ಕೊಪ್ಪಳ: ಯುವಜನರು ತಮ್ಮಲ್ಲಿರುವ ಪ್ರತಿಭೆ, ಸಾಮರ್ಥ್ಯ ಗುರುತಿಸಿಕೊಂಡು ಸಾಧನೆಯತ್ತ ಗಮನಹರಿಸಬೇಕು. ಯುವಜನೋತ್ಸವದಂತಹ ಕಾರ್ಯಕ್ರಮಗಳು ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆಯಾಗಿವೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಮಂಜುನಾಥ ಗೊಂಡಬಾಳ ಹೇಳಿದರು.
ಹಿಂದೆ ಯುವಜನೋತ್ಸವಗಳಿಗೆ ಉತ್ತಮ ಸ್ಪಂದನೆ ದೊರೆಯುತ್ತಿತ್ತು. ಸಂಗೀತ, ಹಾರ್ಮೋನಿಯಂ ಸೇರಿದಂತೆ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಯುವಕರು ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದರು. ಇತ್ತೀಚೆಗೆ ಇಂತಹ ಚಟುವಟಿಕೆಯತ್ತ ಆಸಕ್ತಿ ಕಡಿಮೆಯಾಗುತ್ತಿರುವುದು ವಿಷಾದನೀಯ. ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಯುವಜನೋತ್ಸವಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಯುವಕರು ಏಕತೆ, ಸಹೋದರತೆ ಹಾಗೂ ರಾಷ್ಟ್ರ ನಿರ್ಮಾಣದ ಆಶಯಗಳನ್ನು ಬಲಪಡಿಸಿ, ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಯುವಶಕ್ತಿಯ ಸದ್ಬಳಕೆಯಿಂದ ಸಮರ್ಥ ಭಾರತ ನಿರ್ಮಾಣ ಸಾಧ್ಯ ಎಂದರು.ಕಾರ್ಯಕ್ರಮದಲ್ಲಿ ಕನ್ನಡ ಜಾನಪದ ಪರಿಷತ್ ಹಾಗೂ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಬಾಲಾಜಿ ಎಸ್. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. 2026-27ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದರಾದ ದಾವಲಸಾಬ ಅತ್ತಾರ ಹಾಗೂ ಶಿವಲಿಂಗಪ್ಪ ಎಂ. ಅವರನ್ನು ಸನ್ಮಾನಿಸಲಾಯಿತು.
ಮೈ ಭಾರತ್ ಜಿಲ್ಲಾ ಯುವ ಅಧಿಕಾರಿ ಮೇಘ ಜಿ.ಕೆ., ರವಿಕಾಂತ ಅಂಗಡಿ, ಶಿವಲಿಂಗಪ್ಪ ಕೊಟ್ನೇಕಲ್, ಪತ್ರಕರ್ತರಾದ ಜಿ.ಎಸ್. ಗೋನಾಳ, ಸಿರಾಜ್ ಬಿಸರಹಳ್ಳಿ, ಪ್ರಮೋದ್ ಕುಲಕರ್ಣಿ, ಶರಣಬಸವ ಬಂಡಿಹಾಳ, ಲಲಿತಮ್ಮ, ಶರಣಬಸಪ್ಪ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಕ್ಷಕ ಬಸವರಾಜ ಹನುಮಸಾಗರ ನಿರೂಪಿಸಿದರು.