- ಅಚ್ಚರಿಯ ಅಭ್ಯರ್ಥಿ । ಎಸ್‌ಟಿಗೆ ಮಣೆ । ಹಬ್ಬಕ್ಕೆ ಸಾಮಾನು ಖರೀದಿಸ್ತಿದ್ದಾಗ ಬಂತು ಕರೆ- - -
ಬಿಜೆಪಿ ಪಾಲಿಗೆ ಬಿಡಿಸಲಾಗದ ಕಗ್ಗಂಟಾಗಿರುವ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಗೆ ಅಚ್ಚರಿಯ ಅಭ್ಯರ್ಥಿಯಾಗಿ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ, ಯುವ ಉದ್ಯಮಿ ಶ್ರೀನಿವಾಸ ಟಿ. ದಾಸಕರಿಯಪ್ಪ ಘೋಷಣೆಯಾಗಿದ್ದಾರೆ.
ಕಳೆದ ಕೆಲ ದಿನಗಳಿಂದಲೂ ದಕ್ಷಿಣ ಕ್ಷೇತ್ರ ಟಿಕೆಟ್‌ಗಾಗಿ ಜಿಲ್ಲಾ ಬಿಜೆಪಿ ಬಣದಲ್ಲೇ ಎರಡು ಗುಂಪುಗಳ ಮಧ್ಯೆ ತೀವ್ರ ಪ್ರಯತ್ನ ನಡೆದಿತ್ತು. ಆಗ್ನೇಯ ಪದವೀಧರರ ಕ್ಷೇತ್ರದ ಟಿಕೆಟ್ ಕೆ.ಎಂ.ಸುರೇಶ ಅವರಿಗೆ ಘೋಷಣೆಯಾದ ಬೆನ್ನಲ್ಲೇ ಮತ್ತೊಂದು ಬಣಕ್ಕೆ ದಕ್ಷಿಣ ಉಪ ಚುನಾವಣೆಯ ಟಿಕೆಟ್ ಎಂಬುದು ಸ್ಪಷ್ಟವಾಗಿತ್ತು. ಆದರೆ, ಆ ಬಣದಿಂದ ಯಾರಿಗೆ ಟಿಕೆಟ್ ಎಂಬುದಕ್ಕೆ ಯುಗಾದಿ ಹಬ್ಬದ ದಿನವಾಗಿದ್ದ ಗುರುವಾರವೇ ಬಿಜೆಪಿ ಅಧಿಕೃತವಾಗಿ ಶ್ರೀನಿವಾಸ ಟಿ. ದಾಸಕರಿಯಪ್ಪ ಹೆಸರನ್ನು ಘೋಷಿಸಿದೆ.ಕಾಂಗ್ರೆಸ್ ಪಕ್ಷದಲ್ಲಿ ದಿನದಿನಕ್ಕೂ ಶಾಮನೂರು ಕುಟುಂಬ ಹಾಗೂ ಅಲ್ಪಸಂಖ್ಯಾತರ ಪೈಕಿ ಯಾರಿಗಾದರೂ ಒಬ್ಬರಿಗೆ ಟಿಕೆಟ್ ಕೊಡಿ ಎಂಬ ಹೊಯ್ದಾಟದ ಮಧ್ಯೆ ಯುಗಾದಿ ಹಬ್ಬದ ದಿನವೇ ಪರಿಶಿಷ್ಟ ಪಂಗಡ ನಾಯಕ ಸಮಾಜದ ಯುವ ಮುಖಂಡ ಶ್ರೀನಿವಾಸ ಟಿ. ದಾಸಕರಿಯಪ್ಪ ಅವರಿಗೆ ಬಿಜೆಪಿ ಮಣೆ ಹಾಕಿದೆ. ಯುಗಾದಿ ಹಬ್ಬದ ಖರೀದಿಗೆಂದು ಗುರುವಾರ ಬೆಳಗ್ಗೆಯೇ ಹೂವು, ಮಾವು, ಬೇವು ಖರೀದಿಗೆ ತೆರಳಿದ್ದ ಶ್ರೀನಿವಾಸ ದಾಸಕರಿಯಪ್ಪ ಅವರಿಗೆ ಮೇಲಿಂದ ಮೇಲೆ ಮೊಬೈಲ್‌ಗೆ ಕರೆಗಳು ಬಂದಾಗಲೇ ತಮಗೆ ಟಿಕೆಟ್ ಘೋಷಣೆಯಾದ ವಿಷಯ ಗೊತ್ತಾಗಿದೆ.