ಮಂಗಳೂರಿನ ಕದ್ರಿ ದೇವಸ್ಥಾನದಲ್ಲಿ ಯುವಕನ ಹುಚ್ಚಾಟ

KannadaprabhaNewsNetwork |  
Published : Jul 10, 2024, 12:40 AM IST
ಕದ್ರಿ ದೇವಸ್ಥಾನದಲ್ಲಿ ಯುವಕನ ಹುಚ್ಚಾಟ | Kannada Prabha

ಸಾರಾಂಶ

ಮಂಗಳವಾರ ಬೆಳಗ್ಗೆ ಯುವಕನೊಬ್ಬ ನೇರ ಬೈಕ್ ಚಲಾಯಿಸಿಕೊಂಡು ಕದ್ರಿ ದೇವಸ್ಥಾನದ ಪ್ರಾಂಗಣ ಪ್ರವೇಶಿಸಿದ್ದಾನೆ. ಬಳಿಕ ದೇವಸ್ಥಾನದ ಒಳಗೆ ಪ್ರವೇಶ ಮಾಡಿ ರಂಪಾಟ ಮಾಡಿದ್ದಾನೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನ ಪ್ರಸಿದ್ಧ ಪುಣ್ಯಕ್ಷೇತ್ರ ಕದ್ರಿ ಶ್ರೀಮಂಜುನಾಥನ ಸನ್ನಿಧಿಯಲ್ಲಿ ಮಂಗಳವಾರ ಯುವಕನೊಬ್ಬ ಹುಚ್ಚಾಟ ನಡೆಸಿದ ಘಟನೆ ನಡೆದಿದೆ. ಮಂಗಳವಾರ ಬೆಳಗ್ಗೆ ಯುವಕನೊಬ್ಬ ನೇರ ಬೈಕ್ ಚಲಾಯಿಸಿಕೊಂಡು ಕದ್ರಿ ದೇವಸ್ಥಾನದ ಪ್ರಾಂಗಣ ಪ್ರವೇಶಿಸಿದ್ದಾನೆ. ಬಳಿಕ ದೇವಸ್ಥಾನದ ಒಳಗೆ ಪ್ರವೇಶ ಮಾಡಿ ರಂಪಾಟ ಮಾಡಿದ್ದಾನೆ. ಅಣ್ಣಪ್ಪ ಸ್ವಾಮಿಯ ಗುಡಿಯ ಮುಂದೆ ಕಾಲಿನಿಂದ ಬಾಗಿಲು ಒದ್ದು ಅಪಚಾರ ಕೂಡ ಎಸಗಿದ್ದಾನೆ. ಅಲ್ಲಿಂದ ಮಹಡಿಗೆ ಹೋಗಿ ಹಂಚಿನ ಮಾಡಿಗೆ ಬಂದಿದ್ದಾನೆ. ಅದರ ಎದುರು ಭಾಗದ ಚಪ್ಪರ ಮಾದರಿಯ ಮರದ ಹಲಗೆಯ ಮೇಲ್ಗಡೆಗೆ ನಿಂತು ಅದನ್ನು ಕೈಯಲ್ಲಿದ್ದ ಹರಿತ ಆಯುಧದಲ್ಲಿ ತಿವಿಯಲು ಮುಂದಾಗಿದ್ದಾನೆ.

