಸ್ವೀಕಾರದ ಕುರಿತು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಯಾರೂ ಗೊಂದಲಕ್ಕೀಡಾಗದೆ ಭಕ್ತಿಯಿಂದ ಮಂತ್ರಾಕ್ಷತೆ ಸ್ವೀಕರಿಸಿ.

ಕನ್ನಡಪ್ರಭ ವಾರ್ತೆ ಮಡಿಕೇರಿ ಅಯೋಧ್ಯೆಯ ಮಂತ್ರಾಕ್ಷತೆ ಸ್ವೀಕರಿಸಲು ಯಾವುದೇ ಷರತ್ತು, ನಿರ್ಬಂಧಗಳಿಲ್ಲ, ವ್ರತಾಚರಣೆಯ ಅಗತ್ಯವಿಲ್ಲ ಮತ್ತು ಸೂತಕದ ಅಡ್ಡಿ ಇಲ್ಲವೆಂದು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹಾಗೂ ವಿಶ್ವ ಹಿಂದೂ ಪರಿಷತ್ ನ ಕೊಡಗು ಜಿಲ್ಲಾ ಘಟಕ ಸ್ಪಷ್ಟಪಡಿಸಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ಟ್ರಸ್ಟ್ ಮತ್ತು ವಿಎಚ್‌ಪಿ, ಅಯೋಧ್ಯೆಯ ಮಂತ್ರಾಕ್ಷತೆ ಸ್ವೀಕಾರದ ಕುರಿತು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಯಾರೂ ಗೊಂದಲಕ್ಕೀಡಾಗದೆ ಭಕ್ತಿಯಿಂದ ಮಂತ್ರಾಕ್ಷತೆ ಸ್ವೀಕರಿಸಿ ಎಂದು ಮನವಿ ಮಾಡಿದೆ.

ಮಂತ್ರಾಕ್ಷತೆ ವಿತರಿಸುವ ಸಂದರ್ಭ ಮನೆಯವರಿಂದ ಹಣ ಅಥವಾ ಯಾವುದೇ ವಸ್ತು ದಾನವಾಗಿ ಪಡೆಯಬಾರದು. ಹಿರಿಯರನ್ನು ಗೌರವಿಸಬೇಕು ಮತ್ತು ಮನೆಯವರಿಗೆ ಅಕ್ಷತೆ ಬಗ್ಗೆ ಮಾಹಿತಿ ನೀಡಬೇಕು.

ಮಂತ್ರಾಕ್ಷತೆಯನ್ನು ಕೊಡಗು ಜಿಲ್ಲೆಗೆ ತಂದು ಓಂಕಾರೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ತಾಲೂಕು ಮಟ್ಟದಲ್ಲಿ ವಿತರಣೆ ಮಾಡಲಾಗಿದೆ. ಪ್ರಸ್ತುತ ಗ್ರಾಮ ಗ್ರಾಮಗಳ ದೇವಾಲಯಗಳಲ್ಲಿ ಇರಿಸಲಾಗಿದ್ದು, ಜ.15 ರ ವರೆಗೆ ವಿತರಣೆ ಮಾಡಲು ಸಮಯ ನಿಗದಿಪಡಿಸಲಾಗಿದೆ. ಜ.7ರಂದು ಮಹಾ ಅಭಿಯಾನದ ಮೂಲಕ ಬೆಳಗ್ಗಿನಿಂದ ಸಂಜೆಯವರೆಗೆ ಮಂತ್ರಾಕ್ಷತೆ ವಿತರಿಸಬೇಕು ಎಂದು ತಿಳಿಸಲಾಗಿದೆ.ಸೂಚನೆಗಳು: ಮಂತ್ರಾಕ್ಷತೆ ವಿತರಣೆ ಸಂದರ್ಭ ಒಂದು ತಂಡದಲ್ಲಿ ಐದು ಮಂದಿಗಿಂತ ಹೆಚ್ಚು ಸದಸ್ಯರಿರಬೇಕು. ಎಲ್ಲರೂ ಬಿಳಿ ಬಣ್ಣದ ವಸ್ತ್ರ ತೊಡಬೇಕು. ಮಂತ್ರಾಕ್ಷತೆ ಕಲಶ ಹಿಡಿದವರು ಕಾಲಿನಲ್ಲಿ ಚಪ್ಪಲಿ ಧರಿಸಬಾರದು. ಕಾರ್ಯಕ್ರಮದಲ್ಲಿ ಮಹಿಳೆಯರು ಕೂಡ ಪಾಲ್ಗೊಳ್ಳಬೇಕು. ರಾಮನಾಮ ಜಪದೊಂದಿಗೆ ಮನೆಯೊಳಗೆ ಹೋಗಿ ತಟ್ಟೆಯಲ್ಲಿ 8-10 ಗ್ರಾಂ ಅಕ್ಷತೆ ನೀಡಬೇಕು. ಅಕ್ಷತೆ ವಿತರಣೆ ಮಾಡುವವರ ಬಳಿ ಒಂದು ನೋಟು ಪುಸ್ತಕ ಇರಬೇಕು. ಮನೆಯ ಯಜಮಾನನ ಹೆಸರು ಮತ್ತು ದೂರವಾಣಿ ಸಂಖ್ಯೆ, ಸದಸ್ಯರ ಸಂಖ್ಯೆ ಪಡೆದುಕೊಳ್ಳಬೇಕು.

