- ಪಾಲಿಕೆ 3 ವಲಯಗಳಲ್ಲೂ ಆಯೋಜನೆ । ಪ್ರಮಾಣಪತ್ರ ವಿತರಿಸಿದ ಶಾಸಕ ಸಮರ್ಥ್
ಕನ್ನಡಪ್ರಭ ವಾರ್ತೆ ದಾವಣಗೆರೆ
ಸಾರ್ವಜನಿಕರಿಗೆ ಇ-ಖಾತಾ ಸೌಲಭ್ಯ ಹೊಂದುವ ಪ್ರಕ್ರಿಯೆಯನ್ನು ಸರಳಗೊಳಿಸುವ ಹಾಗೂ ಬಾಕಿ ಉಳಿದಿರುವ ಅರ್ಜಿಗಳ ವಿಲೇವಾರಿಗೆ ವೇಗ ನೀಡುವ ಉದ್ದೇಶದಿಂದ ದಾವಣಗೆರೆ ಮಹಾನಗರ ಪಾಲಿಕೆಯ ಮೂರು ವಲಯಗಳಲ್ಲಿ ನ.18ರಿಂದ 20ರವರೆಗೆ ಹಮ್ಮಿಕೊಳ್ಳಲಾಗಿದ್ದ ‘ನಿಮ್ಮ ಖಾತಾ, ನಿಮ್ಮ ಹಕ್ಕು’ ವಿಶೇಷ ಇ-ಖಾತಾ ಅಭಿಯಾನ ಯಶಸ್ವಿಯಾಗಿ ಪೂರ್ಣಗೊಂಡಿದೆ. ಮೂರು ದಿನಗಳಲ್ಲಿ ಒಟ್ಟು 730 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.ಶಾಸಕ ಸಮರ್ಥ್ ಶಾಮನೂರು ಅವರ ವಿಶೇಷ ಕಾಳಜಿ ಹಾಗೂ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿದ್ದ ಈ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. 3 ವಲಯಗಳಲ್ಲಿಯೂ ಅರ್ಜಿ ಸ್ವೀಕಾರ, ದಾಖಲೆಗಳ ಪರಿಶೀಲನೆ ಹಾಗೂ ಇ-ಖಾತಾ ವಿತರಣಾ ಪ್ರಕ್ರಿಯೆಗೆ ಆದ್ಯತೆ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗಿದೆ.
ವಿಶೇಷ ಅಭಿಯಾನ ಅಂಗವಾಗಿ ವಿವಿಧ ವಲಯ ಕಚೇರಿಗಳಿಗೆ ಭೇಟಿ ನೀಡಿದ ಶಾಸಕ ಸಮರ್ಥ್ ಶಾಮನೂರು ಅವರು, ಅರ್ಜಿ ಸ್ವೀಕಾರ ಹಾಗೂ ವಿಲೇವಾರಿ ಪ್ರಕ್ರಿಯೆಯ ಕಾರ್ಯವೈಖರಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಇ-ಖಾತಾ ಪ್ರಕ್ರಿಯೆ ಪೂರ್ಣಗೊಂಡ ಫಲಾನುಭವಿಗಳಿಗೆ ಸ್ವತಃ ಇ-ಖಾತಾ ಪ್ರಮಾಣ ಪತ್ರಗಳನ್ನು ವಿತರಿಸಿ, ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು. ಅರ್ಜಿ ಸಲ್ಲಿಸಲು ಆಗಮಿಸುವವರಿಗೆ ಅನಗತ್ಯ ವಿಳಂಬ ಆಗದಂತೆ ಕ್ರಮ ವಹಿಸಬೇಕು. ಅಗತ್ಯ ದಾಖಲೆಗಳನ್ನು ಸಲ್ಲಿಸಿರುವ ಅರ್ಜಿಗಳನ್ನು ಆದ್ಯತೆ ಮೇರೆಗೆ ವಿಲೇವಾರಿ ಮಾಡಿ, ಸಾರ್ವಜನಿಕರು ಕಚೇರಿಗಳಿಗೆ ಪದೇಪದೇ ಅಲೆದಾಡುವ ಪರಿಸ್ಥಿತಿ ನಿರ್ಮಾಣ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಮಹಾನಗರ ಪಾಲಿಕೆಯ ರಾಜೀವ್ ಗಾಂಧಿ ಬಡಾವಣೆಯ ವಲಯ–01 ರಲ್ಲಿ 311 ಅರ್ಜಿಗಳು, ಟಿ.ವಿ. ಸ್ಟೇಷನ್ ಕೆರೆ ಎದುರಿನ ವಲಯ–02 ರಲ್ಲಿ 229 ಅರ್ಜಿಗಳು ಹಾಗೂ ಆಶ್ರಯ ಆಸ್ಪತ್ರೆ ಪಕ್ಕದ ವಲಯ–03 ರಲ್ಲಿ 190 ಅರ್ಜಿಗಳು ಸೇರಿದಂತೆ ಒಟ್ಟು 730 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.
ಹೆಚ್ಚಿನ ಗಮನಹರಿಸಿ:
ಈ ಸಂದರ್ಭ ಮಹಾನಗರ ಪಾಲಿಕೆಯ ಆಯುಕ್ತ ಡಾ. ಎನ್.ಮಹಾಂತೇಶ್, ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ, ಸ್ಥಳೀಯ ಸಾರ್ವಜನಿಕರು ಉಪಸ್ಥಿತರಿದ್ದರು.
-21ಕೆಡಿವಿಜಿ35: