ಕೃಷ್ಣ ಎನ್. ಲಮಾಣಿ
ವಿಜಯನಗರ ಸಾಮ್ರಾಜ್ಯದ ಚರಿತ್ರೆ, ಹಕ್ಕ- ಬುಕ್ಕರು, ವಿದ್ಯಾರಣ್ಯರು, ಪ್ರೌಢದೇವರಾಯ, ಶ್ರೀಕೃಷ್ಣದೇವರಾಯ ಸೇರಿದಂತೆ ಹಂಪಿಯ ಸುವರ್ಣಯುಗ, ಆಗಿನ ಕಾಲದಲ್ಲೇ ಹಂಪಿಗೆ ವಿದೇಶಿ ಪ್ರವಾಸಿಗರು ಆಗಮಿಸಿ ಇಲ್ಲಿನ ಆಡಳಿತವನ್ನು ವರ್ಣನೆ ಮಾಡಿರುವುದನ್ನು ಯುವಕರು ಕೇಳಿ ರೋಮಾಂಚನಗೊಂಡರು.
ಜೀವಂತ ಚರಿತ್ರೆ: ಹಂಪಿಯ ಜೀವಂತ ಚರಿತ್ರೆಯನ್ನು ಕಣ್ತುಂಬಿಕೊಂಡ ಯುವ ಸಮೂಹ ದೇವಾಲಯಗಳು, ಮಂಟಪ, ಸ್ಮಾರಕಗಳನ್ನು ವೀಕ್ಷಿಸಿ ಇತಿಹಾಸ ತಿಳಿದುಕೊಂಡರು. ಹಂಪಿಯ ವಸ್ತುಪ್ರದರ್ಶನ, ಪುಸ್ತಕ ಮೇಳ, ಪುಷ್ಪಮೇಳಕ್ಕೂ ಭೇಟಿ ನೀಡಿ ಯುವಕರು ಖುಷಿಪಟ್ಟರು.ಹಂಪಿಯ ವಿರೂಪಾಕ್ಷೇಶ್ವರ ದೇವಾಲಯ, ರಥಬೀದಿ, ಕಲ್ಲಿನತೇರು, ಕಡಲೆಕಾಳು ಗಣೇಶ, ವಿಜಯ ವಿಠ್ಠಲ ದೇವಾಲಯ, ಹಜಾರರಾಮ ದೇವಾಲಯ ಸೇರಿದಂತೆ ವಿವಿಧ ಸ್ಮಾರಕಗಳನ್ನು ಕಂಡು ಇತಿಹಾಸವನ್ನು ಯುವಕರು ಅರಿತುಕೊಂಡರು.
ಹಂಪಿ ಉತ್ಸವ: ಹಂಪಿ ಉತ್ಸವ 1970ರಲ್ಲಿ ಕನಕ- ಪುರಂದರ ಉತ್ಸವವಾಗಿ ಆಚರಣೆಗೊಂಡು ಎಂ.ಪಿ. ಪ್ರಕಾಶ್ ಅವರ ಇಚ್ಛಾಸಕ್ತಿಯಿಂದ ಹಂಪಿ ಉತ್ಸವವಾಗಿ ಆಚರಣೆ ಮಾಡುತ್ತಾ ಬರಲಾಗುತ್ತಿದೆ ಎಂಬುದನ್ನು ಕೇಳಿ ತಿಳಿದುಕೊಂಡ ಯುವ ಸಮೂಹ, ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿವಿಗಾಗಿ ಇಂತಹ ಉತ್ಸವಗಳು ಕಾಲ ಕಾಲಕ್ಕೆ ನಡೆಯಬೇಕೆಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು.
ಧ್ವನಿ ಮತ್ತು ಬೆಳಕು: ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಕಟ್ಟಿಕೊಡುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ವೀಕ್ಷಿಸಿದ ಯುವಕರು, ವಿಜಯನಗರ ನೆಲದ ವೈಭವಪೇತ ಇತಿಹಾಸಕ್ಕೆ ಮಾರುಹೋದರು. ಹಂಪಿ ಉತ್ಸವ ಬರೀ ಕಾಟಾಚಾರದ ಉತ್ಸವವಲ್ಲ, ಮುಂದಿನ ಪೀಳಿಗೆಗೆ ಈ ಉತ್ಸವ ಇತಿಹಾಸವನ್ನು ಉಣಬಡಿಸಿದೆ. ಅಷ್ಟೇ ಅಲ್ಲ, ಕಲಾವಿದರಿಗೂ ಅನ್ನ ಕೊಡುವ ಉತ್ಸವವಾಗಿದೆ.