ಸ್ಪರ್ಧೆ ಎದುರಿಸಲು ಯುವ ವಿದ್ಯಾರ್ಥಿಗಳು ಸನ್ನದ್ಧರಾಗಬೇಕು

KannadaprabhaNewsNetwork |  
Published : Mar 30, 2026, 01:45 AM IST
ಹಾನಗಲ್‌ನ ಪರಿವರ್ತನ ಕಲಿಕಾ ಕೇಂದ್ರದಲ್ಲಿ ನಡೆದಿರುವ ಸಿಇಟಿ, ನೀಟ್ ಉಚಿತ ತರಬೇತಿ ಶಿಬಿರಕ್ಕೆ ಭೇಟಿ ನೀಡಿ ಶಾಸಕ ಶ್ರೀನಿವಾಸ ಮಾನೆ ಮಾತನಾಡಿದರು. | Kannada Prabha

ಸಾರಾಂಶ

ಹಾನಗಲ್ಲ ವಿಧಾನಸಭಾ ಕ್ಷೇತ್ರದ ಮತದಾರರ ಪ್ರೀತಿ, ವಿಶ್ವಾಸ ಆಶೀರ್ವಾದಕ್ಕೆ ಋಣಿಯಾಗಿ ಇಲ್ಲಿನ ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳ ಭವಿಷ್ಯ ಸದೃಢಗೊಳಿಸಲು ಹಾನಗಲ್‌ನಲ್ಲಿ ಪರಿವರ್ತನ ಕಲಿಕಾ ಕೇಂದ್ರ ತೆರೆದು ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳು, ಯುವಕರನ್ನು ಸಜ್ಜುಗೊಳಿಸುವ ಕೈಂಕರ್ಯಕ್ಕೆ ಮುಂದಾಗಿರುವುದಾಗಿ ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

ಹಾನಗಲ್ಲ: ಹಾನಗಲ್ಲ ವಿಧಾನಸಭಾ ಕ್ಷೇತ್ರದ ಮತದಾರರ ಪ್ರೀತಿ, ವಿಶ್ವಾಸ ಆಶೀರ್ವಾದಕ್ಕೆ ಋಣಿಯಾಗಿ ಇಲ್ಲಿನ ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳ ಭವಿಷ್ಯ ಸದೃಢಗೊಳಿಸಲು ಹಾನಗಲ್‌ನಲ್ಲಿ ಪರಿವರ್ತನ ಕಲಿಕಾ ಕೇಂದ್ರ ತೆರೆದು ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳು, ಯುವಕರನ್ನು ಸಜ್ಜುಗೊಳಿಸುವ ಕೈಂಕರ್ಯಕ್ಕೆ ಮುಂದಾಗಿರುವುದಾಗಿ ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು. ಇಲ್ಲಿನ ಗುರುಭವನದ ಪರಿವರ್ತನ ಕಲಿಕಾ ಕೇಂದ್ರದಲ್ಲಿ ಆಯೋಜಿಸಿರುವ ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗಾಗಿ ಸಿಇಟಿ, ನೀಟ್ ಉಚಿತ ತರಬೇತಿ ಶಿಬಿರದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ತಾಲೂಕಿನ ಮಕ್ಕಳು ಭವಿಷ್ಯದಲ್ಲಿ ಎದುರಾಗುವ ಯಾವುದೇ ಸ್ಪರ್ಧೆಗಳಲ್ಲಿಯೂ ಸಹ ಹಿಂದುಳಿಯಬಾರದು ಎನ್ನುವ ಉದ್ದೇಶದಿಂದ ಪರಿಣಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಗೊಳಿಸಲಾಗುತ್ತಿದೆ. ಕಳೆದ ೩ ವರ್ಷಗಳ ಅವಧಿಯಲ್ಲಿ ಕಲಿಕಾ ಕೇಂದ್ರದಲ್ಲಿ ಒಟ್ಟು ೩,೫೦೦ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಲಾಗಿದೆ. ಇದು ಸ್ಪರ್ಧೆಯ ಯುಗ. ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಸಹ ಸ್ಪರ್ಧೆ ಎನ್ನುವುದು ಮಾಮೂಲಾಗಿದೆ. ನಗರ ಪ್ರದೇಶಗಳ ಮಕ್ಕಳಿಗೆ ಸರಿಸಮನಾಗಿ ನಮ್ಮ ತಾಲೂಕಿನ ಮಕ್ಕಳು ಸಹ ಸ್ಪರ್ಧೆ, ಸವಾಲು ಎದುರಿಸಲು ತಯಾರಾಗಬೇಕಿದೆ. ಈ ಮಹೋನ್ನತ ಉದ್ದೇಶದ ಸಾಕಾರಕ್ಕೆ ಪರಿವರ್ತನ ಕಲಿಕಾ ಕೇಂದ್ರ ಶ್ರಮ ವಹಿಸಿದೆ. ಸಾಧನೆಗೆ ಬಡತನ ಅಡ್ಡಿ ಬರಬಾರದು. ಹಾಗಾಗಿಯೇ ಸಿಇಟಿ, ನೀಟ್, ಸ್ಪರ್ಧಾತ್ಮಕ ಪರೀಕ್ಷೆ, ಎನ್‌ಎಂಎಂಎಸ್, ಎಸ್ಸೆಸ್ಸೆಲ್ಸಿ, ಸ್ಪೋಕನ್ ಇಂಗ್ಲಿಷ್, ಕೌಶಲ್ಯಾಭಿವೃದ್ಧಿ ಹೀಗೆ ವಿದ್ಯಾರ್ಥಿಗಳನ್ನು ಸರ್ವರೀತಿಯಿಂದಲೂ ತರಬೇತಿಗೊಳಿಸಿ ಸ್ಪರ್ಧೆಗೆ ಅಣಿಗೊಳಿಸಲಾಗುತ್ತಿದೆ ಎಂದು ಹೇಳಿದರು. ವಿದ್ಯಾರ್ಥಿಗಳಾದ ಮಣಿಕಂಠ ದೊಡ್ಡಹುಣಸಿಕಟ್ಟಿ, ಗೌತಮಿ ಹುಣಸಿಹಳ್ಳಿ, ಸುಹಾನ ಬಾಳಂಬೀಡ, ನಿಸ್ಸಿ ದೊಡ್ಡಮನಿ, ರಕ್ಷಿತಾ ದೊಡ್ಡಬಡಿಗೇರ ಮಾತನಾಡಿ, ಸಿಇಟಿ, ನೀಟ್ ತರಬೇತಿ ಪಡೆಯಲು ಹೆಚ್ಚು ಹಣ ವ್ಯಯ ಮಾಡಿ ದೂರದ ನಗರ ಪ್ರದೇಶಗಳಿಗೆ ತೆರಳಬೇಕಿತ್ತು. ಆದರೆ ಶಾಸಕ ಶ್ರೀನಿವಾಸ ಮಾನೆ ಅವರು ವಿಶೇಷ ಆಸಕ್ತಿ ವಹಿಸಿ ಬೆಂಗಳೂರಿನ ಪ್ರತಿಷ್ಠಿತ ಆರ್.ವಿ.