ಕಡೂರು ತಾಲೂಕಿನಲ್ಲಿ 1111 ಯುವಕರು ನೊಂದಣಿ: ಯುವಕರು ನಮ್ಮ ದೇಶದ ಸಂಪತ್ತು
ಬೀರೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಯುವನಿಧಿ ಪೋಸ್ಟರ್ ಬಿಡುಗಡೆಕನ್ನಡಪ್ರಭ ವಾರ್ತೆ, ಬೀರೂರು.ರಾಜ್ಯದ ವಿದ್ಯಾವಂತ ನಿರುದ್ಯೋಗಿ ಯುವಕರ ಆರ್ಥಿಕ ಭವಿಷ್ಯ ಭದ್ರವಾಗಿಸಲು ಕಾಂಗ್ರೆಸ್ ಸರ್ಕಾರ ಯುವನಿಧಿ ಯೋಜನೆ ಜಾರಿಗೆ ತಂದು ಯಶಸ್ವಿಯಾಗಿ ಎರಡೂವರೆ ವರ್ಷ ಪೂರೈಸಿರುವುದು ಯುವಕರ ಬಾಳಿಗೆ ಸಹಕಾರಿಯಾಗಿದೆ ಎಂದು ಕಡೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಆಸಂದಿ ಕಲ್ಲೇಶ್ ತಿಳಿಸಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಉದ್ಯೋಗ ವಿನಿಮಯ ಕಚೇರಿ ಅಧಿಕಾರಿಗಳ ಸಮ್ಮುಖದಲ್ಲಿ ಶುಕ್ರವಾರ ಯುವನಿಧಿ ಯೋಜನೆ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು.ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು. ಇದರಂತೆ ಅಧಿಕಾರಕ್ಕೆ ಬಂದ ಬಳಿಕ ಐದು ಗ್ಯಾರಂಟಿಗಳ ಪೈಕಿ ನಾಲ್ಕು ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದ್ದು, 5ನೇ ಗ್ಯಾರಂಟಿಯಾಗಿರುವ ಯುವನಿಧಿ ಯೋಜನೆಗೆ ಚಾಲನೆ ನೀಡಿ ಎರಡುವರೆ ವರ್ಷವನ್ನು ಪೂರೈಸಿ ಯಶಸ್ವಿಯಾಗಿ ಸಾಗುತ್ತಿದೆ ಎಂದರು.ಸದ್ಯ ಕಡೂರು ತಾಲೂಕಿನಲ್ಲಿ ಯುವನಿಧಿಗಾಗಿ 1111 ಜನ ನಿರುದ್ಯೋಗಿ ಪಧವಿದರರು ಪ್ರಸಕ್ತ ಸಾಲಿನಲ್ಲಿ ಅರ್ಜಿ ಸಲ್ಲಿಸಿದ್ದು, ಒಟ್ಟು ₹2.85ಕೋಟಿ ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳ ಭವಿಷ್ಯದ ಬುನಾದಿ ಗಟ್ಟಿಗೊಳಿಸಲು ನುಡಿದಂತೆ ನಮ್ಮ ಸರ್ಕಾರ ನಡೆಯುತ್ತಿದ್ದು, ಪ್ರತಿಯೊಬ್ಬ ನಿರುದ್ಯೋಗಿ ಪದವಿಧರರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಆಗ ಮಾತ್ರ ಈ ಯೋಜನೆ ತಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಲೋಚನೆ ಸಾರ್ಥಕವಾಗುತ್ತದೆ. ವಿದ್ಯಾರ್ಥಿಗಳು ಅರ್ಜಿ ಹಾಕದ ನಿರುದ್ಯೋಗಿ ಪದವೀಧರ ಯುವಕರಿಗೆ ಯೋಜನೆ ಬಗ್ಗೆ ಅರಿವು ಮೂಡಿಸಿ ನಿಮ್ಮ ಭವಿಷ್ಯ ಕಟ್ಟಿಕೊಳ್ಳಲು ಮುಂದಾಗಬೇಕು. ಸ್ವಯಂ ಉದ್ಯೋಗ ಹುಡುಕಲು ಈ ಯೋಜನೆ ಸಹಕಾರಿ ಎಂದರು.