ಗದಗ: ಸ್ವಾಮಿ ವಿವೇಕಾನಂದರು ಯುವ ಜನಾಂಗದಲ್ಲಿ ಏಕತೆ, ಐಕ್ಯತೆ ಹಾಗೂ ವಿವೇಕವನ್ನು ತುಂಬುವ ಮೂಲಕ ಅವರಲ್ಲಿ ಭಾರತೀಯ ಸಂಸ್ಕೃತಿ, ಸಂಸ್ಕಾರ ಮೂಡಿ ಬರುವಂತೆ ಪ್ರೇರಣೆ ನೀಡಿದವರು. ಯುವಕರು ವಿವೇಕಾನಂದರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ವಿವೇಕದೊಂದಿಗೆ ಸತ್ಪ್ರಜೆಗಳಾಗಿ ಬಾಳಬೇಕು ಎಂದು ಮಲ್ಲಸಮುದ್ರದ ಓಂಕಾರಗಿರಿಯ ಓಂಕಾರೇಶ್ವರ ಮಠದ ಫಕೀರೇಶ್ವರ ಸ್ವಾಮಿಗಳು ಹೇಳಿದರು.
ಇಲ್ಲಿಯ ವಿವೇಕಾನಂದ ನಗರದ ಕಾಶೀ ವಿಶ್ವನಾಥ ದೇವಸ್ಥಾನದ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಭವನದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿ, ಜೀವನ ದರ್ಶನ 53ನೇ ಮಾಲಿಕೆ, ಪಾಲಿಕೆ ಸೇವೆ ಮತ್ತು ಕಾರ್ತಿಕ ಮಾಸದ ದೀಪೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.ವಿವೇಕ ಎಂದರೆ ಪ್ರಜ್ಞೆ, ಜ್ಞಾನ, ಬೆಳಕು ಎಂದು ಅರ್ಥೈಸಬಹುದು. ವಿವೇಕದ ಮೂಲಕ ಆನಂದವನ್ನು ಕಂಡುಕೊಳ್ಳುವುದೇ ವಿವೇಕಾನಂದ. ಜ್ಞಾನ ಬೆಳಕಿನ ವೇದಿಕೆಯಾದ ಇಲ್ಲಿ ಜೀವನದ ದರ್ಶನವನ್ನು ಮಾಡಿಸಲಾಗುತ್ತಿದೆ. ಮಠಾಧೀಶರು, ಜ್ಞಾನಿಗಳು, ಪಂಡಿತರು, ಉಪನ್ಯಾಸಕರನ್ನು ಆಮಂತ್ರಿಸಿ ಜೀವನಕ್ಕೆ ಬೇಕಾಗುವ ಜ್ಞಾನ ಸನ್ಮಾರ್ಗವನ್ನು ನೀಡುವ ಜೀವನ ದರ್ಶನ ಮಾಲಿಕೆ ನಿರಂತರವಾಗಿ ಸಾಗಿ ಬರಲು ವಿವೇಕಾನಂದ ನಗರದ ಹಿರಿಯರು, ಸಮಿತಿಯ ಪದಾಧಿಕಾರಿಗಳು ಕಾರಣರಾಗಿದ್ದಾರೆ. ಸಮಾಜಮುಖಿ ಕಾರ್ಯ ಮಾಡುತ್ತಿರುವ ಈ ಸಮಿತಿಯ ಸರ್ವ ಪದಾಧಿಕಾರಿಗಳು ಅಭಿನಂದನಾರ್ಹರು ಎಂದರು.
ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಮಾತನಾಡಿ, ಮನುಷ್ಯ ಕಷ್ಟಪಟ್ಟು ದುಡಿಯಬೇಕು, ಪರಿಶ್ರಮದ ದುಡಿಮೆ ಫಲ ನೀಡುವದು ನಿಶ್ಚಿತ. ದೂರದ ಪ್ರಯಾಣ ಸಣ್ಣ ಹೆಜ್ಜೆಯಿಂದ ಆರಂಭಗೊಳ್ಳುವ ಹಾಗೆ ಸಣ್ಣಪುಟ್ಟ ವ್ಯಾಪಾರ ಮಾಡುವ ಮೂಲಕ ವ್ಯಾಪಾರ ವಹಿವಾಟನ್ನು ಹೆಚ್ಚಿಸಿಕೊಳ್ಳುತ್ತ ಹೋಗಬೇಕು. ಆಳಾಗಿ ದುಡಿದು ಅರಸನಾಗಿ ಉಣ್ಣಬೇಕು ಎಂಬ ಹಿರಿಯರ ಮಾತಿನಂತೆ ಸಾಧನೆಗೆ ಪ್ರಯತ್ನ ಬೇಕು ಎಂದು ತಿಳಿಸಿದರು.ಶ್ರೀ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಎ.ಟಿ. ನರೇಗಲ್ ಅವರು, ಜೀವನ ದರ್ಶನ ಮಾಲಿಕೆಯ ಮುಖ್ಯ ಉದ್ದೇಶ ಜೀವನ ನಡೆಸುವ ಬಗೆ, ಸಾಧನೆಯ ಬಗೆ, ಸಂಸ್ಕಾರ, ಸಂಸ್ಕೃತಿಯನ್ನು ಯುವ ಜನಾಂಗಕ್ಕೆ ಪರಿಚಯಿಸುವ ಉದ್ದೇಶ ಹೊಂದಿದೆ. ಸಮಿತಿ ಪ್ರತಿ ತಿಂಗಳು ಅಮವಾಸ್ಯೆ ದಿನ ಈ ಕಾರ್ಯಕ್ರಮವನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ. ಈ ಮಹತ್ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಜಿ.ಜಿ. ಕುಲಕರ್ಣಿ, ಆರ್.ಆರ್. ಕಾಶಪ್ಪನವರ, ಆರ್.ಬಿ. ಅಂದಪ್ಪನವರ, ವಿ.ಆರ್. ಗೊಬ್ಬರಗುಂಪಿ, ಸಾಗರ ಬಿಂಗಿ, ರೇಣುಕಾ ಕರಿಗೌಡರ, ಸಂಗೀತಾ ಕುರಿ, ಸಿ.ಕೆ. ಕಡಣಿ, ರಾಜೇಂದ್ರ ಗಡಾದ, ಎಸ್.ಎಸ್. ಪಾಟೀಲ, ಎಂ.ಬಿ. ಚನ್ನಪ್ಪಗೌಡ್ರ, ಕೆ.ಐ. ಕುರಗೋಡ, ವೀರಣ್ಣ ಕೊಟಗಿ, ಸುದರ್ಶನ ಹಾನಗಲ್ಲ, ಎಂ.ಕೆ. ತುಪ್ಪದ, ಬಿ.ಎಚ್. ಗರಡಿಮನಿ, ಎಂ.ಎನ್. ಕಾಮನಹಳ್ಳಿ, ಐ.ಬಿ. ಮೈದರಗಿ ಮುಂತಾದವರು ಇದ್ದರು.ಸವಿತಾ ಗುಡ್ಡದ, ಕಸ್ತೂರಿ ಕಮ್ಮಾರ ಮತ್ತು ಸಂಗಡಿಗರಿಂದ ಸುಮಧುರ ಸಂಗೀತ ಜರುಗಿತು. ಕಸ್ತೂರಿಬಾಯಿ ಕಮ್ಮಾರ, ವಿಶಾಲಾಕ್ಷೀ ಕಲ್ಲನಗೌಡರ ಪ್ರಾರ್ಥಿಸಿದರು. ಕೆ.ಪಿ. ಗುಳಗೌಡ್ರ ಸ್ವಾಗತಿಸಿದರು. ವಿ.ಕೆ. ಗುರುಮಠ ಪರಿಚಯಿಸಿದರು. ಎಸ್.ಎಸ್. ಪಾಳೇಗಾರ ನಿರೂಪಿಸಿದರು. ಸಂಗೀತಾ ಕುರಿ ವಂದಿಸಿದರು.