ನಗರದ ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಬೃಹತ್ ಕಟೌಟ್‌ಗಳೊಂದಿಗೆ ಮೆರವಣಿಗೆ
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಭರ್ಜರಿ ವಿಜಯ ಸಾಧಿಸಿದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಶನಿವಾರ ನಗರದಲ್ಲಿ ಸಂಭ್ರಮಾಚರಿಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಬೃಹತ್ ಕಟೌಟ್‌ಗಳೊಂದಿಗೆ ಮೆರವಣಿಗೆ ನಡೆಸಿದ ಮುಖಂಡರು, ಕಾರ್ಯಕರ್ತರು ಆಜಾದ್ ಪಾರ್ಕ್ ಮೈದಾನದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ, ನರೇಂದ್ರ ಮೋದಿ ಹಾಗೂ ಮುಖಂಡರ ಪರ ಘೋಷಣೆಗಳನ್ನು ಕೂಗಿ ವಿಜಯೋತ್ಸವ ಆಚರಿಸಿದರು.ಕಾರ್ಕಳ ಶಾಸಕ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಉಸ್ತುವಾರಿ ವಿ.ಸುನಿಲ್ ಕುಮಾರ್ ವಿಜಯೋತ್ಸವದಲ್ಲಿ ಮಾತನಾಡಿ, ದೆಹಲಿ ಚುನಾವಣೆ ಗೆಲುವು ಕರ್ನಾಟಕದಲ್ಲೂ ಎಲ್ಲಾ ಕಾರ್ಯಕರ್ತರಲ್ಲೂ ಹೊಸ ವಿಶ್ವಾಸ, ಅತೀವ ಸಂತೋಷ ತಂದಿದೆ ಎಂದರು.
ದೇಶದ ರಾಜಧಾನಿ ದಹಲಿಯಲ್ಲಿ ಮುಂದಿನ 5 ವರ್ಷ ಡಬ್ಬಲ್ ಇಂಜಿನ್ ಸರ್ಕಾರ ಒಂದು ವಿಶ್ವಾಸದ ಆಡಳಿತ ಕೊಡಲಿದೆ. ನರೇಂದ್ರ ಮೋದಿ ಅವರ ಆಡಳಿತ ಹಾಗೂ ಅವರ ಜನಪ್ರಿಯತೆಗೆ ದೆಹಲಿ ಜನರು ಬಹಳ ದೊಡ್ಡ ಪ್ರಮಾಣದ ಬೆಂಬಲ ಕೊಟ್ಟಿದ್ದಾರೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ಮಾತನಾಡಿ, ದೆಹಲಿಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ಮೂಲಕ ಆಮ್ ಆದ್ಮಿಯ ಕೇಜ್ರಿವಾಲ್ ಅವರ ದುಷ್ಟ ಆಡಳಿತ ಕೊನೆಗೊಳಿಸಿದೆ ಎಂದರು.
ಈ ವೇಳೆ ಪಕ್ಷದ ಹಿರಿಯ ಮುಖಂಡರಾದ ಕೋಟೆ ರಂಗನಾಥ್, ಸಿ.ಆರ್.ಪ್ರೇಂ ಕುಮಾರ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಜಸಿಂತ ಅನಿಲ್ ಕುಮಾರ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ನಗರಾಧ್ಯಕ್ಷ ಪುಷ್ಪರಾಜ್, ರಾಜ್ಯ ಪ್ರತಿನಿಧಿ ಕೆ.ಪಿ.ವೆಂಕಟೇಶ್, ಜಿಲ್ಲಾ ಉಪಾಧ್ಯಕ್ಷ ಕವೀಶ್, ಮುಖಂಡರಾದ ನಾರಾಯಣಗೌಡ, ಪುಟ್ಟೇಗೌಡ ಇತರರು ಭಾಗವಹಿಸಿದ್ದರು.
ಚಿಕ್ಕಮಗಳೂರು ನಗರದಲ್ಲಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಭರ್ಜರಿ ವಿಜಯ ಸಾಧಿಸಿರುವ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಸಂಭ್ರಮ ಆಚರಿಸಿದರು.