ಕನ್ನಡಪ್ರಭ ವಾರ್ತೆ ಬೇಲೂರುತಾಲೂಕಿನ ಅರೇಹಳ್ಳಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಕಾರ್‌ನಲ್ಲಿ ಬಂದ ನಾಲ್ವರು ತಂದೆಯ ಎದುರಲ್ಲೇ ಮಗಳನ್ನು ಕಿಡ್ನಾಪ್ ಮಾಡಿದ್ದಲ್ಲದೆ ಕಾರನ್ನು ತಡೆದು ನಿಲ್ಲಿಸಲು ಹೋಗಿ ಡೋರ್‌ನಲ್ಲಿ ನೇತಾಡುತ್ತಿದ್ದ ತಂದೆಯನ್ನು ಸಹ ರಸ್ತೆಯುದ್ದಕ್ಕೂ ಎಳೆದೊಯ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಮಂಗಳವಾರ ಬೆಳಿಗ್ಗೆ ಪಟ್ಟಣದ ಹೈಸ್ಕೂಲ್ ಮುಂಭಾಗ ತಂದೆ ಮಗಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಸ್ನೇಹಿತರೊಂದಿಗೆ ಕಾರ್‌ನಲ್ಲಿ ಬಂದ ಹುಡುಗ ಹುಡುಗಿಯನ್ನು ತನ್ನ ಕಾರಿನೊಳಗೆ ಎಳೆದೊಯ್ದು ಚಲಾಯಿಸಲು ಮುಂದಾಗಿದ್ದಾನೆ. ಈ ವೇಳೆ ಪಕ್ಕದಲ್ಲೇ ಇದ್ದ ತಂದೆ ಕಾರನ್ನು ತಡೆದು ನಿಲ್ಲಿಸಲು ಹೋಗಿದ್ದಾರೆ, ಆದರೆ ಕಠೋರ ಮನಸ್ಸಿನ ಯುವಕ ಕಾರನ್ನು ನಿಲ್ಲಿಸದೆ ಕಾರಿನ ಡೋರ್‌ನಲ್ಲಿ ನೇತಾಡುತ್ತಿದ್ದ ಯುವತಿಯ ತಂದೆಯ ಜೊತೆಗೆ ಅತಿ ವೇಗದಲ್ಲಿ ಸುಮಾರು 200 ಮೀಟರ್ ಪೊಲೀಸ್ ಠಾಣೆ ವೃತ್ತದವರೆಗೂ ಎಳೆದೊಯ್ದುದ್ದಾನೆ. ನಂತರ ಯುವತಿಯ ತಂದೆ ವೃತ್ತದ ತಿರುವಿನಲ್ಲಿ ಕಾರ್ ಡೋರಿನಿಂದ ಆಯತಪ್ಪಿ ನೆಲಕ್ಕೆ ಬಿದ್ದಾಗ ಸಣ್ಣಪುಟ್ಟ ಗಾಯಗಳಾಗಿವೆ.ಚನ್ನರಾಯಪಟ್ಟಣ ಮೂಲದ ಯುವಕ, ಕೆಲ ತಿಂಗಳ ಹಿಂದೆ ಅರೇಹಳ್ಳಿ ಸಮೀಪದ ಹುಡುಗಿಯನ್ನು ಪ್ರೀತಿಸಿ ಪೋಷಕರ ನಿರಾಕರಣೆಯೊಂದಿಗೆ ಮದುವೆ ಆಗಿದ್ದ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಮಗಳನ್ನು ಒಪ್ಪಿಸಿ ಹುಡುಗನ ಮನೆಯಿಂದ ಪೋಷಕರು ಮನೆಗೆ ವಾಪಸ್ ಕರೆ ತಂದಿದ್ದರು. ನಂತರ ಪತಿ ತನ್ನ ಪತ್ನಿಯನ್ನು ಮರಳಿ ಕರೆತರಲು ಎಲ್ಲಾ ತಯಾರಿ ನಡೆಸಿ ಇಂದು ಮಾವನನ್ನೇ ಬಲಿ ಪಡೆಯಬಹುದಾದ ಅತ್ಯಂತ ಅಪಾಯಕಾರಿ ದುಷ್ಕೃತ್ಯ ಎಸಗಿದ್ದಾನೆ.
ಯುವತಿಯ ತಂದೆಯ ಪ್ರಾಣಕ್ಕೆ ಕುತ್ತು ತಂದ ಇಂಥಹ ಅಪಾಯಕಾರಿ ದೃಶ್ಯವನ್ನೂ ರಸ್ತೆಯುದ್ದಕ್ಕೂ ನೋಡುತ್ತಿದ್ದ ಸಾರ್ವಜನಿಕರು ಒಂದು ಕ್ಷಣ ದಿಗ್ಬ್ರಾಂತರಾಂತರಾಗಿದ್ದರು. ಅಲ್ಲದೆ ರಸ್ತೆಯುದ್ದಕ್ಕೂ ಮಾನವೀಯತೆ ಮರೆತು ಮೃಗಗಳಂತೆ ವರ್ತಿಸಿ ದುಷ್ಕೃತ್ಯ ಎಸಗಲು ಮುಂದಾದ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದು ಕಂಡುಬಂತು.ಫೋಟೋಮಗಳನ್ನು ಅಪಹರಿಸಿಕೊಂಡು ಕಾರ್ ತಡೆಯಲು ಯತ್ನಿಸಿ ತೆರೆದ ಕಾರಿನ ಡೋರ್‌ನಲ್ಲಿ ತಂದೆ ನೇತಾಡುತ್ತಿರುವುದು ಸಿಸಿ ಕ್ಯಾಮರದಲ್ಲಿ ಸೆರೆ ಆಗಿರುವುದು.