ಮಹದೇವಪ್ಪ ಎಂ. ಸ್ವಾಮಿ
ಸದ್ಯ ಒಂದು ಎಕರೆ ಪ್ರದೇಶದಲ್ಲಿ ಮೊದಲ ಬಾರಿ ಕಟಾವಿಗೆ ೭೫ರಿಂದ ೮೦ ಟನ್ ಬಾಳೆಹಣ್ಣು ಮಾರಾಟಕ್ಕೆ ಬರುತ್ತಿತ್ತು. ಒಮ್ಮೆಲೆ ಕ್ಷಣಾರ್ಧದಲ್ಲಿ ಬಿರುಗಾಳಿ ರಭಸದ ಮಳೆಗೆ ಗಿಡಗಳು ತುಂಡಾಗಿ ಬಿದ್ದಿದ್ದನ್ನು ಕಂಡ ರೈತರಿಗೆ ದಿಕ್ಕು ತೋಚದಂತಾಗಿದೆ. ಕೈತುಂಬಾ ಕಾಸು ಕಾಣುವ ಕನಸು ಕಂಡಿದ್ದ ಬಾಳೆ ಬೆಳೆದ ರೈತರು ಅಕಾಲಿಕ ಆಲಿಕಲ್ಲು ಮಳೆ, ಬಿರುಗಾಳಿ ಸಂಕಷ್ಟ ತಂದೊಡ್ಡಿದೆ. ಭರ್ಜರಿ ದರ ನಿರೀಕ್ಷಿಸಿ ಬಾಳೆ ಬೆಳೆದ ರೈತರ ಪಾಲಿಗೆ ಏಕಾಏಕಿ ಸುರಿದ ರಭಸದ ಮಳೆ ದುಃಸ್ವಪ್ನವಾಗಿದೆ.ಬೀಜ, ಗೊಬ್ಬರ, ರಾಸಾಯನಿಕ ಔಷಧಿ ಸಿಂಪರಣೆ, ಕಳೆ, ಆಳು ಎಲ್ಲ ರೀತಿಯ ಖರ್ಚು ವೆಚ್ಚ ಮಾಡಿ ವಿದ್ಯುತ್ ಕಣ್ಣಾಮುಚ್ಚಾಲೆ, ಕೊಳವೆಬಾವಿ ನೀರಿನ ಪ್ರಮಾಣ ಕಡಿಮೆ, ಹೀಗೆ ಒಂದಲ್ಲ ಹತ್ತಾರು ಸಮಸ್ಯೆ ನಡುವೆ ಲಕ್ಷಾಂತರ ಹಣ ಖರ್ಚು ಮಾಡಿ ಬೆಳೆದಿದ್ದ ಬಾಳೆ ಬೆಳೆ ಹಾಳಾಗಿದ್ದು, ರೈತರು ಮಾಡಿದ ಸಾಲ ತೀರಿಸಲಾಗದೇ ದಿಕ್ಕು ತೋಚದೇ ಕಣ್ಣೀರಿಡುತ್ತಿದ್ದಾರೆ. ಕೂಡಲೇ ಸರ್ಕಾರ, ಇಲಾಖೆ ಅಧಿಕಾರಿಗಳು ರೈತರ ನೆರವಿಗೆ ನಿಲ್ಲಬೇಕಾಗಿದೆ.ಆಲಿಕಲ್ಲು ಬಿರುಗಾಳಿ ಮಳೆಯಿಂದ ಬಾಳೆ ಬೆಳೆ ನೆಲಕ್ಕುರುಳಿದ್ದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ. ಬಾಳೆ ಗಿಡಗಳು ಮೃದುವಾಗಿರುವುದರಿಂದ ಗಾಳಿ ಹಾಗೂ ಆಲಿಕಲ್ಲು ಹೊಡೆತವನ್ನು ತಡೆಯದೇ ನೆಲಕ್ಕಪ್ಪಳಿಸಿವೆ. ಕಟಾವಿಗೆ ಬಂದ ಬಾಳೆ ಹಣ್ಣುಗಳು ನೆಲಕ್ಕೆ ಬಿದ್ದು ಕಪ್ಪಾಗಿವೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿದೆ. ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗಿ ಯಾರು ಖರೀದಿಸದಂತಾಗಿದೆ.
ಫಸಲು ನಾಶ: ಹಗಲು- ರಾತ್ರಿ ಎನ್ನದೆ ಹೊಲದಲ್ಲಿಯೇ ಇದ್ದುಕೊಂಡು ಅತ್ಯಂತ ಕಾಳಜಿಯಿಂದ ಶ್ರಮವಹಿಸಿ ಬೆಳೆದಿದ್ದ ಬಾಳೆ ಗಿಡಗಳು ನೆಲಸಮವಾಗಿವೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ತೋಟಗಾರಿಕೆ, ಕೃಷಿ ಇಲಾಖೆಯಿಂದ ಯಾವುದೇ ಸಹಾಯಧನ ಪಡೆಯದೇ ಸ್ವಂತ ಖರ್ಚಿನಲ್ಲಿ ನಿರಂತರ ೧೦ ತಿಂಗಳುಗಳಿಂದ ಬೆಳೆಸಿದ್ದ ಫಸಲು ನಾಶವಾಗಿದೆ. ಸರ್ಕಾರ, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತೀವ್ರ ಸಂಕಷ್ಟದಲ್ಲಿ ಸಿಲುಕಿರುವ ರೈತರ ನೆರವಿಗೆ ಬರಬೇಕು ಎಂದು ಬನ್ನಿಕೊಪ್ಪ ಗ್ರಾಮದ ರೈತ ದೇವೇಂದ್ರಪ್ಪ ದಾಮೋದರ ಆಗ್ರಹಿಸಿದರು.ಹಾನಿ ಪರಿಶೀಲನೆ: ತಾಲೂಕಿನಾದ್ಯಂತ ೮೦ ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆ ಬೆಳೆಯಲಾಗಿದೆ. ಈಗಾಗಲೇ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಶೇ. ೫೦ರಿಂದ ೬೦ರಷ್ಟು ಪ್ರದೇಶದಲ್ಲಿ ಹಾನಿಯಾಗಿದೆ. ತಾಲೂಕಿನ ಬನ್ನಿಕೊಪ್ಪ, ಮಾಚೇನಹಳ್ಳಿ, ತಾರಿಕೊಪ್ಪ, ಸುಗನಹಳ್ಳಿ ಗ್ರಾಮಗಳಲ್ಲೂ ಬಾಳೆ ಬೆಳೆ ಬೆಳೆಯಲಾಗಿದೆ. ಇನ್ನೂ ಸಮೀಕ್ಷೆ ಮಾಡಲಾಗುತ್ತಿದೆ. ಎಲ್ಲವನ್ನು ತಹಸೀಲ್ದಾರ್ ಪರಿಹಾರ ಲಾಗಿನ್‌ನಲ್ಲಿ ಸೇರಿಸಿ ವರದಿ ಸಲ್ಲಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪ್ರಶಾಂತ ಕುಲಕರ್ಣಿ ತಿಳಿಸಿದರು.