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ 45 ವರ್ಷದ ಶ್ರೀನಿವಾಸ ದಾಸಕರಿಯಪ್ಪ ಎಂಜಿನಿಯರಿಂಗ್ ಓದಿದ್ದು, ಯುವ ಉದ್ಯಮಿಯೂ ಆಗಿದ್ದಾರೆ. ಕಾಂಗ್ರೆಸ್ಸಿನ ಅಹಿಂದ ಅಸ್ತ್ರಕ್ಕೆ ಪ್ರತಿಯಾಗಿ ಬಿಜೆಪಿ ಉಪ ಸಮರಕ್ಕೆ ಹಿಂದ ಅಸ್ತ್ರ ಪ್ರಯೋಗಿಸಿದೆ. ಸಿದ್ದೇಶ್ವರ ಬಣದಲ್ಲಿದ್ದರೂ ಶ್ರೀನಿವಾಸ ದಾಸಕರಿಯಪ್ಪ ಮತ್ತೊಂದು ಬಣದ ಮಾಜಿ ಸಚಿವರಾದ ಎಂ.ಪಿ. ರೇಣುಕಾಚಾರ್ಯ, ಎಸ್.ಎಂ. ರವೀಂದ್ರನಾಥ ಸೇರಿದಂತೆ ಎಲ್ಲರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುವ ಯುವ ಮುಖಂಡ. ಹಿಂದೂ ಮಹಾಸಭಾ ಗಣಪತಿ ಸಮಿತಿ ಉಪಾಧ್ಯಕ್ಷರಾಗಿ ಅನೇಕ ಸಂಘ- ಸಂಸ್ಥೆ, ಸಂಘಟನೆಗಳಲ್ಲೂ ಶ್ರೀನಿವಾಸ ದಾಸಕರಿಯಪ್ಪ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಕಾಂಗ್ರೆಸ್ ವಿರುದ್ಧ ನಿರಂತರ ಹೋರಾಟ ನಡೆಸಿಕೊಂಡೇ ಬಂದಿದ್ದ ದಿವಂಗತ ದಾಸಕರಿಯಪ್ಪ ಊರಿನಲ್ಲಿ ತಮ್ಮದೇ ಅಭಿಮಾನಿಗಳು, ಹಿತೈಷಿಗಳನ್ನು ಹೊಂದಿದ್ದಾರೆ. ಮಿತಭಾಷಿ ದಾಸಕರಿಯಪ್ಪ ಪರಿಶ್ರಮಿಯಾಗಿದ್ದವರು. ಹಮಾಲರು, ಬಡವರು, ಶ್ರಮಿಕ ವರ್ಗದ ಪರ ಸದಾ ಆಲೋಚನೆ ಮಾಡುತ್ತಿದ್ದ ವ್ಯಕ್ತಿಯಾಗಿ, ಕಾರ್ಮಿಕ ನಾಯಕರಾಗಿದ್ದವರು. ದಾಸಕರಿಯಪ್ಪನವರ ಹಿರಿಯ ಮಗ ಗಣೇಶ ದಾಸಕರಿಯಪ್ಪ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷನಾಗಿದ್ದರೆ, ಶ್ರೀನಿವಾಸ ದಾಸಕರಿಯಪ್ಪ ಬಿಜೆಪಿ ಸೇರಿ, ಜಿ.ಎಂ. ಸಿದ್ದೇಶ್ವರ ಜೊತೆಗೆ ಗುರುತಿಸಿಕೊಂಡಿದ್ದವರು. 2013ರಲ್ಲಿ ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಗಣೇಶ ದಾಸಕರಿಯಪ್ಪ ಕಾಂಗ್ರೆಸ್‌ನ ಅಭ್ಯರ್ಥಿಯಾಗಿದ್ದ ಹಾಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ವಿರುದ್ಧ ಸ್ಪರ್ಧಿಸಿದ್ದರು.