ಯುನಿವರ್ಸಿಟಿಯ ವಿಷಯ ತಜ್ಞರಿಂದ ಪರಿವರ್ತನ ಕಲಿಕಾ ಕೇಂದ್ರದಲ್ಲಿ ತರಬೇತಿ ದೊರಕಿಸುತ್ತಿದ್ದಾರೆ. ಉಚಿತ ತರಬೇತಿಯಿಂದ ಬಹಳಷ್ಟು ಅನುಕೂಲವಾಗಿದೆ. ಸಮಯ ಶ್ರಮ ಹಣದ ಉಳಿತಾಯವಾಗಿದೆ. ಅಗತ್ಯ ಪುಸ್ತಕ, ಸಾಮಗ್ರಿ, ಪರೀಕ್ಷಾ ಕಿಟ್ ಸಹ ವಿತರಿಸಿರುವುದರಿಂದ ಹಣಕಾಸಿನ ಹೊರೆ ತಪ್ಪಿದೆ. ಕಳೆದ ೩ ವರ್ಷಗಳಿಂದ ಉಚಿತವಾಗಿ ತರಬೇತಿ ಸಿಗುತ್ತಿರುವುದರಿಂದ ವಿದ್ಯಾರ್ಥಿಗಳ ಕನಸು ನನಸಾಗಿದೆ ಎಂದರು. ಕೇಂದ್ರದ ಆಡಳಿತಾಧಿಕಾರಿ ಪ್ರೊ.ಮಾರುತಿ ಶಿಡ್ಲಾಪೂರ ಮಾತನಾಡಿ, ಕಳೆದ ೩ ವರ್ಷಗಳಿಂದ ಕೇಂದ್ರದಲ್ಲಿ ಸಿಇಟಿ, ನೀಟ್ ತರಬೇತಿ ಉಚಿತವಾಗಿ ನೀಡಲಾಗುತ್ತಿದೆ. ಜಾಗತಿಕ ಸ್ಪರ್ಧೆಯ ಎಲ್ಲ ರೀತಿಯ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಆತ್ಮಸ್ಥೈರ್ಯ ವಿದ್ಯಾರ್ಥಿಗಳಲ್ಲಿ ಮೂಡಿಸಲಾಗುತ್ತಿದೆ. ಶಾಸಕ ಶ್ರೀನಿವಾಸ ಮಾನೆ ಅವರು ವಿಶೇಷ ಕಾಳಜಿ ವಹಿಸಿ, ನಗರ ಪ್ರದೇಶಗಳಲ್ಲಿ ಮಾತ್ರ ಸಿಗುವ ಇಂಥ ಅವಕಾಶವನ್ನು ಸ್ಥಳೀಯವಾಗಿ ದೊರಕಿಸುತ್ತಿರುವುದು ತಾಲೂಕಿನ ವಿದ್ಯಾರ್ಥಿಗಳ ಸೌಭಾಗ್ಯ ಎಂದರು. ಪರಿವರ್ತನ ಕಲಿಕಾ ಕೇಂದ್ರದ ನಿರ್ದೇಶಕ ಸಂತೋಷ ಅಪ್ಪಾಜಿ, ವ್ಯವಸ್ಥಾಪಕ ಗಿರೀಶ ಅಂಬಿಗೇರ ಇದ್ದರು.ಕಳೆದ ೩ ವರ್ಷಗಳಿಂದ ಹಾನಗಲ್ ತಾಲೂಕಿನ ವಿದ್ಯಾರ್ಥಿಗಳು, ಯುವಕರಿಗೆ ಪರಿವರ್ತನ ಕಲಿಕಾ ಕೇಂದ್ರದ ಮೂಲಕ ಹಲವು ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸಲಾಗುತ್ತಿದೆ. ಇನ್ನೂ ಹೆಚ್ಚಿನ ಅವಕಾಶ ಸಿಕ್ಕರೆ ಹಾವೇರಿಯಲ್ಲಿ ಇಂಥ ಕೇಂದ್ರ ತೆರೆದು ಇಡೀ ಜಿಲ್ಲೆಯ ವಿದ್ಯಾರ್ಥಿಗಳು, ಯುವಕರನ್ನು ತರಬೇತಿಗೊಳಿಸುವ ಉದ್ದೇಶವಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರಸ್ಪರ ಹೊಂದಾಣಿಕೆ, ಪ್ರೀತಿ ವಿಶ್ವಾಸವೇ ಜೀವನ
ಶಿರಹಟ್ಟಿ ತಾಲೂಕಿನಲ್ಲಿ ಆಲಿಕಲ್ಲು ಮಳೆ, ಬಿರುಗಾಳಿಗೆ ಬೆಂಡಾದ ಬಾಳೆ ಬೆಳೆ