ಜಿಲ್ಲಾಉದ್ಯೋಗ ವಿನಿಮಯ ಕಚೇರಿ ಅಧಿಕಾರಿ ದೀಪಕ್ ಮಾತನಾಡಿ, ಈ ಯೋಜನೆ ಪದವಿ ಅಥವಾ ಡಿಪ್ಲೊಮಾ ಪೂರ್ಣ ಗೊಳಿಸಿ, ಕನಿಷ್ಠ ಆರು ತಿಂಗಳ ಕಾಲ ನಿರುದ್ಯೋಗಿಗಳಾಗಿರುವ ಕರ್ನಾಟಕದ ಖಾಯಂ ನಿವಾಸಿಗಳಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತಿದ್ದು ಪದವೀಧರರಿಗೆ ತಿಂಗಳಿಗೆ ₹3,000 ಮತ್ತು ಡಿಪ್ಲೊಮಾ ಹೊಂದಿದವರಿಗೆ ₹1,500 ಸಿಗುತ್ತದೆ. ಈ ಭತ್ಯೆ ಗರಿಷ್ಠ 2 ವರ್ಷಗಳವರೆಗೆ ನೀಡಲಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಹರೀಶ್ ಕುಮಾರ್ ಮಾತನಾಡಿ, ಪ್ರಸ್ತುತ ರಾಜ್ಯ ಸರ್ಕಾರ ನೀಡಿದ ಪಂಚ ಗ್ಯಾರಂಟಿ ಯೋಜನೆಗಳು ಬಡ ಮತ್ತು ಮದ್ಯಮ ವರ್ಗದ ಜನರಿಗೆ ಆಶಾಕಿರಣ. ಹಿಂದೆ ನಮ್ಮ ಕಾಲದಲ್ಲಿ ಇಂತಹ ಯೋಜನೆಗಳಿರದೆ ಕಷ್ಟದಿಂದ ವಿದ್ಯಾಭ್ಯಾಸ ನಡೆಸುವಂತಾಗಿತ್ತು. ಇಂತಹ ಕಷ್ಟಗಳು ನಾಗರಿಕರು ಮತ್ತು ವಿದ್ಯಾರ್ಥಿಗಳ ಬಾಳಲ್ಲಿ ಬರಬಾರದೆಂದು ಹಂತ ಹಂತವಾಗಿ ವಿವಿಧ ಯೋಜನೆಗಳ ಮೂಲಕ ಸುಭದ್ರ ರಾಜ್ಯ ಕಟ್ಟುವ ನಿಟ್ಟಿನಲ್ಲಿ ಸರ್ಕಾರ ಸಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜನೋಪಯೋಗಿ ಕಾರ್ಯಕ್ರಮ ನೀಡುವ ಮೂಲಕ ನಾಡಿನ ಜನರ ದನಿಯಾಗಿದ್ದಾರೆ.ನಿರುದ್ಯೋಗಿಗಳ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ಬಂದಿದ್ದು, ಇಂತಹ ಯೋಜನೆಗಳು ವಿದ್ಯಾರ್ಥಿ ಗಳ ಉನ್ನತೀಕರಣಕ್ಕೆ ಬಯಸದೆ ಬಂದ ಭಾಗ್ಯ. ಈ ಯೋಜನೆ ಸದ್ಬಳಕೆ ಮಾಡಿಕೊಂಡು ಸೃಜನಾಶೀಲತೆಯಿಂದ ಯಾರ ಸಹಕಾರ ಪಡೆಯದೇ ನಿಮ್ಮ ಬದುಕು ಕಟ್ಟಿ ಕೊಂಡು ಇನ್ನೊಬ್ಬರಿಗೆ ಮಾದರಿಯಾಗಬೇಕು ಎಂದರು.ವೇದಿಕೆಯಲ್ಲಿ ಪುರಸಭೆ ಆಶ್ರಯ ಸಮಿತಿ ಸದಸ್ಯ ಬಿ.ಟಿ.ಚಂದ್ರಶೇಖರ್, ಕಾಲೇಜು ಸಿಡಿಸಿ ಕಮಿಟಿ ಸದಸ್ಯ ಬಿ.ಜಿ.ಮೈಲಾರಪ್ಪ, ಗ್ಯಾರಂಟಿ ಯೋಜನೆ ಸಮಿತಿ ಸದಸ್ಯರಾದ ಸೋಮಶೇಖರ್, ಮೂರ್ತಿ, ಉಪನ್ಯಾಸಕಿ ಮಂಜುಳ, ಶಾಂತ, ಸೇರಿದಂತೆ ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.26 ಬೀರೂರು 2ಬೀರೂರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಅಧಿಕಾರಿಗಳ ಸಮ್ಮುಖದಲ್ಲಿ ಶುಕ್ರವಾರ ಯುವನಿಧಿ ಯೋಜನೆ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಪೋಸ್ಟರ್‌ನ್ನು ಗ್ಯಾರಂಟಿ ಸಮಿತಿ ಅಧ್ಯಕ್ಷ ಆಸಂದಿ ಕಲ್ಲೇಶ್ ಬಿಡುಗಡೆ ಮಾಡಿದರು. ಪ್ರಾಂಶುಪಾಲ ಡಾ.ಹರೀಶ್ ಕುಮಾರ್, ಬಿ.ಟಿ.ಚಂದ್ರಶೇಖರ್, ಬಿ.ಜಿ.ಮೈಲಾರಪ್ಪ ಮತ್ತಿತರಿದ್ದರು.