- - -
- - -
- ಪತಿಯ ಶ್ರಮವನ್ನು ಪಕ್ಷ ಗುರುತಿಸಿದೆ: ಸಂಧ್ಯಾ ಶ್ರೀನಿವಾಸ ದಾವಣಗೆರೆ: ನನ್ನ ಮಗ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆದ್ದೇ ಬರುತ್ತಾನೆ ಎಂದು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ.ದಾಸಕರಿಯಪ್ಪ ತಾಯಿ ರಂಗಮ್ಮ ದಾಸಕರಿಯಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶ್ರೀನಿವಾಸ ದಾಸಕರಿಯಪ್ಪ ಪತ್ನಿ ಸಂಧ್ಯಾ ಶ್ರೀನಿವಾಸ ಮಾತನಾಡಿ, ತಮ್ಮ ಪತಿಗೆ ಬಿಜೆಪಿಯಿಂದ ದಕ್ಷಿಣ ಕ್ಷೇತ್ರದ ಉಪ ಚುನಾವಣೆಗೆ ಟಿಕೆಟ್ ಸಿಕ್ಕಿರುವುದು ಖುಷಿ ತಂದಿದೆ. ಇಷ್ಟು ವರ್ಷ ಪಕ್ಷಕ್ಕೆ ಅವರು ಸಲ್ಲಿಸಿದ ಸೇವೆಯನ್ನು ಪಕ್ಷದ ನಾಯಕರು ಗುರುತಿಸಿದ್ದಾರೆ. ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದ ತಮ್ಮ ಪತಿಗೆ ಟಿಕೆಟ್ ಸಿಕ್ಕಿರುವುದು ನಮಗಷ್ಟೇ ಅಲ್ಲ, ಎಲ್ಲರಿಗೂ ಸಂತಸ ತಂದಿದೆ ಎಂದು ಪ್ರತಿಕ್ರಿಯಿಸಿದರು.
- - -(ಬಾಕ್ಸ್-3)
* ತಂದೆ ತೋರಿದ ಮಾರ್ಗದಲ್ಲೇ ಸಾಗುವೆ: ಶ್ರೀನಿವಾಸ- ಹಮಾಲಿಯಾಗಿದ್ದ ದಾಸಕರಿಯಪ್ಪ ಬಡವರ ಸೇವೆಗೆ ರಾಜಕೀಯಕ್ಕೆ ಬಂದವರು ದಾವಣಗೆರೆ: ಯುಗಾದಿ ಹಬ್ಬಕ್ಕೆ ಹೂವು ಖರೀದಿಸಲು ನಾನು ಮಾರುಕಟ್ಟೆ ಹೋಗಿದ್ದ ವೇಳೆ ಏಷ್ಯಾ ನೆಟ್ ಸುವರ್ಣ ನ್ಯೂಸ್‌ನಿಂದಲೇ ನನಗೆ ಅಭ್ಯರ್ಥಿಯಾಗಿ ಘೋಷಣೆ ಮಾಡಿರುವ ವಿಚಾರ ಗೊತ್ತಾಗಿದ್ದು. ನನಗೆ ಟಿಕೆಟ್ ಘೋಷಿಸಿದ ಎಲ್ಲ ವರಿಷ್ಠರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ. ದಾಸಕರಿಯಪ್ಪ ಪ್ರತಿಕ್ರಿಯಿಸಿದರು.
ಜನತಾ ಪರಿವಾರದ ನಾಯಕರಾಗಿದ್ದ ತಮ್ಮ ತಂದೆ, ದೂಡಾ ಮಾಜಿ ಅಧ್ಯಕ್ಷ ದಿವಂಗತ ಟಿ.ದಾಸಕರಿಯಪ್ಪ ಅವರನ್ನು ಒಂದು ಕ್ಷಣ ನೆನೆದು ಭಾವುಕರಾಗಿ ಕಣ್ಣೀರು ಹಾಕಿದ ಶ್ರೀನಿವಾಸ, ತಮ್ಮ ತಂದೆ ಈ ದಿನವನ್ನು ಇದಿರು ನೋಡುತ್ತಿದ್ದರು. ಈಗ ಅವರೇ ಇಲ್ಲ ಎಂದರು.ಹಮಾಲಿಯಾಗಿದ್ದ ತಂದೆ ಬಡವರ ಸೇವೆ ಮಾಡಲೆಂದೇ ರಾಜಕಾರಣಕ್ಕೆ ಬಂದವರು. ತಮ್ಮ ತಂದೆಯ ಮಾರ್ಗದಲ್ಲೇ ನಾನೂ ನಡೆಯುತ್ತೇನೆ. ನನಗೆ ಟಿಕೆಟ್ ಘೋಷಣೆಯಾದ ಬೆನ್ನಲ್ಲದೇ ನಮ್ಮ ನಾಯಕರಾದ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಎಲ್ಲರೂ ಫೋನ್ ಮಾಡಿ, ಅಭಿನಂದಿಸಿದರು. ಉಪ ಚುನಾವಣೆಯಲ್ಲಿ ದಕ್ಷಿಣ ಕ್ಷೇತ್ರದಲ್ಲಿ ಗೆಲ್ಲುವುದೊಂದೇ ನಮ್ಮ ಗುರಿ. ಈ ಬಾರಿ ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದು ಶ್ರೀನಿವಾಸ ದಾಸಕರಿಯಪ್ಪ ವಿಶ್ವಾಸ ವ್ಯಕ್ತಪಡಿಸಿದರು.
