ಯುವಕರು ಭಾರತ್ ಜೋಡೋ ಯುವ ಸಂಘಕ್ಕೆ ನೋಂದಣಿ ಮಾಡಿಕೊಳ್ಳಿ: ವಿನಯ್ ಗೌಡ

KannadaprabhaNewsNetwork |  
Published : Aug 22, 2026, 01:45 AM IST
ಮಾಗಡಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಭಾರತ್ ಜೋಡೋ ಯುವ ಸಂಘ ನೋಂದಣಿ ಬಗ್ಗೆ ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್ ಗೌಡ ಸುದ್ದಿಗಾರರೊಂದಿಗೆ ಮಾತನಾಡಿದರು. | Kannada Prabha

ಸಾರಾಂಶ

ಸಾಮಾಜಿಕ ನ್ಯಾಯ ಮತ್ತು ಮಹಿಳಾ ಪ್ರಾತಿನಿಧ್ಯಕ್ಕೆ ಒತ್ತು ನೀಡಲಾಗಿದ್ದು, ಕಾರ್ಯಕಾರಿ ಸಮಿತಿಯಲ್ಲಿ ವಿವಿಧ ವರ್ಗಗಳ ಪ್ರತಿನಿಧಿತ್ವಕ್ಕೆ ಅವಕಾಶ ಕಲ್ಪಿಸಲಾಗಿದೆ. ಎಸ್‌ಸಿ/ಎಸ್‌ಟಿ ವರ್ಗದಿಂದ ಮೂವರು, ಬಿಸಿಎಂ/ಅಲ್ಪಸಂಖ್ಯಾತ ವರ್ಗದಿಂದ ನಾಲ್ವರು ಹಾಗೂ ಸಾಮಾನ್ಯ ವರ್ಗದಿಂದ ಎಂಟು ಮಂದಿ ಸೇರಿದಂತೆ ಒಟ್ಟು 15 ಮಂದಿ ಇರಲಿದ್ದು, ಮಹಿಳೆಯರಿಗೂ ಕಡ್ಡಾಯ ಪ್ರಾತಿನಿಧ್ಯ ನೀಡಲಾಗಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಮಾಗಡಿ

ರಾಜ್ಯ ಸರ್ಕಾರದ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ವತಿಯಿಂದ ಯುವಕರನ್ನು ಒಂದೇ ವೇದಿಕೆಗೆ ತಂದು, ಅವರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶದಿಂದ ‘ಭಾರತ್ ಜೋಡೋ ಯುವ ಸಂಘ’ ಯೋಜನೆಯನ್ನು ಜಾರಿಗೆ ತರಲಾಗಿದ್ದು, ತಾಲೂಕಿನ 26 ಗ್ರಾಮ ಪಂಚಾಯಿತಿಗಳು ಹಾಗೂ ಪುರಸಭೆ ವ್ಯಾಪ್ತಿಯ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್ ಗೌಡ ಮನವಿ ಮಾಡಿದರು.

ಪಟ್ಟಣದ ಜ್ಯೋತಿನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಯೋಜನೆಯಲ್ಲಿ ನೋಂದಣಿ ಮಾಡಿಸಿಕೊಳ್ಳಲು 16 ರಿಂದ 35 ವರ್ಷದೊಳಗಿನ ಯುವಕರು ಮತ್ತು ಯುವತಿಯರು ಸದಸ್ಯರಾಗಬಹುದು. ನೋಂದಣಿಗೆ ಆಧಾರ್ ಕಾರ್ಡ್ ಅಗತ್ಯವಿದ್ದು, ಸದಸ್ಯತ್ವ ಶುಲ್ಕವಾಗಿ ₹10 ಪಾವತಿಸಬೇಕು ಎಂದು ತಿಳಿಸಿದರು.

ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 100 ಮಂದಿ ಯುವಕರು ಸದಸ್ಯರಾದರೆ ಸಂಘವನ್ನು ರಚಿಸಬಹುದಾಗಿದೆ. 100 ರಿಂದ 250 ಸದಸ್ಯರ ವರೆಗೆ ಸಂಘವನ್ನು ರಚಿಸುವ ಅವಕಾಶವಿದ್ದು, ಸಂಘದಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಖಜಾಂಚಿ ಸೇರಿದಂತೆ ಒಟ್ಟು 15 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರು ಇರಲಿದ್ದಾರೆ ಎಂದು ವಿವರಿಸಿದರು.

ಸಾಮಾಜಿಕ ನ್ಯಾಯ ಮತ್ತು ಮಹಿಳಾ ಪ್ರಾತಿನಿಧ್ಯಕ್ಕೆ ಒತ್ತು ನೀಡಲಾಗಿದ್ದು, ಕಾರ್ಯಕಾರಿ ಸಮಿತಿಯಲ್ಲಿ ವಿವಿಧ ವರ್ಗಗಳ ಪ್ರತಿನಿಧಿತ್ವಕ್ಕೆ ಅವಕಾಶ ಕಲ್ಪಿಸಲಾಗಿದೆ. ಎಸ್‌ಸಿ/ಎಸ್‌ಟಿ ವರ್ಗದಿಂದ ಮೂವರು, ಬಿಸಿಎಂ/ಅಲ್ಪಸಂಖ್ಯಾತ ವರ್ಗದಿಂದ ನಾಲ್ವರು ಹಾಗೂ ಸಾಮಾನ್ಯ ವರ್ಗದಿಂದ ಎಂಟು ಮಂದಿ ಸೇರಿದಂತೆ ಒಟ್ಟು 15 ಮಂದಿ ಇರಲಿದ್ದು, ಮಹಿಳೆಯರಿಗೂ ಕಡ್ಡಾಯ ಪ್ರಾತಿನಿಧ್ಯ ನೀಡಲಾಗಿದೆ ಎಂದು ಹೇಳಿದರು.

