ಕನ್ನಡಪ್ರಭ ವಾರ್ತೆ ಬಂಗಾರಪೇಟೆ
18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಮತದಾನದಕ್ಕೆ ಗುರುತಿನ ಚೀಟಿಯನ್ನು ಪಡೆದು ದೇಶದ ಉತ್ತಮ ಭವಿಷ್ಯಕ್ಕಾಗಿ ಒಳ್ಳೆಯ ವ್ಯಕ್ತಿಯನ್ನು ಆಯ್ಕೆ ಮಾಡುವವರಾಗಬೇಕು ಎಂದು ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಷಿ ಹೇಳಿದರು.ಪಟ್ಟಣದ ಸಂತೋಷ್ ಶಾಲೆಯ ಆವರಣದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಯೂತ್ ಎಂಪವರ್ ಮೆಂಟ್ 2025 ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಾವುಗಳೇ ನಮ್ಮ ಜೀವನವನ್ನು ರೂಢಿಸಿಕೊಳ್ಳಬೇಕು. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ವ್ಯಸನಕ್ಕೆ ಬೀಳದೆ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು ಚೆನ್ನಾಗಿ ಓದಬೇಕು. ಉತ್ತಮ ವ್ಯಾಸಂಗ ಪಡೆದರೆ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಸಾಧ್ಯವಾಗುತ್ತದೆ. ನೂರಕ್ಕೆ ಒಬ್ಬರಾಗಬೇಕು ಹೊರತು ನೂರರಲ್ಲಿ ಒಬ್ಬರಾಗಬಾರದು ಎಂದರು.ಮಾಹಿತಿ ಹಾಗೂ ಸಾಮಾನ್ಯ ಜ್ಞಾನ ಪಡೆಯಲು ದಿನ ಪತ್ರಿಕೆಗಳನ್ನು ನಿತ್ಯ ಓದಬೇಕು. ಮೊಬೈಲ್ ಮತ್ತು ಯೂಟೂಬ್‍ಗೆ ದಾಸರಾದರೆ ಭವಿಷವನ್ನು ಹಾಳು ಮಾಡುಕೊಳ್ಳುತ್ತೇವೆ. ವಿದ್ಯಾರ್ಥಿಗಳು ನಾಚಿಕೆ ಸ್ವಭಾವ ಬಿಟ್ಟು ಇಂಗ್ಲೀಷ್ ವ್ಯಾಕರಣ ಕಲಿತರೆ ಭಾಷೆಯ ಮೇಲೆ ಹಿಡಿತ ಬರಲಿದೆ. ಅದು ಬಂದರೆ ಮಾತ್ರ ಮುಂದೆ ಐಎಎಸ್, ಐಪಿಎಸ್ ಅಧಿಕಾರಿಗಳು ಹಾಗೂ ನ್ಯಾಯಾಧೀಶರಾಗಬಹುದು ಎಂದರು.
ದೊಡ್ಡ ಪ್ರಜಾಪ್ರಭುತ್ವ ಇರುವ ನಮ್ಮ ದೇಶದಲ್ಲಿ ಮತದಾನ ಮಾಡುತ್ತಿದ್ದೇವೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಯುವಕ ಯುವತಿಯರು ಕಡ್ಡಾಯವಾಗಿ ಚುನಾವಣಾ ಗುರುತಿನ ಚೀಟಿಯನ್ನು ಪಡೆಯಬೇಕು. ದೇಶದ ಭವಿಷ್ಯಕ್ಕಾಗಿ ಮೊದಲ ಬಾರಿಗೆ ಮತವನ್ನು ಹಾಕಿ ಒಳ್ಳೆಯ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಮತ ದಾನ ಒಂದು ಹಕ್ಕು ಅಲ್ಲ ಅದು ಆಯುಧವಾಗಬೇಕು. ಯಾರೋ ಹೇಳಿದರು ಎಂದು ಮತದಾನವನ್ನು ಮಾಡದೇ ಮತದಾನದ ದಿನ ಒಳ್ಳೆ ವ್ಯಕ್ತಿಯನ್ನು ಆಯ್ಕೆ ಮಾಡಲು ಪಣ ತೊಡಬೇಕು ಎಂದರು.ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಮಾತನಾಡಿ, ಸಮಾಜದಲ್ಲಿ ನಾವು ಯಾವತ್ತೂ ತಲೆ ತಗ್ಗಿಸುವ ಕೆಲಸ ಮಾಡಬಾರದು. ವಿಧ್ಯಾರ್ಥಿಗಳು ಸಹ ಪೋಷಕರಿಗೆ ಮತ್ತು ಶಿಕ್ಷಕರಿಗೆ ಸಹ ತಲೆ ತಗ್ಗಿಸುವ ಕೆಲಸ ಮಾಡಬಾರದು. ಆದರೆ ಹಾಳಾದ ಮೊಬೈಲ್ ಬಂದು ತಲೆ ಎತ್ತುವಂತಹ ಯಾವುದೇ ಕೆಲಸ ಮಾಡುತ್ತಿಲ್ಲ. ಬದಲಾಗಿ ಮೊಬೈಲ್ ಮುಂದೆ ತಲೆ ತಗ್ಗಿಸುವ ಕೆಲಸ ಮಾಡುತ್ತಿದ್ದೇವೆ. ತಲೆ ತಗ್ಗಿಸುವುದರಿಂದ ಆತ್ಮ ವಿಶ್ವಾಸ ಕಳೆದುಕೊಂಡು ಕೀಳರಿಮೆ ಬರುತ್ತದೆ. ವಿದ್ಯಾರ್ಥಿಯಾಗಲಿ ವಿದ್ಯಾರ್ಥಿನಿಯಾಗಲಿ ಯಾವತ್ತು ಆತ್ಮವಿಶ್ವಾಸ ಕಳೆದುಕೊಳ್ಳುತ್ತಾರೋ ಯಾವುದೇ ಪದವಿ ಮಾಡಿದ್ರೂ ವ್ಯರ್ಥ. ಯಾವುದೇ ಸವಾಲುಗಳು ಮತ್ತು ಕಷ್ಟಗಳನ್ನು ಎದುರಿಸಲು ಸಾಧ್ಯವಾಗುವುದಿಲ್ಲ ಎಂದರು.
ಈ ವೇಳೆ ಕೆಜಿಎಫ್ ಎಸ್ಪಿ ಶಿವಾಂಶು ರಜಪೂತ್, ಬೆಮೆಲ್ ಸಿಎಸ್‍ಒ ಅಮಿತ್ ಕುಮಾರ್ ಮಿಶ್ರ, ಅಪರ ಅಡ್ವೊಕೇಟ್ ಜನರಲ್ ಶಾಹುಲ್ ಹಮೀದ್, ವಿಘ್ನೇಶ್ವರನ್, ಲಯನ್ಸ್ ಕ್ಲಬ್‍ನ ಪ್ರತಾಪ್ ಯಾದವ್, ರಾಮನಾಥ್, ಸ್ಯಾಂಡ್ಲಿ, ಕನ್ನಡ ಸಂಘದ ಅಧ್ಯಕ್ಷ ಪಲ್ಲವಿ ಮಣಿ, ಸಂತೋಷ್ ಸಮೂಹ ಸಂಸ್ಥೆಯ ಮುಖ್ಯಸ್ಥ ಆದೀಲ್ ಶಾ ಮುಂತಾದವರು ಹಾಜರಿದ್ದರು.