ಶಿರಸಿ:ರಸ್ತೆ ಅಪಘಾತದ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸಲು ವಿಶೇಷ ಸಪ್ತಾಹವನ್ನು ನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ಉದ್ಘಾಟಿಸಲಾಯಿತು.ಉತ್ತರ ಕನ್ನಡ ಜಿಲ್ಲಾ ಪೊಲೀಸ್, ಶಿರಸಿ ಉಪವಿಭಾಗ, ಆರ್‌ಟಿಒ ಇಲಾಖೆ, ಭಾರತೀಯ ವೈದ್ಯಕೀಯ ಸಂಘ, ರೋಟರಿ ಕ್ಲಬ್, ಇನ್ನರ್ ವೀಲ್ ಕ್ಲಬ್ ಸಹಯೋಗದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಸಾರ್ವಜನಿಕ ಜಾಗೃತಿ ಅಭಿಯಾನದಲ್ಲಿ ಡಾ. ದಿನೇಶ ಹೆಗಡೆ ಪಿಪಿಟಿ ಮೂಲಕ ಮಾಹಿತಿ ನೀಡಿದರು.ಬಳಿಕ ಮಾತನಾಡಿದ ಅವರು, ಅತಿ ವೇಗದ ಚಾಲನೆಯಿಂದ ರಸ್ತೆ ಅಪಘಾತ ಸಂಭವಿಸಿ, ಸಾವು ಉಂಟಾಗುತ್ತಿದೆ. ಇದರಲ್ಲಿ ಯುವಕರು ಬಲಿಯಾಗುತ್ತಿರುವುದು ವಿಷಾದನೀಯ. ಸಾಕಷ್ಟು ಅಪಘಾತದಲ್ಲಿ ತಲೆಗೆ ಪೆಟ್ಟು ಬಿದ್ದು ಸಾವನ್ನಪ್ಪಿಸುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದ್ದು, ಬೈಕ್ ಸವಾರ, ಹಿಂಬದಿ ಸವಾರ ಹೆಲ್ಮೆಟ್ ಧರಿಸಬೇಕು. ೨ರಿಂದ ೫ ವರ್ಷಕ್ಕೆ ಹೆಲ್ಮೆಟ್ ಬದಲಾಯಿಸಬೇಕು ಎಂದರು.ಕಾರಿನಲ್ಲಿ ಪ್ರಯಾಣಿಸುವವರು ಸೀಟ್ ಬೆಲ್ಟ್ ಹಾಕಬೇಕು. ಇದರಿಂದ ಪ್ರೊಟೆಕ್ಟಿವ್ ಏರ್ ಬ್ಯಾಗ್ ಓಪನ್ ಆಗಲಿದೆ. ರಸ್ತೆಯಲ್ಲಿ ಅಳವಡಿಸಿದ ಸೂಚನಾ ಫಲಕ ಗಮನಿಸಿ, ವಾಹನ ಚಲಾಯಿಸಬೇಕು ಸೇರಿದಂತೆ ರಸ್ತೆ ಸುಕ್ಷತೆಯ ಕುರಿತು ಮಾಹಿತಿ ನೀಡಿದರು.ಇದೇ ವೇಳೆ ಆಟೋ ಚಾಲಕರಿಗೆ ಮತ್ತು ಮಾರಿಕಾಂಬಾ ಲೈಫ್‌ಗಾರ್ಡ್ ಸಿಬ್ಬಂದಿಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆ ವಿತರಿಸಲಾಯಿತು.ಸಂಚಾರ ನಿಯಮಗಳ ಕಾನೂನಿನ ಕುರಿತು ನಗರಠಾಣೆ ಪಿಎಸ್‌ಐ ನಾಗಪ್ಪ ಬಿ. ತಿಳಿವಳಿಕೆ ನೀಡಿದರು. ರಸ್ತೆ ಸುರಕ್ಷತೆಯ ಕುರಿತು ಮಾರುಕಟ್ಟೆ ಠಾಣೆ ಪಿ.ಎಸ್.ಐ ರಾಜಕುಮಾರ ಉಕ್ಕಲಿ ಪ್ರತಿಜ್ಞಾ ವಿಧಿ ಬೋಧಿಸಿದರು. ಸಾಧಾರಣ ಹಾಗೂ ಗುಣಮಟ್ಟದ ಹೆಲ್ಮೆಟ್ ಕುರಿತು ಪೊಲೀಸರು ಮಾಹಿತಿ ನೀಡಿದರು.
ಶಿರಸಿ ಡಿಎಸ್‌ಪಿ ಕೆ.ಎಲ್. ಗಣೇಶ ಉದ್ಘಾಟಿಸಿದರು. ಸಿಪಿಐ ರಾಮಚಂದ್ರ ನಾಯಕ ಪ್ರಾಸ್ತಾವಿಕ ಮಾತನಾಡಿದರು. ಆರ್‌ಟಿಒ ಇನ್‌ಸ್ಪೆಕ್ಟರ್ ಶಂಕರ ಕುಲಕರ್ಣಿ, ಐ.ಎಂ.ಎ ಅಧ್ಯಕ್ಷ ಡಾ. ಮಧುಕೇಶ್ವರ ಜಿ.ವಿ, ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ ಹೆಗಡೆ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಪುಷ್ಪಲತಾ ಭಟ್ಟ, ಡಾ. ಮಮತಾ ಹೆಗಡೆ ಉಪಸ್ಥಿತರಿದ್ದರು. ಪೊಲೀಸ್ ಸಿಬ್ಬಂದಿ ರಮೇಶ ಮುಚ್ಚಂಡಿ ನಿರೂಪಿಸಿದರು. ಐ.ಎಂ.ಎ ಕಾರ್ಯದರ್ಶಿ ಡಾ. ಸುಮನ್ ಹೆಗಡೆ ಇದ್ದರು.