ಕನ್ನಡಪ್ರಭ ವಾರ್ತೆ ರಾಮನಗರ
ತಾಲೂಕಿನ ಹುಣಸನಹಳ್ಳಿ ಬಳಿಯ ಹಂದಿಗುಂದಿ ಅರಣ್ಯ ಪ್ರವೇಶದ ವ್ಯಾಪ್ತಿಗೆ ಬರುವ ಮುತ್ತುರಾಯನಸ್ವಾಮಿ ಬೆಟ್ಟದ ಮೇಲೆ ಕೆಲ ಪ್ರವಾಸಿಗರು ಕಾರು ಮತ್ತು ಜೀಪುಗಳನ್ನು ಹತ್ತಿಸಿ, ಇಳಿಸುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಇದು ಅರಣ್ಯ ಮತ್ತು ಪರಿಸರ ಪ್ರೇಮಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರು ನಗರದಿಂದ ಕೂಗಳತೆ ದೂರದಲ್ಲಿರುವ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯು ಬೆಟ್ಟಗುಡ್ಡಗಳಿಂದ ಆವೃತವಾಗಿದೆ. ಬಹುತೇಕ ಬೆಟ್ಟಗುಡ್ಡಗಳು ಅರಣ್ಯ ಇಲಾಖೆ ವ್ಯಾಪ್ತಿಗೆ ಬರುತ್ತವೆ. ಅದರಲ್ಲೂ ಕೆರೆಯ ಪಕ್ಕದಲ್ಲಿಯೇ ಇರುವ ಮುತ್ತುರಾಯನಸ್ವಾಮಿ ಬೆಟ್ಟವೂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.ವೀಕೆಂಡ್ ಬಂದರೆ ಸಾಕು, ಬೆಂಗಳೂರಿನಿಂದ ತಂಡೋಪ ತಂಡವಾಗಿ ಮುತ್ತುರಾಯನಸ್ವಾಮಿ ಬೆಟ್ಟಕ್ಕೆ ಆಗಮಿಸುವ ಪ್ರವಾಸಿಗರು ಟ್ರೆಕ್ಕಿಂಗ್ ಮಾಡಿ ಕಾಲ ಕಳೆದರೆ, ಇನ್ನು ಕೆಲವರು ಸುತ್ತಲ ಪ್ರದೇಶದ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ.
ಕೆಲ ದಿನಗಳ ಹಿಂದೆ ಮಳೆಯಾದ ಹಿನ್ನೆಲೆಯಲ್ಲಿ ಮುತ್ತುರಾಯನಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಕೆರೆಯೂ ಭರ್ತಿಯಾಗಿದೆ. ಈಗಲೂ ಬೆಟ್ಟದಿಂದ ಕೆರೆಗೆ ನೀರು ಜಿನುಗುತ್ತಿದೆ. ಹಾಗೊಂದು ವೇಳೆ ಬೆಟ್ಟದ ಮೇಲಿಂದ ಕೆಳಗಿರುವ ಕೆರೆಗೆ ವಾಹನ ಬಿದ್ದರೆ ಅನಾಹುತ ಘಟಿಸಿ ಸಾವು ನೋವುಗಳು ಸಂಭವಿಸುತ್ತವೆ.
ಬೆಟ್ಟದ ಸುತ್ತಮುತ್ತಲೂ ಹೇಳುವವರು ಕೇಳುವವರು ಇಲ್ಲದಂತಾಗಿದ್ದು, ಅರಣ್ಯ ಇಲಾಖೆಯೂ ಕಣ್ಮುಚ್ಚಿ ಕುಳಿತಿದೆ. ಇನ್ನಾದರೂ ಬೆಟ್ಟದ ಮೇಲೆ ಕಾರು - ಜೀಪುಗಳನ್ನು ಹತ್ತಿಸಿ ಹುಚ್ಚಾಟ ಮೆರೆಯುತ್ತಿರುವ ಪ್ರವಾಸಿಗರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.