ಆ ಎಲ್ಲ ಅವಾಂತರ ನಡುವೆ ಕೂಡಲೇ ಅರ್ಚಕರು ಗರ್ಭಗುಡಿಯ ಬಾಗಿಲು ಹಾಕಿದ್ದಾರೆ. ಆತನನ್ನು ಪ್ರಶ್ನಿಸಿದ ಅರ್ಚಕರ ಮೇಲೂ ಹಲ್ಲೆಗೆ ಯತ್ನಿಸಿ ಹುಚ್ಚಾಟ ನಡೆಸಿದ್ದಾನೆ. ಮಾತ್ರವಲ್ಲ ದೈವಸ್ಥಾನದ ಬಳಿ ಇದ್ದ ಕತ್ತಿಯನ್ನು ಕೈಗೆತ್ತಿಕೊಂಡು ಹುಚ್ಚಾಟ ನಡೆಸಿದ್ದು, ಅಷ್ಟರಲ್ಲಿ ಅಲ್ಲಿದ್ದವರು ಥಳಿಸಿ ಆತನ ಕೈಕಾಲನ್ನು ಹಗ್ಗದಿಂದ ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಿಸಿದಾಗ ಆತ ಉಳ್ಳಾಲದ ಧರ್ಮನಗರ ನಿವಾಸಿ ಸುಧಾಕರ ಆಚಾರ್ಯ (31) ಎಂದು ಹೇಳಿದ್ದಾನೆ. ವಿಚಾರಣೆ ವೇಳೆ ಆತನ ತಾಯಿ ಕೂಡ ಠಾಣೆಗೆ ಬಂದಿದ್ದು, ಆತನಿಗೆ ಮಾನಸಿಕ ಸಮಸ್ಯೆ ಇರುವುದಾಗಿ ತಿಳಿಸಿದ್ದಾರೆ. ಆತ ತನ್ನ ಅಣ್ಣನ ಬೈಕ್‌ನ್ನು ತೆಗೆದುಕೊಂಡು ಬಂದಿದ್ದಾಗಿ ತಾಯಿ ಹೇಳಿದ್ದಾರೆ. ಈತ ಈ ಹಿಂದೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಧರ್ಮಸ್ಥಳ ಮಂಜುನಾಥ ದೇವಸ್ಥಾನದಲ್ಲೂ ಇದೇ ರೀತಿ ಮಾಡಿದ್ದಾನೆ ಎಂಬ ಮಾಹಿತಿ ತಿಳಿದುಬಂದಿದೆ. ಈ ಬಗ್ಗೆ ಕಾನೂನು ತಜ್ಞರ ಜೊತೆ ಪರಿಶೀಲಿಸಿ ಕೇಸು ದಾಖಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಈತನ ಹುಚ್ಚಾಟದ ವಿಡಿಯೋ ಜಾಲತಾಣದಲ್ಲಿ ವೈರಲ್‌ ಆಗಿದೆ.

ಘಟನೆ ಬಗ್ಗೆ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಮ್ಮ ಕದ್ರಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸ್‌ ಠಾಣೆಯಲ್ಲೂ ಆರೋಪಿ ವಿಚಿತ್ರವಾಗಿ ವರ್ತಿಸಿದ್ದಾನೆ. ಪೊಲೀಸರು ಆರೋಪಿಯ ಪೂರ್ವಾಪರ ವಿಚಾರಿಸಿದ್ದು, ಆತನ ಮಾನಸಿಕ ಕಾಯಿಲೆಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ಬಳಿ ಕೂಡ ಮಾಹಿತಿ ಪಡೆದುಕೊಂಡಿದ್ದಾರೆ. ಆತ ಬಳಸುತ್ತಿರುವ ಮಾತ್ರೆಗಳನ್ನು ಪರಿಶೀಲಿಸಿದ್ದು, ಪೊಲೀಸರ ವಶದಲ್ಲೇ ಆತನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತನ ಡ್ರಗ್‌ ಟೆಸ್ಟ್‌ ಮಾಡಲಾಗಿದ್ದು, ಅದರಲ್ಲಿ ನೆಗೆಟಿವ್‌ ಬಂದಿದೆ ಎನ್ನಲಾಗಿದೆ.

ಹುಚ್ಚಾಟ ನಡೆಸಿದವರ ಬಗ್ಗೆ ನಮಗೆ ಮೊದಲು ಮಾಹಿತಿ ಇಲ್ಲ. ಆತ ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಬೇಕು. ಕಳೆದ ಸಾರಿ ಇದ್ದ ಸೆಕ್ಯುರಿಟಿ ಏಜೆನ್ಸಿಯನ್ನು ಬದಲಾವಣೆ ಮಾಡಿ ಬೇರೆಯವರನ್ನು ಹಾಕಿದ್ದೇವೆ. ಘಟನೆ ಬಳಿಕ ದೇವಸ್ಥಾನ ಶುದ್ದೀಕರಣ ಮಾಡಲಾಗಿದೆ ಎಂದು ಜಯಮ್ಮ ಸುದ್ದಿಗಾರರಿಗೆ ತಿಳಿಸಿದ್ದಾರೆ.

