ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಆರ್ಯವೈಶ್ಯ ಸಮಾಜ ಕೇವಲ ತಾವಾಯಿತು ತಮ್ಮ ದುಡಿಮೆ ಆಯಿತು ಎಂಬಂತೆ ನಡೆಯುತ್ತಿದ್ದ ಕಾಲ ಇದೀಗ ಬದಲಾಗಿದೆ. ನಾವು ಸಹ ಸಮಾಜದಲ್ಲಿ ನಮ್ಮದೇ ಆದ ಛಾಪನ್ನು ಮೂಡಿಸುವತ್ತ ಗಮನ ಹರಿಸಬೇಕಿದೆ. ಜತೆಗೆ ನಮ್ಮ ಯುವಜನತೆ ಕಟಿಬದ್ಧರಾಗಿರಬೇಕೆಂದು ರಾಜ್ಯ ಆರ್ಯವೈಶ್ಯ ಸಮಾಜದ ಮೈಸೂರು ವಿಭಾಗೀಯ ಕಾರ್ಯದರ್ಶಿ ಈ.ಕೆ. ಅನಂತ್ ನುಡಿದರು.ಪಟ್ಟಣದ ಶ್ರೀಕನ್ಯಕಾ ಪರಮೇಶ್ವರಿ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಕರ್ನಾಟಕ ಆರ್ಯವೈಶ್ಯ ಮಹಾಸಭೆಯ ಯೋಜನೆಗಳನ್ನು ಮತ್ತು ಸವಲತ್ತುಗಳನ್ನು ಪ್ರತಿ ಆರ್ಯವೈಶ್ಯ ಪ್ರಜೆಗೂ ತಲುಪಿಸುವ ಸಲುವಾಗಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮುಂದಿನ ದಿನಗಳಲ್ಲಿ ನಮ್ಮ ಆರ್ಯವೈಶ್ಯ ಸಮಾಜದ ವಿದ್ಯಾಲಯಗಳನ್ನು ಸ್ಥಾಪಿಸಿ, ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವ ಜತೆಗೆ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ರಂಗದಲ್ಲಿ ತೊಡಗಿಸಿಕೊಂಡು ನಾವುಗಳು ನೂರಾರು ಮಂದಿಗೆ ಉದ್ಯೋಗ ನೀಡುವ ಹಂತ ತಲುಪಬೇಕಾದ ಅವಕಾಶಗಳನ್ನು ಸುಷ್ಟಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗ ನೀಡುವಂತ ದೊಡ್ಡ ಮಟ್ಟದ ಕಾರ್ಖಾನೆಗಳನ್ನು ಆರಂಭಿಸಬೇಕು, ಇದರಿಂದ ಆರ್‍ಯವೈಶ್ಯ ಜನಾಂಗವೂ ಸಹ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ನೀಡಿವಂತ ಚೈತನ್ಯ ಪಡೆಯುವಂತೆ ಆಗುತ್ತೆ ಎಂದರು.
ಹಾಸನ ಜಿಲ್ಲೆ ಆರ್‍ಯವೈಶ್ಯ ಮಂಡಳಿಯ ಕಾರ್ಯದಶೀ ಕೆ.ಆರ್. ನಾರಾಯಣ್ ಮಾತನಾಡಿ, ಆರ್ಯವೈಶ್ಯ ಸಮಾಜದ ವತಿಯಿಂದ ವಿಶ್ವರೂಪಿಣಿ ಶ್ರೀ ವಾಸವಿ ಚಲನ ಚಿತ್ರದ ಪ್ರದರ್ಶನವನ್ನು ಹಾಸನ ನಗರದ ಶುಬೋಧಯ ಕಲ್ಯಾಣ ಮಂಟಪದಲ್ಲಿ ಡಿಸೆಂಬರ್ ೨೧ರ ಭಾನುವಾರ ನಾಲ್ಕು ಪ್ರದರ್ಶನಗಳನ್ನು ನಡೆಸುತ್ತಿದ್ದು, ಈ ಪ್ರದರ್ಶನವನ್ನು ಪ್ರತ್ರಿಯಬ್ಬರು ಟಿಕೆಟ್ ಕೊಂಡು ಚಿತ್ರ ವೀಕ್ಷಿಸಿ ಬೆಂಬಲಿಸಬೇಕೆಂದು ಮನವಿ ಮಾಡಿದರು.ರಾಜ್ಯ ಆರ್ಯವೈಶ್ಯ ಮಹಾಸಭಾದ ಸಂಘಟನಾ ಕಾರ್ಯದರ್ಶಿ ಎ.ಆರ್. ರವಿಕುಮಾರ್, ಇತರರು ಮಾತನಾಡಿದರು. ಹಾಸನಾಂಬೆ ಜಾತ್ರೆಯಲ್ಲಿ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಆರ್ಯವೈಶ್ಯ ಸಮಾಜದ ನಿರ್ದೇಶಕ ಎಚ್.ಎಸ್.ಮಂಜುನಾಥಗುಪ್ತ ಸ್ವಾಗತಿಸಿ, ನಿರೂಪಿಸಿದರು, ಮುರುಳಿಧರಗುಪ್ತ ವಂದಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ವಿಭಾಗೀಯ ಉಪಾಧ್ಯಕ್ಷ ಕೆ.ಜಿ. ಪಾರ್ಥಸಾರಥಿ, ಹಾಸನ ಜಿಲ್ಲಾಧ್ಯಕ್ಷ ಪಿ.ಜಿ.ಶ್ರೀಕಾಂತ್, ಉಪಾಧ್ಯಕ್ಷ ಕೆ.ಎಲ್.ಎನ್. ಬಾಬು, ಜಿಲ್ಲಾ ನಿರ್ದೇಶಕ ಮುರುಳಿಧರಗುಪ್ತ, ಕಾರ್ಯದರ್ಶಿ ಎಚ್.ಪಿ. ರಮೇಶ್ ಇತರರು ಇದ್ದರು.