ಕನ್ನಡಪ್ರಭ ವಾರ್ತೆ ಮಂಡ್ಯ
ಶ್ರೀಹರ್ಷ ಸಮಾಜಸೇವಾ ಫೌಂಡೇಷನ್ ಆಶ್ರಯದಲ್ಲಿ ನ.೪ರಂದು ಬೆಳಗ್ಗೆ ೧೦ ಗಂಟೆಗೆ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ಕೃಷಿಯತ್ತ ಯುವಜನರ ಜನಜಾಗೃತಿ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿದೆ.ನಾಡಿನ ಹೆಸರಾಂತ ನೈಸರ್ಗಿಕ ಕೃಷಿಕ ಪಾಸಿಟಿವ್ ತಮ್ಮಯ್ಯ ನೇತೃತ್ವದಲ್ಲಿ ನನ್ನ ಆಹಾರ, ನನ್ನ ಆರೋಗ್ಯ, ನನ್ನ ಜವಾಬ್ದಾರಿ ಮತ್ತು ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆ ವಿಸ್ತರಣೆ ಹಾಗೂ ಆನ್‌ಲೈನ್ ಮಾರ್ಕೆಟಿಂಗ್ ಕುರಿತು ಚಿಂತನ- ಮಂಥನ, ಸಂವಾದ ಮತ್ತು ಪುಸ್ತಕ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿದೆ.
ಆದಿಚುಂಚನಗಿರಿ ಹಾಸನ ಶಾಖಾಮಠದ ಕಾರ್ಯದರ್ಶಿ ಶ್ರೀಶಂಭುನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಜಿಲ್ಲಾಧಿಕಾರಿ ಡಾ. ಕುಮಾರ ಉದ್ಘಾಟನೆ ನೆರವೇರಿಸುವರು. ಶಾಸಕ ಪಿ.ರವಿಕುಮಾರ್ ಅಧ್ಯಕ್ಷತೆ ವಹಿಸುವರು. ಜಿಪಂ ಸಿಇಒ ಕೆ.ಆರ್.ನಂದಿನಿ ಸಾವಯವ ಸಂತೆಗೆ ಚಾಲನೆ ನೀಡುವರು.ಪಾಸಿಟಿವ್ ತಮ್ಮಯ್ಯರವರ ಆಹಾರವೇ ಅಮೃತ, ದಿನಚರಿಯೇ ಜೀವನ ಪುಸ್ತಕವನ್ನು ಡಾ.ಕೆ.ಎಂ.ಹರಿಣಿಕುಮಾರ್, ಡಾ.ದೊಡ್ಡೇಗೌಡರ ಈಜೋ ಮೀನು ಮಾರಾಟಕ್ಕಲ್ಲ ಪುಸ್ತಕವನ್ನು ಪ್ರೊ.ಬಿ.ಶಿವಲಿಂಗಯ್ಯ ಬಿಡುಗಡೆ ಮಾಡುವರು. ನೈಸರ್ಗಿಕ ಕೃಷಿಕರಾದ ಪಾಸಿಟಿವ್ ತಮ್ಮಯ್ಯ, ಯೋಗೇಶ್ ಅಪ್ಪಾಜಯ್ಯ, ಡಾ.ಮಂಜುನಾಥ್, ಶ್ರೀಧರ್‌ರಾವ್ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವಿಶೇಷ ಉಪನ್ಯಾಸ ನೀಡುವರು. ಲಯನ್ ಡಾ.ಕೃಷ್ಣೇಗೌಡ ಅವರು ಹರ್ಷ ಕೃಷಿ ಪ್ರೇರಣಾ ಸಂಸ್ಥೆಯ ನಾಮಪಲಕ ಅನಾವರಣ ಮಾಡುವರು.
ಸಂಜೆ ೫.೩೦ಕ್ಕೆ ಶ್ರೀ ಹರ್ಷ ಕಾಯಕಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಶ್ರೀಮಂಟೇಸ್ವಾಮಿ ಕಥಾಪ್ರಸಂಗ ನಾಟಕ ಪ್ರದರ್ಶನ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ, ಮಳವಳ್ಳಿ ತಾಲೂಕು ಬಿ.ಜಿ.ಪುರದ ಮಂಟೇಸ್ವಾಮಿ ಮಠದ ಧರ್ಮಾಧಿಕಾರಿ ಭರತ್ ಅರಸು ವಹಿಸುವರು. ಎಸ್.ಬಿ.ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಡಾ. ಮೀರಾ ಶಿವಲಿಂಗಯ್ಯ ಅಧ್ಯಕ್ಷತೆ ವಹಿಸುವರು. ಫಸ್ಟ್ ಸರ್ಕಲ್ ರಾಜ್ಯಾದ್ಯಕ್ಷ ಡಾ.ಡಿ.ಮುನಿರಾಜು ಮತ್ತು ಲಯನ್ ಸಂಸ್ಥೆ ಜಿಲ್ಲಾಧ್ಯಕ್ಷರಾದ ಸಿದ್ದೇಗೌಡ ಅವರು ಹರ್ಷ ಕಾಯಕಶ್ರೀ ಪ್ರಶಸ್ತಿ ಪ್ರದಾನ ಮಾಡುವರು. ಕೃಷಿ ಸಚಿವರ ವಿಶೇಷ ಅಧಿಕಾರಿ ಡಾ.ಎ.ಬಿ.ಪಾಟೀಲ್ ಪ್ರಶಸ್ತಿ ಪುರಸ್ಕೃತರ ಕುರಿತು ಅಭಿನಂದನಾ ಭಾಷಣ ಮಾಡುವರು.ಹರ್ಷ ರಾಜ್ಯಮಟ್ಟದ ಕಾಯಕಶ್ರೀ ಪ್ರಶಸ್ತಿಯನ್ನು ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ ಯೋಗೇಶ ಅಪ್ಪಾಜಯ್ಯ, ಸಾವಯವ ಕೃಷಿಕ ಸೋಮೇಗೌಡ, ಶಿವರಾಮೇಗೌಡ, ಸಂತೋಷ್ ತಿಮ್ಮೇಗೌಡ, ಲಕ್ಷ್ಮೀತಿಮ್ಮಪ್ಪ, ಲಕ್ಷ್ಮೀಶ, ಎಂ.ಇ.ಶಿವಣ್ಣ, ದೇಶ ಕಾಯುವ ಸೈನಿಕ ಶಿವಪ್ರಸಾದ್, ಕಾಯಕಯೋಗಿ ಪೌರಕಾರ್ಮಿಕ ಮಹಿಳೆ ಪದ್ಮ ರಂಗಸ್ವಾಮಿ ಇವರಿಗೆ ನೀಡಿ ಗೌರವಿಸಲಾಗುವುದು.
ಹರ್ಷ ರಾಜ್ಯ ಮಟ್ಟದ ಸಂಘಟನಾಶ್ರೀ ಪ್ರಶಸ್ತಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಡ್ಯ ಜಿಲ್ಲೆ ಇವರು ಸ್ವೀಕರಿಸಲಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ನಾಡಿನ ಹೆಸರಾಂತ ಕಲಾತಂಡ ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾವಿಭಾಗದ ಕಲಾ ಮೈತ್ರಿ ತಂಡದಿಂದ ಶ್ರೀ ಮಂಟೇಸ್ವಾಮಿ ಕಥಾಪ್ರಸಂಗ ನಾಟಕ ಪ್ರದರ್ಶನಗೊಳ್ಳಲಿದೆ.