ನವಲಗುಂದ: ಯುವಕರು ದುಶ್ಚಟಗಳಿಂದ ದೂರ ಉಳಿಯುವ ಮೂಲಕ ಆರೋಗ್ಯ ರಕ್ಷಣೆಗೆ ಮುಂದಾಗಬೇಕು. ದೊಡ್ಡ, ದೊಡ್ಡ ಶಹರಗಳಲ್ಲದೇ ಗ್ರಾಮೀಣ ಪ್ರದೇಶಗಳಲ್ಲಿಯೂ ಶಾಲಾ-ಕಾಲೇಜುಗಳ ಪಕ್ಕದಲ್ಲಿಯೇ ಯುವಕರು, ವಿದ್ಯಾರ್ಥಿಗಳು ಆಕರ್ಷಣೆಗೊಳಗಾಗುವಂತೆ ಕಡಿಮೆ ದರದಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದು, ಈ ಕುರಿತಾಗಿ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕೆಂದು ಜಿಪಂ ಸಿಇಒ ಭುವನೇಶ ಪಾಟೀಲ್ ಹೇಳಿದರು.
ಸ್ಥಳೀಯ ಶಂಕರ ಮಹಾವಿದ್ಯಾಲಯದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ, ವಾರ್ತಾ ಇಲಾಖೆ, ಪೊಲೀಸ್ ಇಲಾಖೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ತಾಲೂಕು ಕಾನೂನು ಸಮಿತಿ ಹಾಗೂ ಶಂಕರ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಇಂದಿನ ವಿದ್ಯಾರ್ಥಿಗಳು ಪಾಠದೊಂದಿಗೆ ದೈಹಿಕ ಶ್ರಮ ಮರೆಯುತ್ತ ದುಶ್ಚಟಗಳ ಆಕರ್ಷಣೆಗಳಿಗ ಒಳಗಾಗುತ್ತಿರುವುದು ವಿಷಾಧನೀಯ ಸಂಗತಿ ಎಂದರು.
ಗವಿಮಠದ ಶ್ರೀ ಬಸವಲಿಂಗಸ್ವಾಮಿಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಸಮಾಜದಲ್ಲಿನ ದುಶ್ಚಟಗಳು ದೂರವಾಗಬೇಕೆಂಬ ಉದ್ದೇಶದಿಂದ ಇಳಕಲ್ಲ ಮಹಾಂತ ಶಿವಯೋಗಿಗಳು ದುಶ್ಚಟ ಬಿಡಿಸಲು ಮೊದಲು ಜೋಳಿಗೆ ಹಾಕಿದ ಪ್ರಥಮ ಸ್ವಾಮಿಗಳಾಗಿದ್ದಾರೆ. ಅವರ ಜನ್ಮ ದಿನದ ನೆನಪಿಗಾಗಿ ವ್ಯಸನಮುಕ್ತ ದಿನ ಆಚರಿಸಲಾಗುತ್ತಿದ್ದು, ಯುವಕರು, ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಾಗಿ ಕಷ್ಟಪಟ್ಟು ಓದುವ ಮೂಲಕ ದೇಶದ ಅಭಿವೃದ್ದಿಗೆ ಕೈಜೋಡಿಸಬೇಕು ಎಂದರು.ತಹಸೀಲ್ದಾರ್ ಸುಧೀರ ಸಾಹುಕಾರ ಮಾತನಾಡಿ, ಇಂದಿನ ಯುವಕರು ಕೇವಲ ದುಶ್ಚಟಗಳಲ್ಲದೇ ಮೊಬೈಲ್ ದಾಸರಾಗಿ ಪರಿವರ್ತನೆಯಾಗಿ, ತಮ್ಮ ಸ್ವಂತಿಕೆ ಮರೆಯುತ್ತಿದ್ದಾರೆ. ಅಲ್ಲದೇ ದೇಶಿಯ ಸಂಸ್ಕಾರದಿಂದ ದೂರ ಉಳಿಯುವಂತಾಗಿದೆ ಎಂದರು.
ಧಾರವಾಡ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಡಾ. ಸುರೇಶ ಹಿರೇಮಠ, ತಾಪಂ ಇಒ ಭಾಗ್ಯಶ್ರೀ ಜಹಗೀರದಾರ, ಜಗದೀಶ ಹಡಪದ, ನೌಕರರ ಸಂಘದ ತಾಲೂಕಾಧ್ಯಕ್ಷ ವಿ.ಡಿ.ರಂಗಣ್ಣವರ, ಶರಣ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಎ.ಬಿ.ಕೊಪ್ಪದ, ನ್ಯಾಯವಾದಿ ಎಸ್.ಎನ್. ಡಂಬಳ, ಶಂಕರ ಕಾಲೇಜು ಪ್ರಾಚಾರ್ಯ ಜೆ.ಪಿ. ಲಮಾಣಿ, ಪಿಎಸ್‍ಐ ಅಜೀತ, ಭೀಮರೇಶ ಹೂಗಾರ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.