ದೇವಸ್ಥಾನದಲ್ಲಿ ಭದ್ರತಾ ಲೋಪ?ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭದ್ರತಾ ವ್ಯವಸ್ಥೆ ಇದ್ದರೂ ಮಂಗಳವಾರ ಯುವಕನೊಬ್ಬ ಬೈಕ್‌ನಲ್ಲಿ ನೇರವಾಗಿ ಪ್ರವೇಶಿಸುವ ಮೂಲಕ ಹುಚ್ಟಾಟ ನಡೆಸಿರುವುದರ ಹಿಂದೆ ಭದ್ರತಾ ಲೋಪದ ಬಗ್ಗೆ ಆರೋಪ ಕೇಳಿಬರುತ್ತಿದೆ.ಈ ಘಟನೆ ಬೆಳಗ್ಗೆ ನಡೆದಿದ್ದು, ಆ ವೇಳೆಗೆ ಯಾರೂ ಭದ್ರತಾ ಸಿಬ್ಬಂದಿ ಕರ್ತವ್ಯಕ್ಕೆ ಆಗಮಿಸಿರಲಿಲ್ಲ ಎನ್ನಲಾಗಿದೆ. ಸಾಮಾನ್ಯವಾಗಿ ಇಲ್ಲಿ ದೇವಸ್ಥಾನದ ಅಂಗಣ ಪ್ರವೇಶಿಸಬೇಕಾದರೆ ಲೋಹಶೋಧಕ ಯಂತ್ರ ಅಳವಡಿಸಲಾಗಿದೆ. ಅಲ್ಲದೆ ಭದ್ರತಾ ಸಿಬ್ಬಂದಿ ಕೂಡ ತಪಾಸಣೆ ನಡೆಸಿಯೇ ಒಳಗೆ ಬಿಡಬೇಕು ಎಂಬ ನಿಯಮ ಇದೆ. ಆದರೆ ಇದನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿಲ್ಲ ಎಂಬ ದೂರು ಭಕ್ತರಿಂದ ವ್ಯಕ್ತವಾಗಿದೆ. ಹೀಗಾಗಿ ಯಾರು, ಯಾವಾಗ ಬೇಕಾದರೂ ದೇವಸ್ಥಾನಕ್ಕೆ ಬರುವಂತಾಗಿದೆ ಎಂದು ಆರೋಪಿಸಲಾಗಿದೆ.

2022ರ ನವಂಂಬರ್‌ 21ರಂದು ನಾಗೂರಿ ಗರೋಡಿ ಸಮೀಪ ಆಟೋರಿಕ್ಷಾದಲ್ಲಿ ಕುಕ್ಕರ್‌ ಬಾಂಬ್‌ ತೆಗೆದುಕೊಂಡು ಬಂದಿದ್ದ ಶಿವಮೊಗ್ಗ ಮೂಲದ ಮೊಹಮ್ಮದ್‌ ಶಾರೀಕ್‌ ಎಂಬಾತನ ಗುರಿಯೂ ಕದ್ರಿ ದೇವಸ್ಥಾನ ಆಗಿತ್ತು ಎಂಬುದು ತನಿಖೆ ವೇಳೆ ಕಂಡುಬಂದ ಸಂಗತಿ. ಕದ್ರಿ ದೇವಸ್ಥಾನಕ್ಕೆ ಉಗ್ರರ ಕರಿನೆರಳು ಬಿದ್ದಿರುವುದು ಕೂಡ ಭಕ್ತಾದಿಗಳ ಆತಂಕಕ್ಕೆ ಕಾರಣವಾಗಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