ಕನ್ನಡಪ್ರಭ ವಾರ್ತೆ ತಿಪಟೂರು
ನಮ್ಮ ಯುವಜನಾಂಗ ಮೊಬೈಲ್, ಕಂಪ್ಯೂಟರ್, ಸಾಮಾಜಿಕ ಜಾಲತಾಣದ ದಾಳಿಯಿಂದಾಗಿ ಅದರಲ್ಲಿ ತಲ್ಲೀನರಾಗುವ ಮೂಲಕ ನಮ್ಮ ನಾಡಿನ ಶ್ರೀಮಂತ ಸಾಹಿತ್ಯ, ಸಾಂಸ್ಕೃತಿಕ ಪರಂಪರೆಯಿಂದ ದೂರವಾಗುತ್ತಿರುವುದು ದುರದೃಷ್ಟಕರ ಎಂದು ಶೈನಾ ಟ್ರಸ್ಟ್‌ನ ಶೈಲಾ ನಾಗರಾಜ್ ಬೇಸರ ವ್ಯಕ್ತಪಡಿಸಿದರು. ನಗರದ ಶ್ರೀ ಸತ್ಯ ಗಣಪತಿ ಆಸ್ಥಾನ ಮಂಟದಲ್ಲಿ ಸತ್ಯಗಣಪತಿ ಸೇವಾ ಸಂಘ, ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಅಕ್ಕಮಹಾದೇವಿ ಸಮಾಜ ಇವರ ಸಹಯೋಗದಲ್ಲಿ ಆಯೋಜಿಸಿದ್ದ ದಸರಾ ಕವಿ ಗೋಷ್ಠಿಯಲ್ಲಿ ಕವಿ, ಕಾವ್ಯ ವಿಶ್ಲೇಷಣೆ ಮಾಡುತ್ತಾ ಮಾತನಾಡಿದ ಅವರು, ಕಾವ್ಯವೊಂದು ಭಾವನೆಗಳ ಕ್ರಿಯೆ, ನೋಡಿದ, ಕೇಳಿದ, ಅನುಭವಿಸಿದ ನೋವು ನಲಿವು ಗಳನ್ನು ಚಮತ್ಕಾರಿಕ ಪದಗಳ ಚೌಕಟ್ಟಿನಲ್ಲಿ ಹಿಡಿದಿಡುವ ಕಲೆಯಾಗಿದೆ. ಪಂಪನಿಂದ ಕುವೆಂಪು, ಬೇಂದ್ರೆ, ಅಡಿಗ ಮುಂತಾದ ಕವಿ ಶ್ರೇಷ್ಟರ ಕಾವ್ಯ ಜನಸಾಮಾನ್ಯರ ಬಾಯಲ್ಲೂ ನಲಿದಾಡುತ್ತಿರುವುದರ ಹಿಂದೆ ಅವರ ಪ್ರತಿಭಾ ಕೌಶಲ್ಯ ಸಾಕ್ಷಿಯಾಗಿದೆ. ಕನ್ನಡಿಗರು ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್ ಎಂಬ ಹೆಗ್ಗಳಿಕೆಯ ನುಡಿ ಇದ್ದರೂ ಸಾಹಿತ್ಯದ ಯಾವುದೇ ಪ್ರಕಾರಗಳಲ್ಲಿ ಕೃತಿ ರಚಿಸುವ ಮುನ್ನ ಗಂಭೀರವಾದ ಅಧ್ಯಯನದ ಅಗತ್ಯವಿದೆ. ತಿಪಟೂರಿನಲ್ಲಿ ಬಹುದೊಡ್ಡ ಸಾಂಸ್ಕೃತಿಕ ಪರಂಪರೆಯೇ ಇದ್ದು ನಾಡಿಗೆ ಉತ್ತಮ ಕೊಡುಗೆ ನೀಡುತ್ತಾ ಬಂದಿದೆ ಎಂದರು. ಕವಿ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ಅಧ್ಯಕ್ಷ ಎಂ. ಬಸವರಾಜಪ್ಪ, ಸಾಹಿತ್ಯ ಪರಿಷತ್ತು ಜನಸಾಮಾನ್ಯರನ್ನು ತಲುಪಲು ಸತ್ಯ ಗಣಪತಿ ಸೇವಾ ಸಂಘ ಉತ್ತಮ ವೇದಿಕೆ ಒದಗಿಸಿದ್ದು, ಮುಂದಿನ ದಿನಗಳಲ್ಲಿ ಸ್ಯಾಕ್ಸೋಫೋನ್ ಜುಗಲ್ ಬಂದಿ, ಜಾನಪದ ನೃತ್ಯ, ಲಾವಣಿ ಹಾಡುಗಾರಿಕೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಶ್ರೀ ಸತ್ಯಗಣಪತಿ ಸೇವಾ ಸಂಘದ ಅಧ್ಯಕ್ಷ ಬಿ.ಆರ್. ಶ್ರೀಕಂಠು, ಅಕ್ಕಮಹಾದೇವಿ ಸಮಾಜದ ಅಧ್ಯಕ್ಷೆ ಜಯಶೀಲಾ ಗುರುಬಸಪ್ಪ, ಪ್ರಾಂಶುಪಾಲ ಎಂ.ಡಿ. ಶಿವಕುಮಾರ್, ಶೈನಾ ಟ್ರಸ್ಟ್ ನಾಗರಾಜು, ಕದಳಿ ವೇದಿಕೆಯ ಸ್ವರ್ಣಗೌರಮ್ಮ, ಮುಕ್ತಾತಿಪ್ಪೇಶ್, ಪ್ರಭಾವಿಶ್ವನಾಥ್, ನಂದೀಶಪ್ಪ, ಬಿ. ನಾಗರಾಜು, ಹೆಚ್. ಎಸ್. ಮಂಜಪ್ಪ, ಟಿ. ಶಾರದಮ್ಮ, ದಿವಾಕರ್ ಮತ್ತಿತರರಿದ್ದರು.