ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯವಸತಿ ಕೊಠಡಿ ವಿಚಾರಕ್ಕೆ ಸಂಬಂಧಿಸಿ ಸುಬ್ರಹ್ಮಣ್ಯದಲ್ಲಿ ಯುವಕನೋರ್ವನ ಮೇಲೆ ಹಲ್ಲೆ ನಡೆಸಲಾಗಿದ್ದು, ಹಲ್ಲೆಯ ವೀಡಿಯೋ ವೈರಲ್ ಆಗಿದೆ. ಸುಬ್ರಹ್ಮಣ್ಯದ ಆದಿ ಸುಬ್ರಹ್ಮಣ್ಯ ಪ್ರದೇಶದಲ್ಲಿ ಘಟನೆ ನಡೆದಿದ್ದು, ರೂಂ ವಿಚಾರಕ್ಕೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಯುವಕನೋರ್ವ ರೂಂ ಪಡೆಯುವ ಉದ್ದೇಶದಿಂದ ರೂಂ ವೀಕ್ಷಿಸಿ ಬಳಿಕ ರೂಂ ಪಡೆಯದೇ ತೆರಳಿದ ಎನ್ನಲಾಗಿದ್ದು, ಇದೇ ಕಾರಣಕ್ಕೆ ರೂಂ ನಿರ್ವಹಿಸುವ ತಂಡ ಯುವಕನ ಜೊತೆ ವಾಗ್ವಾದ ನಡೆಸಿದ್ದು, ರೂಂ ವೀಕ್ಷಿಸಲು ಬಂದ ಯುವಕನ ಮೇಲೆ ರೂಂ ನಿರ್ವಹಿಸುವ ತಂಡದ ಒರ್ವ ಹಲ್ಲೆ ನಡೆಸಿದ್ದಾನೆ. ಸುಬ್ರಹ್ಮಣ್ಯದಲ್ಲಿ ಕೆಲವೆಡೆ ಹೊರಗಿನವರು ರೂಂಗಳನ್ನು ಲೀಸ್‌ಗೆ ಪಡೆದುಕೊಂಡಿದ್ದು, ಇವರು ಈ ಕೃತ್ಯ ಎಸಗಿದ್ದಾರೆ ಎಂದು ಸ್ಥಳೀಯರು ಶಂಕಿಸಿದ್ದಾರೆ. ಹಾಡಹಗಲೇ ನಡುರಸ್ತೆಯಲ್ಲಿ ಯುವಕನ ಮೇಲೆ ಹಲ್ಲೆ ನಡೆಸಿದ ತಂಡದ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹ ವ್ಯಕ್ತವಾಗಿದ್ದು, ಇಂತಹದಕ್ಕೆ ಕಡಿವಾಣ ಹಾಕುವಂತೆಯೂ ಒತ್ತಾಯಿಸಲಾಗಿದೆ.
ಹಲ್ಲೆ ನಡೆಸಿರುವುದು, ಖಾಸಗಿ ವಸತಿ ಗೃಹಗಳ ಏಜೆಂಟ್‌ಗಳು ಎಂದು ತಿಳಿದುಬಂದಿದ್ದು, ಅವರನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರಿಗೆ ಭದ್ರತೆ ನೀಡಲು ಎಲ್ಲಾ ರೀತಿಯ ಕ್ರಮಕೈಗೊಳ್ಳಲಾಗುವುದು. ಅನಧಿಕೃತ ಲಾಡ್ಜ್ ನಡೆಸುತ್ತಿರುವುದರ ವಿರುದ್ಧವೂ ಕ್ರಮ ಕೈಗೊಳ್ಳಬೇಕಿದೆ. ಯಾತ್ರಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ತಿಳಿಸಿದ್ದಾರೆ.