ಗದಗ: ಇಂದಿನ ಯುವ ಪೀಳಿಗೆಯಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಇಲ್ಲದಿರುವುದು ಶೋಚನೀಯ. ಸಾಂಸ್ಕೃತಿಕ ಪ್ರೀತಿ ಇರುವವರಲ್ಲಿ ಸಂಸ್ಕಾರ ಹುಟ್ಟಿ ಸಮಾಜದಲ್ಲಿ ಸೌಹಾರ್ದ ವಾತಾವರಣ ಮೂಡಲು ಸಾಧ್ಯವಾಗುತ್ತದೆ. ಆದರೆ ಯುವ ಜನಾಂಗ ಸದಭಿರುಚಿಗಿಂತ ಅಪರಾಧಿ ಪ್ರವೃತ್ತಿಯತ್ತ ಒಲವು ತೋರುತ್ತಿರುವುದು ಆಘಾತಕಾರಿ ಬೆಳವಣಿಗೆ ಎಂದು ಸಾಹಿತಿ ಡಿ.ವಿ. ಬಡಿಗೇರ ಹೇಳಿದರು.
ಅವರು ನಗರದಲ್ಲಿ ಕಬ್ಬಿಗರಕೂಟ ಹಮ್ಮಿಕೊಂಡಿದ್ದ ಪ್ರಹಸನ ಪಿತಾಮಹ ಟಿ.ಪಿ. ಕೈಲಾಸಂ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಕೈಲಾಸಂ ಬದುಕು ಬರಹ ಕುರಿತು ಮಾತನಾಡಿದರು.ನಾಟಕ ಸಾಹಿತ್ಯ ಮತ್ತು ರಂಗಭೂಮಿಯಲ್ಲಿ ಹೊಸತನ ಸಾಧಿಸುವ ಗೀಳಿನಿಂದ ಟಿ.ಪಿ. ಕೈಲಾಸಂ ಲಾಭದಾಯಕ ಸರ್ಕಾರಿ ನೌಕರಿ ತೊರೆದು ನಾಟಕ ರಚನೆ ಹಾಗೂ ರಂಗ ಪ್ರಯೋಗದಲ್ಲಿ ತಮ್ಮ ಜೀವನ ಸವೆಸಿದರು. ನಗೆಯ ಮೂಲಕ ಕನ್ನಡ ರಂಗಭೂಮಿಗೆ ಹೊಸ ಆಯಾಮ ನೀಡಿದರು. ಕನ್ನಡಕ್ಕೆ ಒಬ್ಬನೇ ಕೈಲಾಸಂ ಎಂಬ ಮಾತಿಗೆ ತಕ್ಕಂತೆ ಕನ್ನಡ ನಾಟಕ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಇಂದಿಗೂ ಅನನ್ಯ. ಇಂತಹ ಸಾಧಕರ ಸಾಧನೆ ಹಾಗೂ ಕೊಡುಗೆ ನೆನೆಯುವುದು ಕನ್ನಡಿಗರ ಆದ್ಯ ಕರ್ತವ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಬ್ಬಿಗರಕೂಟದ ಅಧ್ಯಕ್ಷ ನ್ಯಾ. ಮನೋಹರ ಮೇರವಾಡೆ ಮಾತನಾಡಿ, ಕಬ್ಬಿಗರ ಕೂಟ ಮರೆತು ಹೋದ ಸಾಹಿತ್ಯ ಸಾಧಕರ ಬಗ್ಗೆ ಕಾರ್ಯಕ್ರಮ ನಡೆಸುವ ಮೂಲಕ ಗದಗ ಪರಿಸರದಲ್ಲಿ ಸಾಹಿತ್ಯ ಚಳವಳಿ ಹುಟ್ಟು ಹಾಕಿದೆ ಎಂದರು.ಕೈಲಾಸಂ ಅವರ ಕಥಾ ಸಾಹಿತ್ಯ ಕುರಿತು ಕಥೆಗಾರ ಬಸವರಾಜ ಗಣಪ್ಪನವರ ಮಾತನಾಡಿ, ಕೈಲಾಸಂ ಮನೆಮಾತು ತಮಿಳು ಆದರೂ ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಅನನ್ಯ. ಬರೆದದ್ದು ಐದೇ ಕತೆಗಳಾದರೂ ಕೈಲಾಸಂ ಅವರ ವಿಡಂಬನಾ ಶೈಲಿಯಿಂದ ಕನ್ನಡ ಕಥಾ ಪ್ರಪಂಚದಲ್ಲಿ ಹೊಸ ಪ್ರಯೋಗ ನಡೆಸಿದರೆಂದು ಹೇಳಿದರು.
ಕವಿಗಳಾದ ವಿ.ಎಂ. ಪವಾಡಿಗೌಡರು, ಬಿ.ಎಸ್. ಹಿಂಡಿ, ವಿಶ್ವನಾಥ ಬಡಿಗೇರ, ಯು.ಎಸ್. ಹೊಂಬಳ ಮುಂತಾದವರು ಕೈಲಾಸಂ ಅವರ ಬಗ್ಗೆ ಕವನ ವಾಚಿಸಿದರು.ಕಾರ್ಯಕ್ರಮದಲ್ಲಿ ರತ್ನಕ್ಕ ಪಾಟೀಲ, ವಿ.ಎಂ. ಪವಾಡಿಗೌಡರ, ಜಗನ್ನಾಥ ಟಿಕಣದಾರ, ಎಂ.ವಿ. ಕೆಂಬಾವಿಮಠ, ಜಿ.ಎಸ್. ಹೊಂಬಳ, ಪಿ.ಟಿ. ನಾರಾಯಣಪೂರ, ಯು.ಎಸ್. ಹೊಂಬಳ, ವಿಶ್ವನಾಥ ಬಡಿಗೇರ, ದೀಪಕ ಮೇರವಾಡೆ ಮುಂತಾದವರು ಇದ್ದರು. ನಜೀರ ಸಂಶಿ ಸ್ವಾಗತಿಸಿದರು. ಬಿ.ಎಸ್. ಹಿಂಡಿ ವಂದಿಸಿದರು.