ಯುವ ಸಂಘಗಳಿಗೆ ಅನುದಾನ:

ಒಂದು ಸಂಘಕ್ಕೆ ಸರ್ಕಾರದಿಂದ ವಾರ್ಷಿಕ ₹ 10 ಲಕ್ಷದವರೆಗೆ ಅನುದಾನ ದೊರೆಯಲಿದ್ದು, ಸರ್ಕಾರ ನಿಗದಿಪಡಿಸಿರುವ ನಿಯಮ ಹಾಗೂ ಮಾರ್ಗಸೂಚಿಗಳ ಪ್ರಕಾರವೇ ಹಣವನ್ನು ಬಳಸಬೇಕು. ಕ್ರೀಡಾ ಸಾಮಗ್ರಿಗಳ ಖರೀದಿ, ಕ್ರೀಡಾ ತರಬೇತಿ, ಕ್ರೀಡಾಕೂಟ ಆಯೋಜನೆ, ಆರೋಗ್ಯ ಶಿಬಿರ, ಯೋಗ ತರಗತಿಗಳು, ಸ್ವಚ್ಛತಾ ಕಾರ್ಯಕ್ರಮ, ಪರಿಸರ ಸಂರಕ್ಷಣೆ ಹಾಗೂ ಸಸಿಗಳನ್ನು ನೆಡುವ ಕಾರ್ಯಕ್ರಮ ಸೇರಿದಂತೆ ಹಲವು ಚಟುವಟಿಕೆಗಳಿಗೆ ಅನುದಾನ ಬಳಸಬಹುದಾಗಿದೆ ಎಂದು ತಿಳಿಸಿದರು.

ಇದರ ಜೊತೆಗೆ ಯುವಕರಿಗೆ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸುವುದಕ್ಕೂ ಯೋಜನೆಯನ್ನು ಬಳಸಿಕೊಳ್ಳಬಹುದು ಎಂದು ಹೇಳಿದರು.

ಪುರಸಭೆ ವ್ಯಾಪ್ತಿಯಲ್ಲೂ ಸಂಘಗಳ ರಚನೆ:

ಪುರಸಭೆ ವ್ಯಾಪ್ತಿಯಲ್ಲಿ ಜನಸಂಖ್ಯೆ ಆಧಾರದಲ್ಲಿ ಸಂಘಗಳನ್ನು ರಚಿಸಲು ಅವಕಾಶವಿದೆ. ಸುಮಾರು 6,000 ಮತದಾರರಿಗೊಂದು ಸಂಘದಂತೆ ವಿಭಾಗಿಸುವ ವ್ಯವಸ್ಥೆ ಇದ್ದು, 30,000 ಜನಸಂಖ್ಯೆ ಇರುವ ಪ್ರದೇಶದಲ್ಲಿ ಸುಮಾರು ಐದು ಸಂಘಗಳನ್ನು ರಚಿಸಬಹುದಾಗಿದೆ. ಈ ಮೂಲಕ ನಗರ ಪ್ರದೇಶದ ಯುವಕರಿಗೂ ಯೋಜನೆಯ ಪ್ರಯೋಜನ ದೊರೆಯಲಿದೆ ಎಂದು ವಿವರಿಸಿದರು.

ಈಗಾಗಲೇ ನೋಂದಣಿ ಆರಂಭ:

ಭಾರತ್ ಜೋಡೋ ಯುವ ಸಂಘದ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಸರ್ಕಾರದ ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. ನೋಂದಣಿ ಸಂದರ್ಭದಲ್ಲಿ ಅಗತ್ಯ ಮಾಹಿತಿಯನ್ನು ನಮೂದಿಸಿ ಆಧಾರ್ ವಿವರಗಳನ್ನು ನೀಡಿದ ನಂತರ ಅರ್ಹತೆ ಪರಿಶೀಲನೆಯಾಗಲಿದೆ. 36 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮಾಗಡಿ ತಾಲೂಕಿನ 26 ಗ್ರಾಮ ಪಂಚಾಯಿತಿಗಳಲ್ಲೂ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶವಿದ್ದು, ಪ್ರತಿ ಪಂಚಾಯಿತಿಗೆ ಯುವ ಕಾಂಗ್ರೆಸ್ ವತಿಯಿಂದ ಜವಾಬ್ದಾರಿಗಳನ್ನು ವಹಿಸಿ ಅರ್ಹ ಯುವಕರನ್ನು ನೋಂದಾಯಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಯುವ ಕಾಂಗ್ರೆಸ್ ಮುಖಂಡರಾದ ಪರ್ವೇಜ್, ಅಲ್ಲಾ ಬಕಾಶ್, ಅಬೀದ್, ಮಲ್ಲಿಗುಂಟೆ ರಾಜು, ಚೇತನ್ ಕುದೂರು ದೀಪಕ್, ಚಿಕ್ಕಮುದಿಗೆರೆ ಸುರೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗದಗದಲ್ಲಿ ಅಕ್ರಮವಾಗಿ ವಾಸವಿದ್ದ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳ ವಶ
ಕೂಲಿ ಹಣಕ್ಕಾಗಿ ಗ್ರಾಪಂ ಎದುರು ಕಾರ್ಮಿಕರ ಪ್ರತಿಭಟನೆ