ಈಗಿನ ಮಕ್ಕಳಿಗೆ ಮೊಬೈಲ್ ಬಳಕೆಗೆ ದಾಸರಾಗದೆ ಓದುವ ಹವ್ಯಾಸ ಬೆಳೆಸುವುದು ಅಗತ್ಯವಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಕೆ.ಎನ್. ರಾಜಣ್ಣ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ತುಮಕೂರುಈಗಿನ ಮಕ್ಕಳಿಗೆ ಮೊಬೈಲ್ ಬಳಕೆಗೆ ದಾಸರಾಗದೆ ಓದುವ ಹವ್ಯಾಸ ಬೆಳೆಸುವುದು ಅಗತ್ಯವಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಕೆ.ಎನ್. ರಾಜಣ್ಣ ಹೇಳಿದ್ದಾರೆ. ಮಂಗಳವಾರ ಗಾಜಿನ ಮನೆಯ ಸಭಾಂಗಣದಲ್ಲಿ 17 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸನ್ಮಾನ ಮತ್ತು ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಕ್ಕಳು ಅತಿಯಾದ ಮೊಬೈಲ್ ಬಳಕೆಯಿಂದ ಕೇವಲ ತಾಂತ್ರಿಕ ಜ್ಞಾನ ಬೆಳಸಿಕೊಳ್ಳಬಹುದೇ ಹೊರತು ಮಾನವೀಯ ಸಂಬಂಧ ಹಾಗೂ ನೈತಿಕ ಮೌಲ್ಯಗಳಿಂದ ದೂರವಾಗುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಹಿಂದಿನ ದಿನಗಳಲ್ಲಿ ಬಸ್ಸಿನಲ್ಲಿ ಪ್ರಯಾಣಿಸುವಾಗ ಅಕ್ಕಪಕ್ಕದವರನ್ನು ಪರಿಚಯ ಮಾಡಿಕೊಂಡು ಅನುಭವಗಳನ್ನು ಹಂಚಿಕೊಳ್ಳುವ ಸಂಸ್ಕೃತಿ ಇತ್ತು. ಆದರೆ ಇಂದು ಮೊಬೈಲ್ ಬಳಕೆಯಿಂದಾಗಿ ಮನುಷ್ಯ ಮನುಷ್ಯರ ನಡುವಿನ ಬಾಂಧವ್ಯ ಕ್ಷೀಣಿಸುತ್ತಿದೆ. ಅತಿಯಾದ ಮೊಬೈಲ್ ಬಳಕೆ ಯುವ ಪೀಳಿಗೆಯಲ್ಲಿ ಮಾನಸಿಕ ಮತ್ತು ಸಾಮಾಜಿಕ ಅನಾಹುತಗಳನ್ನು ಸೃಷ್ಟಿಸುತ್ತಿದೆ ಎಂದರು.
ಹಿರಿಯ ಸಾಹಿತಿ ಡಾ. ಹಿ.ಚಿ ಬೋರಲಿಂಗಯ್ಯ ಮಾತನಾಡಿ, ಭಾರತದಲ್ಲಿ ಅಳಿದು ಹೋಗುತ್ತಿರುವ ಭಾಷೆಗಳ ಪಟ್ಟಿಯಲ್ಲಿ ನಮ್ಮ ಕನ್ನಡವೂ ಸೇರಿರುವುದೇ ಕಳವಳಕಾರಿ ಸಂಗತಿ. ಜನ ಸಾಮಾನ್ಯರು ಇತರ ಸಮಸ್ಯೆಗಳ ಬಗ್ಗೆ ಎಷ್ಟರ ಮಟ್ಟಿಗೆ ಚಿಂತಿಸುತ್ತಾರೋ, ಅದೇ ರೀತಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಅಳಿವಿನ ಭೀತಿಯ ವಿಷಯದಲ್ಲೂ ಗಮನಹರಿಸಿ, ಕನ್ನಡವನ್ನು ಬಳಸಿ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಕನ್ನಡವನ್ನು ಉಳಿಸಿ ಬೆಳೆಸಲು ಸರ್ಕಾರಿ ಶಾಲೆಗಳನ್ನೂ ಮತ್ತಷ್ಟು ಸಬಲಗೊಳಿಸುವುದು ಅಗತ್ಯ ಎಂದರು.ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಮಾತನಾಡಿ, ಯುವಪೀಳಿಗೆ ಮೊಬೈಲ್ ಬಳಕೆಯನ್ನು ಮಿತಿಗೊಳಿಸಿ, ಕನ್ನಡ ಪುಸ್ತಕ ಓದು, ಬರವಣಿಗೆ, ನಾಟಕ, ಕಾವ್ಯ, ಕಲೆಗಳತ್ತ ಆಸಕ್ತಿ ತೋರಿಸಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಕನ್ನಡದ ವೈಭವ ಉಳಿದು ಮುಂದಿನ ತಲೆಮಾರಿಗೆ ಸಮೃದ್ಧಿಯಾಗಿ ತಲುಪಲಿದೆ ಎಂದರು.
ಕಾರ್ಯಕ್ರಮದಲ್ಲಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಜಗದ್ಗುರು ಡಾ. ನಿಶ್ಚಲಾನಂದ ಸ್ವಾಮೀಜಿ, ಲೇಖಕ ಕರೀಗೌಡ ಬೀಚನಹಳ್ಳಿ, ಕೈಗಾರಿಕೋದ್ಯಮಿ ಎಚ್.ಜಿ ಚಂದ್ರಶೇಖರ್, ಸೇರಿದಂತೆ ಕನ್ನಡ ಸೇನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.