ಸ್ವೀಕರಿಸಿದ ಅಕ್ಷತೆಯನ್ನು ಮನೆಯ ಪೂಜಾ ಕ್ಷೇತ್ರದಲ್ಲಿ ಇರಿಸಬೇಕು. ಅಯೋಧ್ಯೆಯ ಶ್ರೀರಾಮ ಪ್ರಾಣ ಪ್ರತಿಷ್ಠೆಯ ದಿನ 22ರಂದು ಬೆಳಗ್ಗೆ 10 ಗಂಟೆಗೆ ಎಲ್ಲರೂ ಅವರವರ ಗ್ರಾಮದ ದೇವಾಲಯಕ್ಕೆ ಹೋಗಿ ರಾಮನಾಮ ಜಪದೊಂದಿಗೆ ಪೂಜೆ ಸಲ್ಲಿಸಬೇಕು. ಪ್ರಾಣ ಪ್ರತಿಷ್ಠೆಯ ನೇರ ಪ್ರಸಾರವನ್ನು ದೂರದರ್ಶನದ ಮೂಲಕ ದೇವಸ್ಥಾನಗಳಲ್ಲಿ ಪ್ರಸಾರ ಮಾಡಬೇಕು. ಸಂಜೆ ಸೂರ್ಯಾಸ್ತಮದ ನಂತರ ಪ್ರತಿ ಮನೆಯಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ಹಣತೆಯನ್ನು ಹಚ್ಚಬೇಕು. ಆ ದಿನವನ್ನು ದೀಪಾವಳಿಯ ರೀತಿಯಲ್ಲಿ ಆಚರಣೆ ಮಾಡಬೇಕು.ಉತ್ತರಾಭಿಮುಖವಾಗಿ ಒಂದು ದೀಪವನ್ನು ಹಿಡಿದು ಶ್ರೀರಾಮಚಂದ್ರನಿಗೆ ಆರತಿ ಬೆಳಗಬೇಕು. ಮನೆಯ ಮುಖ್ಯದ್ವಾರದ ಎದುರಿನಲ್ಲಿ ನಿಂತು ಮನೆಯ ಯಜಮಾನ ಪಡೆದುಕೊಂಡ ಅಕ್ಷತೆಯ ಕಾಳನ್ನು ಕುಟುಂಬ ಸದಸ್ಯರ ತಲೆಗೆ ಪ್ರೋಕ್ಷಣೆ ಮಾಡಬೇಕು. ನಂತರ ಸದಸ್ಯರು ಪ್ರೋಕ್ಷಣೆ ಮಾಡಿದವರ ಕಾಲು ಹಿಡಿದು ಶ್ರೀರಾಮನ ಆಶೀರ್ವಾದ ಪಡೆಯಬೇಕು. ಮಂತ್ರಾಕ್ಷತೆ ತರುವ ಕಾರ್ಯಕರ್ತರಿಗೆ ಹೂವುಗಳನ್ನು ಹಾಕಿ ಗೌರವದಿಂದ ಸ್ವಾಗತಿಸಬೇಕು ಎಂದು ಟ್ರಸ್ಟ್ ಮತ್ತು ವಿಎಚ್‌ಪಿ ಕೋರಿಕೊಂಡಿದೆ.

Share this article