ಕನ್ನಡಪ್ರಭ ವಾರ್ತೆ ಕಾರವಾರ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ ಘಟಕದ ಅಧ್ಯಕ್ಷೆ ಮೊಬೆಲ್ ಪಿಂಟೋ, ರಿಶೆಲ್ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದಾಗ ಆಕೆಯ ಕಿವಿಯಲ್ಲಿ ಇಯರ್ ಫೋನ್ ಇತ್ತು ಮತ್ತು ಮೊಬೈಲ್ ನೆಲದ ಮೇಲೆ ಬಿದ್ದಿತ್ತು. ಇದರ ಅರ್ಥ ಆಕೆ ಸಾಯುವ ಕೊನೆಯ ಕ್ಷಣದವರೆಗೂ ಆರೋಪಿಯೊಂದಿಗೆ ಸಂಪರ್ಕದಲ್ಲಿದ್ದಳು. ಅಷ್ಟೇ ಅಲ್ಲದೆ, ಮೃತದೇಹದ ಮೇಲೆ ಕಚ್ಚಿದ ಗಾಯದ ಗುರುತು ಕಂಡುಬಂದಿದ್ದು, ಪೊಲೀಸರು ಈ ಬಗ್ಗೆ ಸೂಕ್ಷ್ಮವಾಗಿ ತನಿಖೆ ನಡೆಸಬೇಕು. ಈ ಹಿಂದೆ ಆರೋಪಿಯ ಸಂಬಂಧಿಕರು ರಿಶೆಲ್ ತಾಯಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದರು ಎಂದು ಅವರು ದೂರಿದರು.
ಪ್ರಮುಖರಾದ ಲಿಯೋ ಲಿವಿಸ್, ಆತ್ಮಹತ್ಯೆ ಪ್ರಕರಣ ದಾಖಲಾದ ಮೇಲೆ ಪೊಲೀಸರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಘಟನೆ ನಡೆದು 3 ದಿನಗಳ ಬಳಿಕ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಇದುವರೆಗೂ ಆರೋಪಿಯ ಮೊಬೈಲ್ ವಶಪಡಿಸಿಕೊಂಡಿಲ್ಲ ಅಥವಾ ಆತನ ಇರುವಿಕೆಯನ್ನು ಪತ್ತೆಹಚ್ಚಿಲ್ಲ. ರಿಶೆಲ್ ಮತ್ತು ಚಿರಾಗ್ ನಡುವಿನ ವಾಟ್ಸ್‌ಆ್ಯಪ್ ಸಂದೇಶಗಳಲ್ಲಿ, ಆತ ಆಕೆಯನ್ನು ಅತ್ಯಂತ ಕೆಟ್ಟ ಪದಗಳಿಂದ ನಿಂದಿಸಿರುವುದು ಮತ್ತು ಆಕೆ ಆತ್ಮಹತ್ಯೆಯ ಮುನ್ಸೂಚನೆ ನೀಡಿರುವುದು ಸ್ಪಷ್ಟವಾಗಿದೆ. ಆತ್ಮಹತ್ಯೆಗೂ ಮುನ್ನ ಆಕೆ ಕಂಪ್ಯೂಟರ್ ಕ್ಲಾಸ್‌ಗೆ ಹೋಗದೇ ನಾಪತ್ತೆಯಾಗಿದ್ದ ಸಮಯ ಮತ್ತು ಮನೆಗೆ ತಡವಾಗಿ ಬಂದಿದ್ದರ ಬಗ್ಗೆಯೂ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.ಇದೇ ವೇಳೆ ಮಾತನಾಡಿದ ಫ್ರೆಂಕಿ ಗುಡಿನೋ, ಇದೊಂದು ಕೇವಲ ವೈಯಕ್ತಿಕ ನೋವಿನ ವಿಷಯವಲ್ಲ, ಇಡೀ ಮಹಿಳಾ ಸಮುದಾಯವೇ ತಲೆತಗ್ಗಿಸುವಂತ ಘಟನೆ. ಪ್ರಭಾವಿಗಳ ಒತ್ತಡಕ್ಕೆ ಮಣಿಯದೆ ಆಕೆಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಆರೋಪಿಯನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಸ್ಯಾಮ್ಸನ್ ಡಿಸೋಜಾ, ಕ್ಲೆಮೆಟ್ ಗುಡಿನೋ, ವಿಲ್ಸನ್ ಫರ್ನಾಂಡೀಸ್, ಜೂಜ್ ಫರ್ನಾಂಡೀಸ್ ಹಾಗೂ ಸೈರಿಲ್ ಇದ್ದರು.