ಹಿರೇಕೆರೂರು: ಪ್ರಜಾಪ್ರಭುತ್ವದ ಆಶಯ, ಸಂವಿಧಾನದ ಮೌಲ್ಯಗಳನ್ನು ಯುವಜನರು ಅರಿತುಕೊಳ್ಳಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಪ್ರಜಾಪ್ರಭುತ್ವದ ಯಶಸ್ಸಿಗೆ ಯುವಜನರ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಸಂವಿಧಾನದ ಆಶಯ ತಿಳಿದುಕೊಂಡು, ತಮ್ಮ ಹಕ್ಕುಗಳ ಜತೆಗೆ ಕರ್ತವ್ಯಗಳನ್ನು ಅರಿತುಕೊಳ್ಳಬೇಕು. ದೇಶದ ಆಡಳಿತ ವ್ಯವಸ್ಥೆ, ಸಂಸತ್ತಿನ ಕಾರ್ಯವೈಖರಿ ಹಾಗೂ ಪ್ರಜಾಪ್ರಭುತ್ವದ ಪ್ರಕ್ರಿಯೆಗಳ ಬಗ್ಗೆ ಅಸಕ್ತಿ ಬೆಳೆಸಲು ಯುವ ಸಂಸತ್ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು.
ಹಿರೇಕೆರೂರು ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ಎಫ್. ದೊಡ್ಡಮನಿ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗದ ಪಾತ್ರ, ಸಂವಿಧಾನದ ಮಹತ್ವ ಹಾಗೂ ಕಾನೂನು ಅರಿವಿನ ಅಗತ್ಯತೆ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಯುವ ಸಂಸತ್ ಸಭೆಯಲ್ಲಿ ವಿದ್ಯಾರ್ಥಿಗಳು ಸಂಸತ್ತಿನ ಕಲಾಪದ ಮಾದರಿಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿ, ಪ್ರಶೋತ್ತರ ಹಾಗೂ ವಿಚಾರ ವಿನಿಮಯದ ಮೂಲಕ ಪ್ರಜಾಪ್ರಭುತ್ವದ ಪ್ರಾಯೋಗಿಕ ಅನುಭವ ಪಡೆದುಕೊಂಡರು.ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಗಿರೀಶ ಡಿ. ಮುಡಿಯಮ್ಮನವರ, ತಾಪಂ ಇಒ ಎನ್. ರವಿಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೋಡಿ ಭೀಮರಾಯ, ಸಿಇಎಸ್ ಸಂಸ್ಥೆಯ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣನವರ, ಮಂಜುನಾಥ ಸುಳಗನ್ನಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ, ಬಸಮ್ಮ ಅಬಲೂರು, ಮಾದೇವಪ್ಪ ಮಾಳಮ್ಮನವರ ಹಾಗೂ ಸಿಬಂದಿ ವಿದ್ಯಾರ್ಥಿಗಳು ಇದ್ದರು.