ಯುವಸಮೂಹ ಜನಪದ ಸೊಗಡು ಉಳಿಸಲು ಮುಂದಾಗಿ

KannadaprabhaNewsNetwork |  
Published : Apr 10, 2025, 01:00 AM IST
ಸಿಕೆಬಿ-3 ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜನಪದ ಉತ್ಸವ ಮತ್ತು ಸಾಂಸ್ಕೃತಿಕ ಹಬ್ಬ-2025 ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಬಾವಿಗೆ ಪೂಜೆ ಸಲ್ಲಿಸಿ ನೀರು ಸೇದುತ್ತಿರುವುದು | Kannada Prabha

ಸಾರಾಂಶ

ಜನಪದ ಕಲೆಗಳು ಈ ಮಣ್ಣಿನ ಸಂಸ್ಕೃತಿಗಳು, ರಂಗಭೂಮಿ, ಜನಪದ ಗೀತೆಗಳು, ಕಲಾ ನೃತ್ಯಗಳು, ಸೋಬಾನೆ ಪದಗಳು, ಹರಿಕಥೆಗಳು ಸೇರಿ ಮುಂತಾದ ಕಲೆಗಳನ್ನು ಇಂದಿನ ಯುವಸಮೂಹ ಕಲಿಯುವ ಮೂಲಕ ಜನಪದ ಸೊಗಡನ್ನು ಉಳಿಸುವಲ್ಲಿ ಮುಂದಾಗಬೇಕೆಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜನಪದ ಕಲೆಗಳು ಈ ಮಣ್ಣಿನ ಸಂಸ್ಕೃತಿಗಳು, ರಂಗಭೂಮಿ, ಜನಪದ ಗೀತೆಗಳು, ಕಲಾ ನೃತ್ಯಗಳು, ಸೋಬಾನೆ ಪದಗಳು, ಹರಿಕಥೆಗಳು ಸೇರಿ ಮುಂತಾದ ಕಲೆಗಳನ್ನು ಇಂದಿನ ಯುವಸಮೂಹ ಕಲಿಯುವ ಮೂಲಕ ಜನಪದ ಸೊಗಡನ್ನು ಉಳಿಸುವಲ್ಲಿ ಮುಂದಾಗಬೇಕೆಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜನಪದ ಉತ್ಸವ ಮತ್ತು ಸಾಂಸ್ಕೃತಿಕ ಹಬ್ಬ-2025 ಕಾರ್ಯಕ್ರಮವನ್ನು ಸಾಂಪ್ರದಾಯಿಕ ಉಡುಗೆ ತೊಟ್ಟು ರಾಗಿ, ಭತ್ತ ಹಾಗೂ ಆಹಾರ ಧಾನ್ಯಗಳ ರಾಶಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ನಾಟಕ ಹಾಗೂ ಜಾನಪದದ ಬಗ್ಗೆ ತಿಳಿದಿರುವ ಕಲಾವಿದರು ತಂಡಗಳನ್ನು ಕಟ್ಟಿಕೊಂಡು ಎಲ್ಲೆಡೆ ಪ್ರದರ್ಶನ ನೀಡಿ ಅರಿವು ಮೂಡಿಸಬೇಕಿದೆ. ಇಲ್ಲವಾದಲ್ಲಿ ಮುಂದಿನ ಪೀಳಿಗೆಗೆ ಜನಪದ ಕಲೆಗಳ ಮಾಹಿತಿ ಇಲ್ಲವಾಗುವುದು. ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆ ಹೊರತರಲು ಇಂತಹ ಯುವ ಪೀಳಿಗೆ ಜಾನಪದ ಹಾಗೂ ದೇಶಿ ಸಂಸ್ಕೃತಿಯ ಮಹತ್ವ ಅರಿಯಬೇಕಿದೆ. ಓದಿನ ಜೊತೆಯಲ್ಲಿ ಕಲೆಗಳನ್ನು ಮೈಗೂಡಿಸಿಕೊಂಡಲ್ಲಿ ಸಮಾಜದಲ್ಲಿ ಉತ್ತಮ ಮನ್ನಣೆ ಪಡೆಯಲು ಸಾಧ್ಯವಾಗುವುದು ಎಂದರು.

