- ಎಂಕೆಸಿಪಿಎಂ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನಾಚರಣೆ ಉದ್ಘಾಟನೆ
ನರಸಿಂಹರಾಜಪುರ: ಹದಿಹರೆಯದವರು ಎಚ್.ಐ.ವಿ.ಸೋಂಕಿನ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಆರ್.ಎಸ್.ಜಿತು ತಿಳಿಸಿದರು.ಸೋಮವಾರ ಪಟ್ಟಣದ ಎಂಕೆಸಿಪಿಎಂ ಪದವಿ ಪೂರ್ವ ಕಾಲೇಜಿನಲ್ಲಿ ಆರೋಗ್ಯ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ, ರೋಟರಿ ಕ್ಲಬ್, ಪಟ್ಟಣ ಪಂಚಾಯಿತಿ ಹಾಗೂ ಎಂಕೆಸಿಪಿಎಂ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿ ವರ್ಷ ಡಿ.1 ರಂದು ವಿಶ್ವದಾದ್ಯಂತ ವಿಶ್ವ ಏಡ್ಸ್ ದಿನಾಚರಣೆ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮದ ಮೂಲಕ ಏಡ್ಸ್ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸ ಲಾಗುತ್ತಿದೆ. ಎಚ್.ಐವಿ ಸೋಂಕಿತರಲ್ಲಿ ಶೇ.40 ರಷ್ಟು ಜನರು ಹದಿ ಹರೆಯದವರಾಗಿದ್ದಾರೆ ಎಂಬುದು ಆತಂಕಕಾರಿ ವಿಚಾರವಾಗಿದೆ.
ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಎಚ್.ಐ.ವಿ. ಸೋಂಕು ಹೆಚ್ಚಾಗಿ ಹರಡುತ್ತದೆ. ಹದಿ ಹರೆದವರು ಕುತೂಹಲದಿಂದ ಅಸುರಕ್ಷಿತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಲುವುದರಿಂದ ಎಚ್.ಐ.ವಿ.ಸೋಂಕು ಹೆಚ್ಚಾಗಿ ಹದಿಹರೆಯದವರಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಯಾಗಿದೆ ಎಂದರು.ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ.ನರಸಿಂಹಮೂರ್ತಿ ಮಾತನಾಡಿ,ಈ ವರ್ಷ ಎಚ್.ಐ.ವಿ. ಏಡ್ಸ್ ನಿಯಂತ್ರಿಸಲು ಇರುವ ಅಡೆ ತಡೆಗಳನ್ನು ಕೊನೆಗಾಣಿಸೋಣ ಎಂಬ ಘೋಷಣೆಗಳೊಂದಿಗೆ ವಿಶ್ವ ಏಡ್ಸ್ ದಿನಾಚರಣೆ ಆಚರಿಸಲಾಗುತ್ತಿದೆ. ಏಡ್ಸ್ ಮಾರಾಣಾಂತಿಕ ಕಾಯಿಲೆಯಾಗಿದ್ದು ಚಿಕಿತ್ಸೆ ಇಲ್ಲದ ಕಾಯಿಲೆಯಾಗಿದೆ. ಎಚ್.ಐ.ವಿ. ಸೋಂಕಿನಿಂದ ಏಡ್ಸ್ ಕಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.ಅಸುರಕ್ಷಿತ ಲೈಂಗಿಕ ಕ್ರಿಯೆ, ಸಂಸ್ಕರಿಸದೆ ಇರುವ ಸೂಜಿಯ ಮರು ಬಳಕೆ, ಎಚ್.ಐ.ವಿ.ಸೋಂಕಿತ ರಕ್ತವನ್ನು ಪಡೆಯುವುದರಿಂದ, ಎಚ್.ಐ.ವಿ.ಪೀಡಿತ ತಾಯಿಯಿಂದ ಮಗುವಿಗೆ ಏಡ್ಸ್ ರೋಗ ಹರಡುತ್ತದೆ ಎಂದರು.
ವಕೀಲ ವಿದ್ವತ್ ಗೌಡ ಕಾನೂನಿನ ಬಗ್ಗೆ ಉಪನ್ಯಾಸ ನೀಡಿದರು. ಸಭೆ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಪದ್ಮರಮೇಶ್ ವಹಿಸಿದ್ದರು. ಸಭೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದ, ವಕೀಲರ ಸಂಘದ ಅಧ್ಯಕ್ಷ ಜಯಪ್ರಕಾಶ್, ಸರ್ಕಾರಿ ಸಹಾಯಕ ಅಭಿಯೋಜಕ ಜಿ.ಡಿ.ನೇಕಾರ್, ರೋಟರಿ ಕ್ಲಬ್ ಅಧ್ಯಕ್ಷ ಕಣಿವೆ ವಿನಯ್, ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ವಿದ್ಯಾನಂದಕುಮಾರ್, ನಮ್ಮ ಕ್ಲಿನಿಕ್ ವೈದ್ಯಾಧಿಕಾರಿ ಡಾ.ಕ್ಷಮಾ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ. ಬೇಬಿ, ಆರೋಗ್ಯ ಇಲಾಖೆಯ ಸುಜಾತಾ, ಡೈಸಿ ಇದ್ದರು.ಜ್ಞಾನೇಶ್ವರ್ ಸ್ವಾಗತಿಸಿದರು. ನಾಗಲತಾ ವಂದಿಸಿದರು.