ಹೂವಿನಹಡಗಲಿ: ಇಂದು ನಮಗೆ ಮಾದರಿ ವ್ಯಕ್ತಿಗಳೇ ಸಿಗುತ್ತಿಲ್ಲ. ಜನಪ್ರಿಯತೆ ಇರುವ ವ್ಯಕ್ತಿಗಳನ್ನು ಮಾದರಿಯನ್ನಾಗಿ ಮಾಡಿಕೊಂಡು, ಸಾಧಕರನ್ನು ನೇಪತ್ಯಕ್ಕೆ ಸರಿಸಿದ್ದೇವೆ ಎಂದು ಹಂಪಿ ಕನ್ನಡ ವಿವಿಯ ಕುಲಪತಿ ಡಿ.ವಿ. ಪರಮಶಿವಮೂರ್ತಿ ಹೇಳಿದರು.
ಇಂದಿನ ಯುವಕರಿಗೆ ಜನಪ್ರಿಯತೆ ಇರುವ ವ್ಯಕ್ತಿಗಳು ಮಾದರಿಯಾಗಿದ್ದಾರೆ, ಆದರೆ ನೈಜ ಸಾಧಕರನ್ನು ನೇಪತ್ಯಕ್ಕೆ ತಳ್ಳಿದ್ದಾರೆ. ಇದು ನಿಮ್ಮ ಮನಸ್ಸಿಗೆ ತಕ್ಕ ಮಟ್ಟಿಗೆ ಖುಷಿ ನೀಡುತ್ತದೆ. ಆದರೆ ಜೀವನದ ಮೌಲ್ಯಗಳು ಕುಸಿಯುತ್ತವೆ ಎಂದರು.
ಕನ್ನಡ ಸಾಹಿತ್ಯ ಲೋಕದಲ್ಲಿ ವೀರಶೈವ ಕವಿಗಳ ಕೊಡುಗೆ ಅಪಾರವಾಗಿದೆ. ಈ ನಿಟ್ಟಿನಲ್ಲಿ ಡಾ.ಎಸ್.ವಿದ್ಯಾಶಂಕರ ಬಹು ದೊಡ್ಡ ಕೊಡುಗೆ ನೀಡಿದ್ದಾರೆ. ಇಡೀ ವಿಶ್ವವೇ ಬೆರಗಾಗುವಂತೆ ಅವರು ವೀರಶೈವ ಸಾಹಿತ್ಯ ಕುರಿತು ಸಂಶೋಧನೆ ಮಾಡಿದ್ದಾರೆ. ಇಂತವರು ನಮಗೆ ಮಾದರಿಯಾಗಬೇಕಿದೆ. 80 ಪುಸ್ತಕಗಳನ್ನು ಬರೆದು ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.ಶರಣರು ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಿ, ತಮ್ಮ ವಚನಗಳ ಮೂಲಕ ಸಮಾಜವನ್ನು ಸರಿದಾರಿಗೆ ತರುವಂತಹ ಕೆಲಸ ಮಾಡಿದ್ದಾರೆ. ವೀರಶೈವ ಸಾಹಿತ್ಯ, ಪರಂಪರೆ, ವೈಭವವನ್ನು ಉಳಿಸಿ ಬೆಳೆಸಲು ಡಾ.ಎಸ್.ವಿದ್ಯಾಶಂಕರ ವೀರಶೈವ ಸಾಹಿತ್ಯ ಚರಿತ್ರೆಯನ್ನು ನಮಗೆ ಉಳಿಸಿ ಹೋಗಿದ್ದಾರೆ ಎಂದರು.
ವೀವಿ ಸಂಘದ ಕಾರ್ಯದರ್ಶಿ ಡಾ.ಅರವಿಂದ ಪಾಟೀಲ್, ರುದ್ರೇಶ ಅದರಂಗಿ, ಎನ್.ಎಂ.ರವಿಕುಮಾರ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿ.ಮೋಹನರೆಡ್ಡಿ ಮಾತನಾಡಿದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಕೆ. ರವೀಂದ್ರನಾಥ ಪ್ರಾಸ್ತಾವಿಕ ಮಾತನಾಡಿದರು. ಜಿಬಿಆರ್ ಪದವಿ ಕಾಲೇಜು ಪ್ರಾಚಾರ್ಯ ಎಸ್.ಎಸ್. ಪಾಟೀಲ್, ಪಿಯು ಕಾಲೇಜು ಪ್ರಾಚಾರ್ಯ ಅಮರೇಗೌಡ ಪಾಟೀಲ್, ಡಾ.ವೈ.ಚಂದ್ರಬಾಬು ಸೇರಿದಂತೆ ಇತರರಿದ್ದರು.