ಮಹದೇಶ್ವರ ಬೆಟ್ಟದಲ್ಲಿ ಯುಗಾದಿಯ ಮಹಾ ರಥೋತ್ಸವ

KannadaprabhaNewsNetwork |  
Published : Mar 21, 2026, 01:15 AM IST
20ಸಿಎಚ್‌ಎನ್‌51, 52, 53ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಚಂದ್ರಮಾನ ಯುಗಾದಿ ಮಹಾ ರಥೋತ್ಸವದಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. | Kannada Prabha

ಸಾರಾಂಶ

ಮಲೆ ಮಹದೇಶ್ವರ ಬೆಟ್ಟದಲ್ಲಿ ಚಂದ್ರಮಾನ ಯುಗಾದಿ ಮಹಾ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.

- ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಾದಪ್ಪನಿಗೆ ವಿಶೇಷ ಪೂಜೆ । ಐದು ದಿನಗಳ ಜಾತ್ರಾ ಮಹೋತ್ಸವ

---

ಕನ್ನಡಪ್ರಭ ವಾರ್ತೆ ಹನೂರು

ಮಲೆ ಮಹದೇಶ್ವರ ಬೆಟ್ಟದಲ್ಲಿ ಚಂದ್ರಮಾನ ಯುಗಾದಿ ಮಹಾ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.

ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದಿಂದ ಕಳೆದ 5 ದಿನಗಳಿಂದ ಪೂಜೆ, ಉತ್ಸವಾದಿಗಳು ನೆರವೇರುತ್ತಿದ್ದು, ಗುರುವಾರ ಯುಗಾದಿ ಪ್ರಯುಕ್ತ ಬೆಳಗ್ಗೆ 9.45-11 ಗಂಟೆಯವರೆಗೆ ನಡೆದ ಮಹಾ ರಥೋತ್ಸವ ನಡೆಯಿತು. ಸಾಲೂರು ಬೃಹತ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ದಿವ್ಯ ಸಾನಿಧ್ಯ ವಹಿಸಿದ್ದರು.

ಮಹಾರಥೋತ್ಸವಕ್ಕೂ ಮುನ್ನ ಬೆಳಗ್ಗೆ 7ಕ್ಕೆ ಕೆಂಪು ಅನ್ನ ತಯಾರಿಸಿ (ಬಲಿ ಅನ್ನ) ಮಲೆ ಮಹದೇಶ್ವರ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ನಂತರ ಬೇಡರ ಸ್ವಾಮಿಗಳ ನೇತೃತ್ವದಲ್ಲಿ ರಥಕ್ಕೆ ಪೂಜೆ ಸಲ್ಲಿಸಿ ರಥದ ಚಕ್ರಗಳಿಗೆ ಬಲಿ ಅನ್ನ ಇಡಲಾಯಿತು. ನಂತರ ಮಹಾ ಮಂಗಳಾರತಿ ಸಲ್ಲಿಸಿ ಬೆಲ್ಲದ ಆರತಿ ನಂತರ ಬೂದು ಕುಂಬಳಕಾಯಿ ಒಡೆದ ಸ್ವಾಮೀಜಿಗಳು ತೆಂಗಿನಕಾಯಿ ಒಡೆಯುವ ಮೂಲಕ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.

ಬಿಳಿ ಆನೆ ಉತ್ಸವ:

ಮಹಾ ರಥೋತ್ಸವ ನಂತರ ಪಾರ್ವತಿ ಪರಮೇಶ್ವರರ ಉತ್ಸವ ಮೂರ್ತಿಯನ್ನು ಬಿಳಿ ಆನೆಯ ಮೇಲೆ ಪ್ರತಿಷ್ಠಾಪಿಸಿ ದೇವಾಲಯದ ಸುತ್ತಲೂ ಮೆರವಣಿಗೆ ಮೂಲಕ ಬಿಳಿ ಆನೆ ಉತ್ಸವ ನೆರವೇರಿತು.ಗುರು ಬ್ರಹ್ಮೋತ್ಸವ:

ಉತ್ಸವ ಮೂರ್ತಿಗೆ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಟ್ಯಾಕ್ಟರ್‌ನಲ್ಲಿರುವ ಪಲಕಿಯಲ್ಲಿಟ್ಟು ಗುರು ಬ್ರಹ್ಮೋತ್ಸವ ಉತ್ಸವ ಮೂರ್ತಿಯನ್ನು ವಾದ್ಯಗಳ ಹಾಗೂ ವೀರಗಾಸೆ ಕತ್ತಿ ವರಸೆ ನವಿಲೂರು ವಾದ್ಯ ಮೇಳೆಗಳ ಜೊತೆ ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಿ ನಂತರ ಉತ್ಸವ ಮೂರ್ತಿಗೆ ಧೂಪದ ಅಭಿಷೇಕ ಬಿಲ್ವಾರ್ಚನೆ, ಅಭಿಷೇಕ ಮಹಾಮಂಗಳಾರತಿ ಸಲ್ಲಿಸಲಾಯಿತು.

