ಕನ್ನಡಪ್ರಭ ವಾರ್ತೆ ಐಗಳಿಚುನಾವಣೆಯಲ್ಲಿ ನಿಮ್ಮ ಮತ ಹಣಕ್ಕಾಗಿ ಮಾರಿಕೊಳ್ಳಬಾರದು, ಮತದಾನದ ಹಕ್ಕು ನಿಮ್ಮದು. ಎಲ್ಲರೂ ಮತದಾನ ಮಾಡಿರಿ ಎಂದು ಕವಲಗುಡ್ಡದ ಅವರೇಶ್ವರ ಸ್ವಾಮೀಜಿ ನುಡಿದರು.
ಸಮೀಪದ ಕೋಹಳ್ಳಿ ಗ್ರಾಮದ ಭೀರಲಿಂಗೇಶ್ವರ ಜಾತ್ರೆಯ ನಿಮಿತ್ತ ನಡೆದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮಕ್ಕಳಿಗೆ ಆಸ್ತಿ ಮಾಡಬೇಡಿ, ಅವರಿಗೆ ಗುಣಮಟ್ಟದ ಶಿಕ್ಷಣ ಜೊತೆಗೆ ಸಂಸ್ಕಾರ ಕೊಡಿಸಿ. ಅವರಲ್ಲಿ ದೇಶಪ್ರೇಮ ಬೆಳೆಸಿರಿ. ತಾಯಿ, ತಂದೆ ದೇವರೆಂದು ಮಕ್ಕಳಲ್ಲಿ ಸ್ವಯಂ ಭಾವನೆಯಿಂದ ಬರಬೇಕು ಎಂದರು.ಬೆಳ್ಳಂಕಿಯ ಶಿವಲಿಂಗ ಶಿವಾಚಾರ್ಯರು ಮಾತನಾಡಿ, ಭಗವಂತನ್ನು ಆರಾಧಿಸುವುದು ಕಮ್ಮಿಯಾದರೇ ಕುಡಿಯುವ ನೀರಿನ ಸಮಸ್ಯೆ, ಬರಗಾಲ, ಮಹಾರೋಗ, ಹರಡುತ್ತವೆ. ಕಾರಣ ನೀವು ನಿತ್ಯ ದೇವರನ್ನು ಪೂಜಿಸಿರಿ. ಅವಕಾಶ ಸಿಕ್ಕಾಗ ಧರ್ಮಸಭೆಯಲ್ಲಿ ಭಾಗಿಯಾಗಿ ಪೂಜ್ಯರ ದರ್ಶನ ಮತ್ತು ಅವರ ನುಡಿ ಕೇಳಿ ನೀವೆಲ್ಲರೂ ಪಾವನರಾಗಬೇಕು ಎಂದು ತಿಳಿಸಿದರು.
ಹುಲಜಂತಿಯ ಮಾಳಿಂಗರಾಯ ಮಹಾರಾಜರು, ಕೋಳಿಗುಡ್ಡದ ಸ್ವರೂಪಾನಂದ ಮಹಾಸ್ವಾಮಿಗಳು, ಶಂಕ್ರಯ್ಯ ಸ್ವಾಮಿಗಳು, ಶಿವಕುಮಾರ ಸ್ವಾಮಿಜಿ, ಗ್ರಾಪಂ ಅಧ್ಯಕ್ಷೆ ಜಯಶ್ರೀ.ಬ.ಬಂಡಗರ, ಹಣಮಂತ ಗಬ್ಬೂರ ಮಾತನಾಡಿದರು. ಭಾರತ ಬ್ಯಾಂಕಿನ ಅಧ್ಯಕ್ಷ ನೂರಅಹ್ಮದ್ ಡೊಂಗರಗಾಂವ, ಸಂಗಪ್ಪ ಕರಿಗಾರ, ಗ್ರಾಪಂ ಮಾಜಿ ಅಧ್ಯಕ್ಷ ತುಕಾರಾಮ ದೇವಖಾತೆ, ತಾಪಂ ಮಾಜಿ ಸದಸ್ಯ ಸದಾಶಿವ ಹರಪಾಳೆ, ಶ್ಯಾಮು ಕುಂಬಾರ, ವಿಠ್ಠಲ ಕರಿಗಾರ, ಸಂಗಪ್ಪ ಡಂಬಳಿ, ರವೀಂದ್ರ ಬೇವಿನಗಿಡದ, ಶ್ರೀಶೈಲ ಡಂಬಳಿ, ನ್ಯಾಯವಾದಿ ಶರತ್ ಮುಧೋಳ, ಡಿಎಸ್‌ಎಸ್ ಅಧ್ಯಕ್ಷ ಚಿದಾನಂದ ತಳಕೇರಿ, ಆಡಳಿತಾಧಿಕಾರಿ ಇರ್ಪಾನ್ ಆಲಗೂರ ಸೇರಿದಂತೆ ಜಾತ್ರಾ ಕಮಿಟಿಯವರು ಗ್ರಾಮಸ್ಥರು ಗಣ್ಯರು ಇದ್ದರು.