ಕ್ರೀಡಾಪಟುಗಳಿಗೆ ಶ್ರೀ ಮೃತ್ಯುಂಜಯ ಕಾಲೇಜಿನಲ್ಲಿ ಅಭಿನಂದನಾ ಸಮಾರಂಭ
ಕನ್ನಡಪ್ರಭ ವಾರ್ತೆ ಹೊನ್ನಾಳಿಪ್ರಸ್ತುತ ದಿನಗಳಲ್ಲಿ ಕಾಲೇಜುಗಳಲ್ಲಿ ಓದುವ ಯುವಕ, ಯುವತಿಯರು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಓದುವ ಹವ್ಯಾಸಗಳ ಬೆಳೆಸಿಕೊಂಡಾಗ ಮಾತ್ರ ದುಶ್ಚಟಗಳಂತಹ ಕೆಟ್ಟ ಹವ್ಯಾಸಗಳಿಂದ ದೂರವಿರಬಹುದು ಎಂದು ಹೊನ್ನಾಳಿ ಹಿರೇಕಲ್ಮಠದ ಡಾ.ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶ್ರೀಮಠದ ವಿದ್ಯಾಸಂಸ್ಥೆಯಡಿ ನಡೆಯುತ್ತಿರುವ ಶ್ರೀ ಮೃತ್ಯುಂಜಯ ಶಿವಾಚಾರ್ಯ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಮಟ್ಟ, ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾ ಕೂಟಗಳಲ್ಲಿ ಪ್ರಥಮ ಸ್ಥಾನಗಳ ಪಡೆದು ದಾವಣಗೆರೆ ವಿಶ್ವ ವಿದ್ಯಾಲಯ ಮಟ್ಟದಲ್ಲೇ ಅತೀ ಹೆಚ್ಚು ಪ್ರಶಸ್ತಿಗಳ ಪಡೆದ ಕಾಲೇಜು ಆಗಿದೆ. ಇಂತಹ ಸಾಧನೆ ಮಾಡಿದ ಸುಮಾರು 54ಕ್ಕೂ ಹೆಚ್ಚು ಕ್ರೀಡಾಪಟುಗಳಿಗೆ ಕಾಲೇಜಿನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಅಭಿನಂದಿಸಿ ಮಾತನಾಡಿ ಕಾಲೇಜಿನ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಕ್ರೀಡೆಯಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಜೊತೆಗೆ ಪಠ್ಯ ವಿಷಯಗಳಲ್ಲೂ ಕಾಲೇಜು ಉತ್ತಮ ಸಾಧನೆ ಮಾಡಬೇಕು ಎಂದು ಸ್ವಾಮೀಜಿ ಹೇಳಿದರು.ವಿಶೇಷವಾಗಿ ಗ್ರಾಮೀಣ ಮಟ್ಟದಲ್ಲಿ ಅನೇಕ ಸಮಸ್ಯೆಗಳು ಶಿಕ್ಷಣ ಸಂಸ್ಥೆಗಳ ಕಾಡುತ್ತಿರುತ್ತವೆ. ಇವೆಲ್ಲವನ್ನೂ ಮೀರಿ ತಮ್ಮ ಶ್ರೀ ಚನ್ನಪ್ಪ ಸ್ವಾಮಿ ವಿದ್ಯಾಪೀಠ ಶಿಕ್ಷಣ ಸಂಸ್ಥೆಗಳು ಕ್ರೀಡೆಯೂ ಸೇರಿ ಹಲವು ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಾ ಬರುತ್ತಿದೆ ಎಂದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ ನರಗಟ್ಟೆ ಮಾತನಾಡಿ, ಕಾಲೇಜು ವಿವಿಧ ಕ್ರೀಡಾ ವಿಭಾಗಗಳಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಅತೀ ಹೆಚ್ಚು ಪ್ರಶಸ್ತಿಗಳ ಪಡೆಯುವ ಮೂಲಕ ಸಾಧನೆ ಮಾಡಿದ್ದು, ರಾಜ್ಯ ಮಹಿಳೆಯರ ಹ್ಯಾಂಡ್ ಬಾಲ್ ಸಿ.ಎಂ. ಕಪ್ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ.ಹೊನ್ನಾಳಿ ಎಸ್ಎಂಎಫ್‌ಸಿ ಕಾಲೇಜಿನಲ್ಲಿ ಜರುಗಿದ ದಾವಣಗೆರೆ ವಿ.ವಿ.ಮಟ್ಟದ ಪುರುಷರ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಪ್ರಥಮ, ದಾವಣಗೆರೆ ಜಿಎಂಐಟಿಯಲ್ಲಿ ನಡೆದ ಪುರುಷರ ನೆಟ್ ಬಾಲ್ ನಲ್ಲಿ ಪ್ರಥಮ, ಚಿತ್ರದುರ್ಗದ ಮಹಿಳಾ ಕಾಲೇಜಿನಲ್ಲಿ ನಡೆದ ದಾವಣಗೆರೆ ವಿ.ವಿ.ಪುರುಷರ ಹ್ಯಾಂಡ್ ಬಾಲ್ ನಲ್ಲಿ ಪ್ರಥಮ, ದಾವಣಗೆರೆ ವಿ.ವಿ. ಅಥ್ಲೆಟಿಕ್ ಕ್ರೀಡಾ ಕೂಟ 2023-24ರಲ್ಲಿ ವಿವಿಧ ಕ್ರೀಡೆಗಳಲ್ಲಿ 6 ಮಂದಿ ಕ್ರೀಡಾಪಟುಗಳು ಪ್ರಥಮ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಸೀನಿಯರ್ ಹ್ಯಾಂಡ್‌ಬಾಲ್ ನಲ್ಲಿ 6 ವಿದ್ಯಾರ್ಥಿಗಳು, ಮಹಿಳೆಯರ ಸೀನಿಯರ್ ಹ್ಯಾಂಡ್ ಬಾಲ್ ನಲ್ಲಿ ಮೂವರು, ಬಾಲಕಿಯರ ಜೂನಿಯರ್ ಹ್ಯಾಂಡ್ ಬಾಲ್ ನಲ್ಲಿ ಮೂವರು ಸೇರಿ
ಒಟ್ಟು 12 ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಭಾಗವಹಿಸಿದ್ದಾರೆ ಎಂದು ಕ್ರೀಡಾ ಸಾಧನೆಗಳ ಬಗ್ಗೆ ವಿವರಿಸಿದರು.ಈ ವೇಳೆ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಚನ್ನಯ್ಯ ಬೆನ್ನೂರು ಮಠ, ಸದಸ್ಯ ತೆಂಗಿನಮರದ ಮಾದಪ್ಪ, ರವೀಶ್ ಪುಷ್ಪಾರವೀಶ್, ಸಹಾಯಕ ಪ್ರಾಧ್ಯಾಪಕ ಕೆ.ನಾಗೇಶ್, ಇತರೆ ಉಪನ್ಯಾಸಕ ವರ್ಗ ಹಾಗೂ ಬೋಧಕೇತರ ವರ್ಗದವರು, ವಿದ್ಯಾರ್ಥಿಗಳಿದ್ದರು. ಕಾಲೇಜಿನ ಕ್ರೀಡಾ ಪಟುಗಳ ಬೋಧಕ ಮತ್ತು ಬೋಧಕೇತರ ವರ್ಗ ಹಾಗೂ ಆಡಳಿತ ಮಂಡಳಿಯವರು ಅಭಿನಂದಿಸಿದರು.---------