ದಾಸೋಹ ವ್ಯವಸ್ಥೆ:

ಜಾತ್ರೆ ಪ್ರಯುಕ್ತ ಮಾದಪ್ಪನ ಭಕ್ತರಿಗೆ, ಸಿಬ್ಬಂದಿ, ಪೊಲೀಸರು ಸೇರಿದಂತೆ ಸಾರ್ವಜನಿಕರಿಗೆ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕಳೆದ ಐದು ದಿನಗಳಿಂದ ನಡೆಯುತ್ತಿರುವ ಜಾತ್ರೆಯಲ್ಲಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಎ.ಇ ರಘು ಹಾಗೂ ಉಪ ಕಾರ್ಯದರ್ಶಿ ಚಂದ್ರಶೇಖರ್‌, ಕೊಳ್ಳೇಗಾಲ ಉಪವಿಭಾಗ ಡಿವೈಎಸ್ಪಿ ಧರ್ಮೇಂದರ್‌ ಹಾಗೂ ಇನ್ಸ್‌ಪೆಕ್ಟರ್‌ಗಳಾದ ಜಗದೀಶ್, ಚಿಕ್ಕರಾಜ ಶೆಟ್ಟಿ, ಆನಂದ ಮೂರ್ತಿ ಮತ್ತು ಅಧಿಕಾರಿ ಸಿಬ್ಬಂದಿ ವರ್ಗ, ಬೇಡರ ಕಪಣರ ಅರ್ಚಕರ ತಂಡವೇ ವಿಶೇಷ ಪೂಜೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಶೇಷ ಪೂಜೆ ನಡೆಸಿಕೊಟ್ಟರು.

---

3 ಲಕ್ಷಕ್ಕೂ ಅಧಿಕ ಲಾಡು ಮಾರಾಟಯುಗಾದಿ ಜಾತ್ರಾ ಮಹೋತ್ಸವ ಅಂಗವಾಗಿ ಮಾ.14ರಿಂದ 19ರವರೆಗೆ 2,76,000 ಲಕ್ಷಕ್ಕೂ ಅಧಿಕ ಲಾಡು ಮಾರಾಟ ಆಗಿವೆ. ಜೊತೆಗೆ ಚಿನ್ನದ ರಥೋತ್ಸವ ಮತ್ತು ಇತರೆ ಸೇವೆಗಳಿಗೆ 460,00 ಲಾಡು ಖರ್ಚಾಗಿವೆ ಎಂದು ಪ್ರಾಧಿಕಾರದ ಸಿಬ್ಬಂದಿ ಶುಕ್ರವಾರ ಮಾಹಿತಿ ನೀಡಿದ್ದಾರೆ.

ಬೇಡಿಕೆಗೆ ಅನುಸಾರವಾಗಿ ಲಾಡುಗಳನ್ನು ತಯಾರಿ‌ಸಿ ವಿತರಿಸಲಾಗಿದ್ದು, ಅಮಾವಾಸ್ಯೆ ಹಾಗೂ ರಥೋತ್ಸವದಂದು ಅತ್ಯಧಿಕ ಸಂಖ್ಯೆಯಲ್ಲಿ ಲಾಡು ಮಾರಾಟವಾಗಿವೆ ಎಂದು ತಿಳಿಸಿದ್ದಾರೆ.

---

20ಸಿಎಚ್‌ಎನ್‌51, 52, 53

ಮಲೆ ಮಹದೇಶ್ವರ ಬೆಟ್ಟದಲ್ಲಿ ಚಂದ್ರಮಾನ ಯುಗಾದಿ ಮಹಾ ರಥೋತ್ಸವದಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೇಮೆ ನೀರಿನ ವಿಚಾರದಲ್ಲಿ ಭಿನ್ನಾಭಿಪ್ರಾಯ ಬೇಡ
ತುಮಕೂರಿನಲ್ಲಿ ಗುಡ್ಡೆ ಮಾಂಸಕ್ಕೆ ಹೆಚ್ಚಿದ ಬೇಡಿಕೆ