ಪ್ರಾಂಶುಪಾಲ ಡಾ.ಮುನಿರಾಜು ಮಾತನಾಡಿ, ಆಧುನೀಕತೆಯ ಭರಾಟೆಯಲ್ಲಿ ಜನಪದ ಸಂಸ್ಕೃತಿ ಅಳಿಯಲು ಅವಕಾಶ ನೀಡಬಾರದು. ಜನಪದ ಸಂಸ್ಕೃತಿ ಅಳಿದರೆ ನಮ್ಮತನವನ್ನು ನಾವು ಕಳೆದುಕೊಂಡಂತೆ, ಜನಪದ ಸೊಗಡಿನಲ್ಲೇ ಭಾರತೀಯ ಮೂಲ, ಪರಂಪರೆಯ ಸತ್ಯ ಅಡಗಿದೆ. ಹಾಗಾಗಿ ಆಧುನಿಕತೆ ಭರಾಟೆಗೆ ಸಿಲುಕಿ ಇಂತಹ ಮಾತೃ ಸಂಸ್ಕೃತಿ ಅಳಿಯಲು ಬಿಡಬಾರದು. ಜನಪದ ಸಂಸ್ಕೃತಿ ಉಳಿಸಿ ಪೋಷಿಸಬೇಕು ಎಂದರು.

ಜಾನಪದ ಉತ್ಸವದ ಹಿನ್ನೆಲೆಯಲ್ಲಿ ಕಾಲೇಜಿನ ಆವರಣವನ್ನು ಜನಪದ ವಸ್ತುಗಳಿಂದ ಅಲಂಕರಿಸಿ ಜಾನಪದ ಲೋಕವನ್ನೇ ಸೃಷ್ಟಿಸಲಾಗಿತ್ತು. ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ಪಾಲ್ಗೊಂಡಿದ್ದರು.

ಕಾಲೇಜಿನ ಮುಂಭಾಗ ಹಸಿರು ಗರಿಯ ಚಪ್ಪರವನ್ನು ಹಾಕಿ ರಾಗಿ, ಭತ್ತ, ಜೋಳ, ಅವರೆ, ತೊಗರಿ, ಹುರುಳಿ ಇತ್ಯಾದಿ ಆಹಾರ ಧಾನ್ಯ, ತೆಂಗು, ಅಡಿಕೆ ಜೊತೆಗೆ ಪೂರ್ವಜರು ಬಳಸುತ್ತಿದ್ದ ಬಾವಿಒನಕೆ, ಕಡುವಳ್ಳು, ಬೀಸುವ ಕಲ್ಲು, ರುಬ್ಬು ಗುಂಡು, ಮಣ್ಣಿನ ಒಲೆ, ಮಣ್ಣಿನ ಪಾತ್ರೆ ಇತ್ಯಾದಿ ವಸ್ತುಗಳಿಂದ ಇಡೀ ಕಾಲೇಜಿನ ಆವರಣವನ್ನೇ ಅಲಂಕರಿಸಲಾಗಿತ್ತು.

ವಿದ್ಯಾರ್ಥಿಗಳು ಹಿಂದು ಸಂಪ್ರದಾಯದಂತೆ ಯುವತಿಗೆ ಯುವಕನ ಪೋಷಾಕು ಹಾಕಿ ಯುವತಿಯೊಂದಿಗೆ ಅಣಕು ಮದುವೆ, ಸಪ್ತಪದಿ ಸಹ ನಡೆಸಿ ಕೊಟ್ಟರು.

ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಯನ್ನು ನಗರದ ಅಂಬೇಡ್ಕರ್ ವೃತ್ತದಿಂದ ಜಾನಪದದ ಸೊಗಡಿನೊಂದಿಗೆ ಶೃಂಗಾರ ಮಾಡಿದ ಎತ್ತಿನ ಬಂಡಿಯಲ್ಲಿ ಡೋಲು, ನಗಾರಿ, ಆರೇವಾದ, ಚೆಟ್ಟಿಮೇಳ, ಕೋಲಾಟ ಇತ್ಯಾದಿ ಜನಪದ ಕಲಾತಂಡಗಳೊಂದಿಗೆ ವೇದಿಕೆಯವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಮೆರವಣಿಗೆಯ ಉದ್ದಕ್ಕೂ ತಮಟೆ, ಡೋಲು, ವಾದ್ಯಗಳ ತಾಳಕ್ಕೆ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ಹೆಜ್ಜೆ ಹಾಕಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ರವರು ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರೊಂದಿಗೆ ಕೋಲಾಟದ ಹಾಡಿಗೆ ನೃತ್ಯ ಮಾಡಿ ಎಲ್ಲರ ಮನ ಸೂರೆಗೊಂಡರು ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಭೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''