ಸಾಧಕರಿಗೆ ಜಾತ್ರಾ ಕಮಿಟಿಯವರು ಸತ್ಕರಿಸಿದರು. ಪ್ರಾರಂಭದಲ್ಲಿ ಹಣಮಂತ ಗಬ್ಬೂರ ಪ್ರಾಸ್ತಾವಿಕ ಮಾತನಾಡಿದರು. ತುಕಾರಾಮ್ ದೇವಖಾತೆ ಸ್ವಾಗತಿಸಿದರು. ಮಹಾನಿಂಗ ಕರಿಗಾರ ವಂದಿಸಿದರು. ನಂತರ ಅನ್ನ ಪ್ರಸಾದ ವಿತರಿಸಿದರು. ಮುತ್ತೂರಿನ ಅಕ್ಷತಾ ಹಾಗೂ ಇಂಗಳಗೀಯ ಜ್ಯೋತಿ ಸಂಗಡಿಗರಿಂದ ಸುಪ್ರಸಿದ್ಧ ಡೊಳ್ಳಿನ ಪದಗಳು ಜನ-ಮನ ಸೆಳೆಯಿತು. 1111 ಮಹಿಳೆಯರ ಕುಂಭೋತ್ಸವ: ಜಾತ್ರೆ ಸಂಪನ್ನ
ಸಮೀಪದ ಕೋಹಳ್ಳಿ ಗ್ರಾಮದ ಭೀರಲಿಂಗೇಶ್ವರ ಜಾತ್ರೆಯು ಕಳೆದ 3 ದಿನಗಳಿಂದ ಪ್ರಾರಂಭವಾಗಿದ್ದು, ನಿತ್ಯ ಬೆಳಗ್ಗೆ ಶಂಕ್ರಯ್ಯ ಸ್ವಾಮೀಜಿ ಹಾಗೂ ಶಿವಕುಮಾರ ಸ್ವಾಮೀಜಿ ಅವರಿಂದ ದೇವರಿಗೆ ಮಹಾ ರುದ್ರಾಭಿಷೇಕ ವಿಧಿ ವಿಧಾನದ ಪ್ರಕಾರ ಪೂಜೆ ನೆರವೇರಿಸಿದರು. ಕವಲಗುಡ್ಡದ ಪೂಜ್ಯ ಅಮರೇಶ್ವರ ಸ್ವಾಮೀಜಿ ಅವರಿಂದ ನಿತ್ಯ ಸಂಜೆಯಲ್ಲಿ ಪ್ರವಚನ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು. ಜಾತ್ರೆಯ ಕೊನೆಯ ದಿನ ಸಂಪನ್ನವಾಯಿತು.ಸೋಮವಾರ ಜಾತ್ರೆಯ ಕೊನೆಯ ದಿನದಂದು ಕಳಸಾರೋಹಣ ಅಂಗವಾಗಿ ಗ್ರಾಮದಲ್ಲಿ ಹೂಮಾಲೆ ಹಸಿರು ತೋರಣ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಗ್ರಾಮನ್ನು ಸಿಂಗರಿಸಿದ್ದರು. ಸುಮಾರು 1111 ಮಹಿಳೆಯರು ಕುಂಭ ಹೊತ್ತು ಅಪ್ಪಯ್ಯ ಸ್ವಾಮಿ ದೇವಾಲಯದಿಂದ ಗ್ರಾಮದ ಪ್ರಮುಖ ರಸ್ತೆಯ ಮೂಲಕ ಹೊರಡುವ ಮುನ್ನ ಬೆಳ್ಳಂಕಿಯ ಶಿವಲಿಂಗ ಶಿವಾಚಾರ್ಯರು ಕುಂಭೋತ್ಸವಕ್ಕೆ ಚಾಲನೆ ನೀಡಿದರು. ವಿವಿಧ ವಾಧ್ಯಗಳ ಮೂಲಕ ಬೀರಲಿಂಗೇಶ್ವರ ದೇವಾಲಯ ತಲುಪಿತು. ನಂತರ ಪೂಜ್ಯರಿಂದ ಕಳಸಾರೋಹಣ ಸಡಗರ ಸಂಭ್ರಮದಿಂದ ಜರುಗಿತು.