ಯುವಜನತೆ ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವ ರೂಢಿಸಿಕೊಳ್ಳಬೇಕು: ಯತೀಶ್ವರ್

KannadaprabhaNewsNetwork |  
Published : Sep 24, 2024, 01:52 AM ISTUpdated : Sep 24, 2024, 01:53 AM IST
23ಎಚ್ಎಸ್ಎನ್8 : ನಗರದ ಕುವೆಂಪು ಪ್ರಥಮ ದರ್ಜೆ ಕಾಲೇಜಿನ ವಿವಿಧ ಸಂಘಗಳ ಉದ್ಘಾಟನೆ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಎವಿಕೆ ಕಾಲೇಜಿನ ಪ್ರಾಂಶುಪಾಲರಾದ ಯತೀಶ್ವರ ಉದ್ಘಾಟಿಸಿದರು. | Kannada Prabha

ಸಾರಾಂಶ

ಯುವಜನರು ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂದು ಎ ವಿ ಕೆ ಕಾಲೇಜಿನ ಪ್ರಾಂಶುಪಾಲರಾದ ಸೀ.ಚ. ಯತೀಶ್ವರ್ ತಿಳಿಸಿದರು. ಹಾಸನದಲ್ಲಿ ಕುವೆಂಪು ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹಾಸನ

ಯುವಜನರು ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂದು ಎ ವಿ ಕೆ ಕಾಲೇಜಿನ ಪ್ರಾಂಶುಪಾಲರಾದ ಸೀ.ಚ. ಯತೀಶ್ವರ್ ತಿಳಿಸಿದರು.

ಅವರು ನಗರದ ಕುವೆಂಪು ಪ್ರಥಮ ದರ್ಜೆ ಕಾಲೇಜಿನ ವಿವಿಧ ಸಂಘಗಳ ಉದ್ಘಾಟನೆ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ, ಶಿಕ್ಷಣ ಯುವಜನತೆ ಮೇಲೆ ಅಗಾಧವಾದ ಪರಿಣಾಮ ಉಂಟುಮಾಡುವಂತಿರಬೇಕು, ಆಗ ನಿಮ್ಮ ಅಂತರಂಗದಲ್ಲಿ ಸಾಧನೆ ಸಾಧ್ಯವಾಗುತ್ತದೆ. ಶಿಕ್ಷಣ ಕೇವಲ ಅಂಕಗಳಿಸುವ ಶಿಕ್ಷಣವಾಗಬಾರದು, ಸಮಗ್ರ ವ್ಯಕ್ತಿತ್ವ ರೂಪಿಸುವಂತಹ ಶಿಕ್ಷಣ ಆಗಬೇಕು. ಮನುಷ್ಯನ ಅಂತರಂಗದಲ್ಲಿ ಇರುವ ವಿಷಯವನ್ನು ಹೊರತರುವಂತದ್ದು ಶಿಕ್ಷಣ. "ಶಿಕ್ಷಣ ಎಂಬುದು ಶಕ್ತಿಯುತವಾದ ಆಯುಧ " ಎಂಬ ನೆಲ್ಸನ್ ಮಂಡೇಲರವರ ಹೇಳಿಕೆಯನ್ನು ಸಮರ್ಥಿಸಿದರು.

ಪ್ರತಿ ವಿದ್ಯಾರ್ಥಿಯು ಒಂದು ಗ್ರಂಥಾಲಯವನ್ನು ಹೊಂದಿರಬೇಕು "ಗ್ರಂಥವಿಲ್ಲದ ಕೋಣೆ ಆತ್ಮವಿಲ್ಲದ ದೇಹವಿದ್ದಂತೆ " ಎಂದು ತಿಳಿಸಿದರು. ಪ್ರತಿ ವಿದ್ಯಾರ್ಥಿಯು ತಮ್ಮ ಹುಟ್ಟು ಹಬ್ಬದಂದು ಒಂದು ಗಿಡ ನೆಟ್ಟು ಬೇಳೆಸುವುದರ ಮೂಲಕ ಪ್ರಕೃತಿಗೆ ತಮ್ಮದೇ ಕೊಡುಗೆ ನೀಡಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿಗಳಾದ ಬಿ.ಈ.ಶಿವರಾಮೇಗೌಡರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ತಮ್ಮ ತಂದೆ ತಾಯಂದಿರಿಗೆ, ಪಾಠ ಹೇಳಿದ ಗುರುಗಳಿಗೆ, ಗೌರವ ಬರುವ ರೀತಿಯಲ್ಲಿ ತಮ್ಮ ಜೀವನ ರೂಪಿಸಿಕೊಳ್ಳಬೇಕು. ನಿಮ್ಮ ಸ್ವ ಸಾಮರ್ಥ್ಯದಿಂದ ಸಮರ್ಪಣಾಭಾವದಿಂದ, ಪ್ರಾಮಾಣಿಕ ಪ್ರಯತ್ನ, ನಿರಂತರ ಅಭ್ಯಾಸದಿಂದ ಉನ್ನತ ವ್ಯಾಸಂಗ ಮಾಡಿ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಕೆ.ಆರ್‌.ಹರೀಶ್‌ರವರು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿರುವ ಕೋರ್ಸ್‌ಗಳ ಮಹತ್ವ ತಿಳಿದು ವಿದ್ಯಾಭ್ಯಾಸ ಮಾಡಬೇಕೆಂದು ತಿಳಿಸಿದರು. ಪ್ರಾರ್ಥನೆಯನ್ನು ಕುಮಾರಿ ಲಕ್ಷ್ಮಿ ಎಸ್.ಎಂ ರವರು ಹಾಡಿದರು, ಕಾರ್ಯಕ್ರಮದ ಸ್ವಾಗತವನ್ನು ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಚಂದ್ರಹಾಸರವರು ಮಾಡಿದರು.

ಕಾರ್ಯಕ್ರಮದ ವಂದನಾರ್ಪಣೆಯನ್ನು ಕಾಲೇಜಿನ ಸಹಪ್ರಾಧ್ಯಾಪಕಿಯಾದ ಕುಮಾರಿ ರೇಖಾ ಎಸ್.ಎ ರವರು ಹಾಗೂ ಕಾರ್ಯಕ್ರಮದ ಎಲ್ಲಾ ವ್ಯವಸ್ಥಾಪನೆಯನ್ನು ಸಹಪ್ರಾಧ್ಯಾಪಕಿಯಾದ ರಜಿನಿ ಎನ್.ವೈರವರು ಮತ್ತು ಕಾರ್ಯಕ್ರಮದ ನಿರೂಪಣೆಯನ್ನು ಸಹಪ್ರಾಧ್ಯಾಪಕಿಯಾದ ಹರ್ಷಿತ ಕೆ.ಬಿ ರವರು ನೆರವೇರಿಸಿದರು. ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

PREV

Recommended Stories

‘ಫಾರಿನ್‌ ಅನ್ನಭಾಗ್ಯ’ ಕೊಟ್ಟವರಿಗೆ ಹವಾಲಾ ಮೂಲಕ ಹಣ ಪಾವತಿ?
ಬಸವಣ್ಣ ಅಧ್ಯಯನ ಪೀಠ ಸ್ಥಾಪನೆ ಮಾಡಿ : ಮೊಯ್ಲಿ