- - -(ಬಾಕ್ಸ್-4) * ಯಶವಂತ ರಾವ್, ರಾಜನಹಳ್ಳಿ ಶಿವುಗೆ ಭೇಟಿ ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಶ್ರೀನಿವಾಸ ಟಿ.ದಾಸಕರಿಯಪ್ಪ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದ ಎಲ್ಲರನ್ನೂ ಭೇಟಿ ಮಾಡಿ, ಉಪ ಚುನಾವಣೆಯಲ್ಲಿ ತಮ್ಮ ಬೆನ್ನಿಗೆ ನಿಂತು, ಬೆಂಬಲಿಸುವಂತೆ ಮನವಿ ಮಾಡಿದರು.
ಇಲ್ಲಿನ ವೀರ ಮದಕರಿ ನಾಯಕ ವೃತ್ತದಲ್ಲಿ ದಕ್ಷಿಣದ ಟಿಕೆಟ್ ಆಕಾಂಕ್ಷಿಯಾಗಿದ್ದ ಯಶವಂತ ರಾವ್ ಜಾಧವ್ ಕಚೇರಿ ಮುಂಭಾಗದಲ್ಲಿ ಯಶವಂತ ರಾವ್ ಕಾಲಿಗೆ ಬಿದ್ದು, ಆಶೀರ್ವಾದ ಪಡೆದ ಶ್ರೀನಿವಾಸ, ರಾಜನಹಳ್ಳಿ ಶಿವಕುಮಾರ, ಯಶವಂತ ರಾವ್ ಜಾಧವ್ ಇತರೆ ಮುಖಂಡರು, ಕಾರ್ಯಕರ್ತರೊಂದಿಗೆ ಸೇರಿಕೊಂಡು, ಶಕ್ತಿ ಪ್ರದರ್ಶನ ನಡೆಸಿದರು.ಇದೇ ವೇಳೆ ಮಾತನಾಡಿದ ಯಶವಂತ ರಾವ್ ಅವರು, ನಮ್ಮಲ್ಲಿ ಯಾವುದೇ ರೀತಿಯ ಅಸಮಾಧಾನವಿಲ್ಲ. ದಕ್ಷಿಣ ಕ್ಷೇತ್ರಕ್ಕೆ ನಾವೇ ಅಭ್ಯರ್ಥಿ ಎನ್ನುವಷ್ಟು ಕೆಲಸ ಮಾಡುತ್ತೇವೆ. ಇಂದಿನಿಂದ ಏಪ್ರಿಲ್ 9ರ ಚುನಾವಣೆ ದಿನದವರೆಗೂ ನಾವೆಲ್ಲರೂ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಅನ್ನು ಕ್ಷೇತ್ರದಲ್ಲಿ ಸೋಲಿಸುವುದೇ ನಮ್ಮ ಗುರಿ ಎಂದರು. ಅದಕ್ಕೆ ರಾಜನಹಳ್ಳಿ ಶಿವಕುಮಾರ ಧ್ವನಿಗೂಡಿಸಿ, ನಾವೆಲ್ಲರೂ ಒಗ್ಗಟ್ಟಾಗಿ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ಸನ್ನು ಸೋಲಿಸುತ್ತೇವೆ ಎಂದರು.
- - --(ಫೋಟೋ ಬರಲಿವೆ).