ಬಳ್ಳಾರಿ: ದೇಶ ಅನೇಕ ಸಂಕಷ್ಟಗಳ ಸುಳಿಯಲ್ಲಿ ಒದ್ದಾಡುತ್ತಿದ್ದು, ನಿರುದ್ಯೋಗ ಸಮಸ್ಯೆಯಿಂದ ಯುವ ಸಮುದಾಯ ತತ್ತರಿಸಿದೆ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಹೇಳಿದರು.
ನಗರದಲ್ಲಿ ಆಲ್ ಇಂಡಿಯಾ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ನೌಕರರ ಒಕ್ಕೂಟದಿಂದ ಹಮ್ಮಿಕೊಂಡಿರುವ 15ನೇ ತ್ರೈವಾರ್ಷಿಕ ಮಹಾಸಮ್ಮೇಳನ ಉದ್ಘಾಟಿಸಿ ಶನಿವಾರ ಮಾತನಾಡಿದರು.ಗ್ರಾಮೀಣರಿಗೆ ಉದ್ಯೋಗ ನೀಡುವಲ್ಲಿ ಗ್ರಾಮೀಣ ಬ್ಯಾಂಕ್ ಕೊಡುಗೆ ಅನನ್ಯವಾದದ್ದು. ನಿರುದ್ಯೋಗ ಸಮಸ್ಯೆ ನಿವಾರಣೆಯ ಕ್ರಮಗಳಾಗಬೇಕು. ಇತ್ತೀಚೆಗಷ್ಟೇ ಇನ್ಫೋಸಿಸ್ ಸಂಸ್ಥೆ ನೂರಾರು ಯುವಕರನ್ನು ಉದ್ಯೋಗದಿಂದ ಹೊರ ಹಾಕಿದೆ ಎಂದು ತಿಳಿದು ಬಂದಿದೆ. ಈ ಬೆಳವಣಿಗೆಗಳು ವಿದ್ಯಾವಂತ ಯುವಕರಿಗೆ ಆತಂಕ ಸೃಷ್ಟಿಸುತ್ತವೆ ಎಂದು ಹೇಳಿದರು.
ಭಾರತವು ಬಂಡವಾಳಶಾಹಿಗಳ ಕಪಿಮುಷ್ಠಿಯಲ್ಲಿ ನಾನಾ ಸಂಕಷ್ಟಗಳನ್ನು ಎದುರಿಸುವ ಸಾಧ್ಯತೆಗಳು ದಟ್ಟವಾಗಿದ್ದು, ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳನ್ನು ರಕ್ಷಣೆ ಮಾಡುವ ಕೆಲಸವಾಗಬೇಕಾಗಿದೆ ಎಂದರು.ದಿನಗೂಲಿ ನೌಕರರ ಹಕ್ಕುಗಳಿಗೆ ಸಂಬಂಸಿದಂತೆ ಕರ್ನಾಟಕ ಹೈಕೋರ್ಟ್, ಸುಪ್ರೀಂ ಕೋರ್ಟ್ ಸ್ಪಷ್ಟ ಆದೇಶ ನೀಡಿವೆ. ಜಸ್ಟೀಶ್ ಓಬಳರೆಡ್ಡಿ ತೀರ್ಪು ಹೇಳುವಂತೆ, ದಿನಗೂಲಿ ಮತ್ತು ತಾತ್ಕಾಲಿಕ ನೌಕರರಿಗೂ ಸಮಾನ ವೇತನ ನೀಡಬೇಕು. ವೇತನ ತಾರತಮ್ಯ ಸರಿಯಲ್ಲ ಎಂದರಲ್ಲದೆ, 2018ರ ನಿವೃತ್ತಿ ವೇತನದ ಕಾಯ್ದೆಯನ್ನು ಹಣಕಾಸು ಇಲಾಖೆ ಪರಿಗಣಿಸಬೇಕು ಎಂದು ಹೇಳಿದರು.
ಕೆನರಾ ಬ್ಯಾಂಕ್‌ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯ ಪ್ರಧಾನ ಕಾರ್ಯದರ್ಶಿ ಡಿ.ಸುರೇಂದ್ರನ್ ಮಾತನಾಡಿ, ವಾಣಿಜ್ಯ ಬ್ಯಾಾಂಕುಗಳಂತೆ ಬಹುತೇಕ ಸೌಲಭ್ಯಗಳು ಗ್ರಾಮೀಣ ಬ್ಯಾಂಕ್ ನೌಕರರಿಗೂ ದೊರೆಯುತ್ತಿವೆ. ಸದ್ಯದಲ್ಲಿ ಒಂದು ರಾಜ್ಯ ಒಂದು ಗ್ರಾಮೀಣ ಬ್ಯಾಂಕ್ ನೀತಿ ಅಸ್ತಿತ್ವಕ್ಕೆ ಬರಲಿದ್ದು, ಗ್ರಾಮೀಣ ಬ್ಯಾಂಕಿನ ಶತಮಾನೋತ್ಸವದತ್ತ ಸಾಗಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.ಅಖಿಲ ಭಾರತ ಗ್ರಾಮೀಣ ಬ್ಯಾಂಕ್ ನೌಕರರ ಒಕ್ಕೂಟದ ಅಧ್ಯಕ್ಷ ಸಿ.ರಾಜೀವನ್, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಮಿಶ್ರಾ, ಸಮಾವೇಶದ ಸ್ವಾಗತಿ ಸಮಿತಿಯ ಉಪಾಧ್ಯಕ್ಷ ಸಿರಿಗೇರಿ ಪನ್ನರಾಜ್, ಟಿ.ಜಿ. ವಿಠ್ಠಲ್, ಕೆ.ಬನಾಗಭೂಷಣ ರಾವ್, ಗುರುಮೂರ್ತಿ, ಎಸ್.ವಿ. ರೆಡ್ಡಿ, ವಿ.ಕೆ. ಬನ್ನಿಗೋಳ ಸೇರಿದಂತೆ ಬ್ಯಾಂಕ್ ನೌಕರರು ಹಾಗೂ ಸಿಬ್ಬಂದಿ ಸಮಾರಂಭದಲ್ಲಿ ಇದ್ದರು.
ಬಳ್ಳಾರಿಯಲ್ಲಿ ಆಲ್ ಇಂಡಿಯಾ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ನೌಕರರ ಒಕ್ಕೂಟದಿಂದ ಹಮ್ಮಿಕೊಂಡಿರುವ 15ನೇ ತ್ರೈವಾರ್ಷಿಕ ಮಹಾಸಮ್ಮೇಳನಕ್ಕೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾ.ವಿ.ಗೋಪಾಲಗೌಡ ಚಾಲನೆ ನೀಡಿದರು.