ಮೆರವಣಿಗೆ ವಾಹನಕ್ಕೆ ವಿದ್ಯುತ್‌ ತಂತಿ ತಗುಲಿ ಯುವಕ ಸಾವು

KannadaprabhaNewsNetwork | Published : Apr 18, 2025 12:45 AM

ಸಾರಾಂಶ

ಗ್ರಾಮದಲ್ಲಿ ದೇವರ ಮೆರವಣಿಗೆ ವೇಳೆ ಬೆಳ್ಳಿರಥದ ವಾಹನಕ್ಕೆ ವಿದ್ಯುತ್ ತಂತಿ ತಗುಲಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದಾಬಸ್‍ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ದಾಬಸ್‍ಪೇಟೆ: ಗ್ರಾಮದಲ್ಲಿ ದೇವರ ಮೆರವಣಿಗೆ ವೇಳೆ ಬೆಳ್ಳಿರಥದ ವಾಹನಕ್ಕೆ ವಿದ್ಯುತ್ ತಂತಿ ತಗುಲಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದಾಬಸ್‍ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಸಿಂಗನಹಳ್ಳಿ ಅಗ್ರಹಾರದ ಮಹೇಶ್ (25) ಮೃತಪಟ್ಟ ದುರ್ದೈವಿ.

ಹೊಸನಿಜಗಲ್ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಗದ್ದುಗೆ ಮಾರಮ್ಮದೇವಿ ಜಾತ್ರಾ ಮಹೋತ್ಸವ ನಡೆಯುತ್ತಿತ್ತು. ಗುರುವಾರ ಬೆಳಿಗ್ಗೆ ಗ್ರಾಮದಲ್ಲಿ ದೇವರನ್ನು ಬೆಳ್ಳಿರಥದಲ್ಲಿ ಮೆರವಣಿಗೆ ಕೆರೆ ಏರಿ ಮೇಲೆ ಸಾಗುವ ವೇಳೆ ವಿದ್ಯುತ್ ಕಂಬವೊಂದು ವಾಲಿದ್ದು ವಿದ್ಯುತ್ ತಂತಿ ಬೆಳ್ಳರಥದ ಮೆರವಣಿಗೆ ವಾಹನಕ್ಕೆ ತಗುಲಿದೆ. ಈ ವೇಳೆ ಯುವಕ ವಾಹನದಿಂದ ಕೆಳಗೆ ಇಳಿದು ವಾಹನದ ಕಬ್ಬಿಣದ ಕಂಬಿ ಹಿಡಿದ ಪರಿಣಾಮ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸಾವಿನಿಂದ ಐದಾರು ಜನ ಪಾರು: ಬೆಳ್ಳಿ ರಥದ ಚಾಲಕ ಸೇರಿದಂತೆ ಗ್ರಾಮದ ನಾಲ್ಕೈದು ಜನರು ವಾಹನದಲ್ಲಿ ಕುಳಿತಿದ್ದರು. ಅದೃಷ್ಟವಷಾತ್ ವಾಹನದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿದ್ಯುತ್ ಕಂಬ ರಸ್ತೆ ಕಡೆಗೆ ವಾಲಿರುವ ಬಗ್ಗೆ ಹಲವಾರು ಬಾರಿ ಮನವಿ ಮಾಡಿದ್ದೇವೆ, ಕರೆಮಾಡಿ ತಿಳಿಸಿದ್ದೇವಾದರೂ ಯಾವೊಬ್ಬ ಕೆಇಬಿ ಅಧಿಕಾರಿಗಳಾಗಲಿ, ಲೈನ್ ಮೆನ್ ಗಳಾಗಳಿ ಸರಿಪಡಿಸಲಿಲ್ಲ. ದುರ್ಘಟನೆಗೆ ಕೆಇಬಿಯವರ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದರು.

ಮೃತನ ಕುಟುಂಬಸ್ಥರಿಗೆ ಆರು ಲಕ್ಷ ಪರಿಹಾರ: ಮೃತಪಟ್ಟ ಯುವಕನ ಕುಟುಂಬಕ್ಕೆ ವಾಹನದ ಮಾಲೀಕ ಐದು ಲಕ್ಷ ಹಾಗೂ ಗ್ರಾಮಸ್ಥರು ಒಂದು ಲಕ್ಷ ಸೇರಿ ಒಟ್ಟು 6 ಲಕ್ಷ ಪರಿಹಾರ ನೀಡುವ ಭರವಸೆ ನೀಡಿದರು.

ಘಟನಾ ಸ್ಥಳಕ್ಕೆ ದಾಬಸ್‍ಪೇಟೆ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ರಾಜು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Share this article