ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸಮಾಜ ಕಟ್ಟುವ ಕಾಯಕಕ್ಕೆ ಯುವಕರು ಭದ್ರ ಬುನಾದಿಯಾಗಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಧೀಶ ಈಶ್ವರ್ ಹೇಳಿದರು.ನಗರದ ಜೆ.ಎಸ್.ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ಮತ್ತು ಯುವಜನ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ರೆಡ್ ರಿಬ್ಬನ್ ಕ್ಲಬ್ ಹಾಗೂ ಯುವ ರೆಡ್ ಕ್ರಾಸ್ ಘಟಕ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯುವ ದಿನಾಚರಣೆ, ಎಚ್.ಐ.ವಿ, ಏಡ್ಸ್ ಅರಿವು ಮಾಸಾಚರಣೆ 2024ರ ಕಾರ್ಯಕ್ರಮ ಉದ್ಘಾಟಿಸಿ, ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.ಯುವಕರನ್ನು ಜಾಗೃತಗೊಳ್ಳಿಸುವ ಸಲುವಾಗಿ ಪ್ರತಿ ವರ್ಷ ಆ.12ರಂದು ಅಂತಾರಾಷ್ಟ್ರೀಯ ಯುವ ದಿನಾಚರಣೆ ಆಚರಿಸಲಾಗುತ್ತಿದೆ. ಯುವಕರು ನಮ್ಮ ದೇಶದ ಬೆನ್ನೆಲುಬಾಗಿದ್ದು. ದೇಶದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು. ಯಾವುದೇ ದುಶ್ಚಟಗಳಿಗೆ ಒಳಗಾಗದೆ ಉತ್ತಮ ಶಿಕ್ಷಣ, ಆರೋಗ್ಯ ಹೊಂದಬೇಕು. ಸ್ವಾಮಿ ವಿವೇಕಾನಂದರು ಹೇಳಿರುವಂತೆ ಏಳಿ, ಏದ್ದೇಳಿ, ಗುರಿ ಮಟ್ಟುವ ತನಕ ನಿಲ್ಲದಿರಿ ಎಂಬ ಘೋಷಣೆಯಂತೆ ಯುವಕರು ಗುರಿಯ ಕಡೆ ಛಲದಿಂದ ಮುನ್ನಡೆಯಬೇಕು ಎಂದರು.
ಎಚ್.ಐ.ವಿ ಹರಡುವಿಕೆಯಿಂದ ದೇಹದಲ್ಲಿ ರೋಗ ನಿರೋದಕ ಶಕ್ತಿ ಕಡಿಮೆಯಾಗಿ ಅನಾರೋಗ್ಯ ಉಂಟಾಗಲಿದೆ. ಎಚ್.ಐ.ವಿ ಸೊಂಕಿತರನ್ನು ಸಮಾಜದಲ್ಲಿ ಮಾನವೀಯತೆಯಿಂದ ನೋಡಿಕೊಳ್ಳಬೇಕು. ಸಮಾಜದಲ್ಲಿ ಬದುಕುವ ಹಕ್ಕು ಅವರಿಗೂ ಇದ್ದು, ಎಲ್ಲರಂತೆ ಅವರನ್ನು ಸಮಾನವಾಗಿ ಕಾಣಬೇಕು. ಎಚ್.ಐ.ವಿ ಸೊಂಕಿತರು ಉತ್ತಮ ಜೀವನ ಶೈಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.ಡಿಎಚ್‌ಒ ಎಸ್.ಚಿದಂಬರ ಮಾತನಾಡಿ, ಯುವಜನಾಂಗಕ್ಕೆ ಎಚ್.ಐ.ವಿ ಏಡ್ಸ್ ಬಗ್ಗೆ ಅರಿವು ಮೂಡಿಸುವುದರಿಂದ ಸೋಂಕು ಹರಡುವುದನ್ನು ತಡೆಗಟ್ಟಬಹುದು. ಎಚ್.ಐ.ವಿ ಮತ್ತು ಏಡ್ಸ್ ಬಗ್ಗೆ ಯುವಕರು ಸಂಪೂರ್ಣ ಜಾಗೃತರಾಗಿ ಇತರಿಗೂ ಅರಿವು ಮೂಡಿಸುವುದು ಯುವಕರ ಕರ್ತವ್ಯ ಎಂದರು. ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಎಂ ಎಸ್ ರವಿಕುಮಾರ್ ಮಾತನಾಡಿ, 2000ರಿಂದ ಪ್ರತಿ ವರ್ಷ ಪ್ರಪಂಚಾದ್ಯಂತ ಅಂತಾರಾಷ್ಟ್ರೀಯ ಯುವ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಯುವಕರಿಂದ ಮಾತ್ರ ದೇಶ ಅಭಿವೃದ್ಧಿಯ ಕಡೆ ಸಾಗಲು ಸಾಧ್ಯ ಎಂದರು.
ಜೆ.ಎಸ್.ಎಸ್ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ. ಎನ್. ಮಹದೇವಸ್ವಾಮಿ ಮಾತನಾಡಿ, ಸ್ವಾಮಿ ವಿವೇಕಾನಂದ ಹಾಗೂ ಅಬ್ದುಲ್ ಕಲಾಂ ಆದರ್ಶಗಳನ್ನು ಅನುಸರಿಸಿ ಯುವಕರು ಮುನ್ನಡೆಯಬೇಕು. ಯುವಕರು ರಾಷ್ಟ್ರದ ಸಂಪತ್ತು ಆಗಿದ್ದಾರೆ ಎಂದರು. ಯುವ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕ ಉಮೇಶ್, ಸಂಚಾಲಕ ಮಹೇಶ್, ನೆಹರು ಯುವ ಕೇಂದ್ರದ ಸತೀಶ್ ಪಡುಓಲೆ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ್ ಪಾಲ್ಗೊಂಡಿದ್ದರು.