ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ನಮ್ಮ ಹಿರಿಯರು ದೇವರ ಋಣ, ಋಷಿ ಋಣ, ಪಿತೃ ಋಣ, ಭೂತ ಋಣ, ನರ ಋಣ ಹೀಗೆ 5 ಋಣಗಳನ್ನು ತೀರಿಸಲು ಹೇಳಿದ್ದು, ಅವುಗಳೊಂದಿಗೆ ದೇಶದ ಋಣವನ್ನು ತೀರಿಸಬೇಕಿದೆ ಎಂದು ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.ಬುಧವಾರ ಪಟ್ಟಣದ ಮರಡಿ ಮಠದ ಶ್ರೀ ಅಭಿನವ ಕಾಡಸಿದ್ದೇಶ್ವರ ಶಿವಾಚಾರ್ಯ ಶ್ರೀಗಳ ದ್ವಾದಶ ಪಟ್ಟಾಧಿಕಾರ ಮಹೋತ್ಸವ ಹಾಗೂ ಮೌನ ಯೋಗಿಯ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿ, ಮಠ ಇರುವುದು ಈ ಋಣಗಳನ್ನು ತೀರಿಸಲು ಪ್ರೇರಣೆ ಕೊಡುವುದಕ್ಕಾಗಿ. ಕಾರಣ ನಿಮ್ಮ ಮಕ್ಕಳನ್ನು ಮಠಗಳಿಗೆ ಕಳಿಸಿ. ಈ ಐದು ಋಣಗಳ ಜೊತೆಗೆ ದೇಶದ ಋಣ ತೀರಿಸಬೇಕು. ಯಾವ ಊರಿನಲ್ಲಿ ಗುರುಸೇವೆ ಅತ್ಯಂತ ಭಕ್ತಿಯಿಂದ ನಡೆಯುತ್ತದೋ ಆ ಊರಿಗೆ ಭಗವಂತ ಎಂದೂ ಮೋಸ ಮಾಡುವುದಿಲ್ಲ ಎನ್ನುವುದಕ್ಕೆ ಈ ನಾಡಿನ ಪರಂಪರೆಯೇ ಸಾಕ್ಷಿಯಾಗಿದೆ. ಮಠದ ಸ್ವಾಮಿಗಳ ಪೀಠ ಮುಳ್ಳಿನ ಹಾಸಿಗೆ ಇದ್ದಂತೆ. ಅದರ ಮೇಲೆ ಕುಳಿತಿರುವ ಸ್ವಾಮಿಗಳು ಭಕ್ತರ ಕಲ್ಯಾಣಕ್ಕಾಗಿ ದೇವರಿಗೆ ಸದಾ ಪ್ರಾರ್ಥಿಸುತ್ತಾರೆ. ನಾನು ಯಾವುದೇ ಧರ್ಮ, ಮತದ ವಿರೋಧಿಯಲ್ಲ. ಹಿಂದು ಧರ್ಮದ ಉತ್ಕೃಷ್ಟ ಅಭಿಮಾನಿ ಎಂದು ಹೇಳಿದರು.
ಜಗತ್ತಿನಲ್ಲಿ ಇಸ್ಲಾಂ ಧರ್ಮ ನೂರಾರು ವರ್ಷಗಳ ಹಿಂದೆ ಹುಟ್ಟಿದ್ದು, ಅದಕ್ಕೆ ಬಹಳ ವರ್ಷಗಳ ಇತಿಹಾಸವಿಲ್ಲ. ಕ್ರಿಶ್ಚಿಯನ್ ಧರ್ಮ ಎರಡು ಸಾವಿರ ವರ್ಷಗಳ ಹಿಂದೆ ಹುಟ್ಟಿದ್ದು. ಪ್ರಾಚೀನವಾದ ಅತ್ಯಂತ ಹಳೆಯ ಧರ್ಮ, ಜಗತ್ತಿನಲ್ಲಿ ಹಿಂದಿನಿಂದಲೂ ಬದುಕಿರುವುದು ಹಿಂದು ಧರ್ಮ. ನಮ್ಮ ಹಿರಿಯರ ಕಾಲದಿಂದಲೂ ಈ ಧರ್ಮವನ್ನು ಅನುಸರಿಸುತ್ತ ಬಂದಿರುವುದಕ್ಕೆ ನಾವು ಹೆಮ್ಮೆ ಪಡಬೇಕು. ಈ ದೇಶ ಹಾಗೂ ಹಿಂದೂ ಧರ್ಮ ಜಗತ್ತಿನಲ್ಲಿಯೇ ಬಹಳ ಹಳೆಯದಾದ ಧರ್ಮ ಎಂದು ಅಭಿಪ್ರಾಯಪಟ್ಟರು.ಕಾಶ್ಮೀರದಲ್ಲಿ ಭಯೋತ್ಪಾದಕರು ಮತ್ತೆ ದಾಳಿ ಮಾಡಿದ್ದಾರೆ. ಈ ದೇಶದ ಪ್ರವಾಸಿ ಜನ ಕಾಶ್ಮೀರಕ್ಕೆ ಸುತ್ತಾಡಿಕೊಂಡು ಬರಲು ಹೋದವರ ಮೇಲೆ ದಾಳಿ ಮಾಡಿದ್ದಾರೆ. ಪ್ರಯಾಸಿಗರಿಗೆ ಹೆಸರು, ಧರ್ಮ ಕೇಳಿ ಹಿಂದುಗಳನ್ನಷ್ಟೇ ಕೊಂದಿದ್ದಾರೆ. ಸಾಯಿಸುವವನು ಜಾತಿ ಕೇಳಲಿಲ್ಲ ಧರ್ಮ ಕೇಳಿದ. ಪರಮಾತ್ಮ ಪ್ರತಿಯೊಬ್ಬರ ಹೃದಯದಲ್ಲಿ ಅಡಗಿದ್ದಾನೆ ಎಂದು ಹೇಳಿರುವುದು ಹಿಂದೂ ಧರ್ಮ. ಆದರೆ ಭಯೋತ್ಪಾದಕ ಹೃದಯದಲ್ಲಿ ಯಾಕೆ ಪರಮಾತ್ಮ ಇಲ್ಲ ಎಂದು ಪ್ರಶ್ನಿಸಿದ ಅವರು, ಜಾತಿ, ಜಾತಿ ಎಂದು ಹೊಡೆದಾಡದೇ ಹಿಂದೂ ಧರ್ಮವನ್ನು ಪ್ರೀತಿಸಬೇಕು. ಅದು ಪುನರ್ನಿರ್ಮಾಣವಾಗಬೇಕಿದೆ ಎಂದು ಹೇಳಿದರು.
ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ನೀಡಬೇಕಿದೆ. ಮೊಬೈಲ್, ಟಿವಿ ಹಾವಳಿಯಿಂದ ಮುಕ್ತಗೊಳಿಸಬೇಕಿದೆ. ಯುವಕರು ದೇಶಭಕ್ತಿ ಬೆಳೆಸಿಕೊಳ್ಳಬೇಕು. ಹಿಂದು ಧರ್ಮವನ್ನು ಬಿಟ್ಟು ನಿನ್ನೆ ಮೊನ್ನೆ ಹುಟ್ಟಿದ ಧರ್ಮಕ್ಕೆ ಹೋಗಿ ಮತಾಂತರವಾಗುವವರಿಗೆ ಹೇಳಿ, ಹಿಂದೂ ಧರ್ಮದ ಪ್ರಾಚೀನತೆ ಬಗ್ಗೆ ಮನವರಿಕೆ ಮಾಡಿಕೊಡಬೇಕಿದೆ ಎಂದರು.ಅಭಿನವ ಕಾಡಸಿದ್ದೇಶ್ವರ ಶ್ರೀಗಳು, ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಶ್ರೀಗಳು, ನಿಡಗುಂದಿಕೊಪ್ಪದ ಚನ್ನಬಸವ ಶ್ರೀಗಳು, ಕೆಲ್ಲೂರದ ಶಿವಕುಮಾರ ದೇವರು ಸಾನಿಧ್ಯವಹಿಸಿ ಮಾತನಾಡಿದರು. ಇದೇ ವೇಳೆ ಅಮೃತಶಿಲಾ ಮೂರ್ತಿಯ ಭಕ್ತಿ ಸೇವೆ ಜರುಗಿತು.