ಧರಣಿ ಸ್ಥಳದಲ್ಲೇ ಯುಗಾದಿ, ವರ್ಷ ತೊಡಕು ಆಚರಿಸಿ ಆಕ್ರೋಶ ಹೊರಹಾಕಿದ ರೈತರು

KannadaprabhaNewsNetwork |  
Published : Mar 21, 2026, 01:15 AM IST
ಸಿಕೆಬಿ-13 ಜಿಲ್ಲಾಡಳಿತ ಭವನದ ಎದುರು  ಪ್ರಾರಂಭವಾಗಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹದ ನಾಲ್ಕನೇ ದಿನದ ಧರಣಿ ಸತ್ಯಾಗ್ರಹ ನಡೆಸಿದರು  | Kannada Prabha

ಸಾರಾಂಶ

2823 ಎಕರೆಗೂ ಹೆಚ್ಚು ಫಲವತ್ತಾದ ಕೃಷಿ ಭೂಮಿಯನ್ನು ಹೊಂದಿರುವ ಜಂಗಮಕೋಟೆ ಹೋಬಳಿ 13ಹಳ್ಳಿಗಳ ರೈತರನ್ನು ಕೈಗಾರಿಕೆ ಸ್ಥಾಪನೆ ಹೆಸರಿನಲ್ಲಿ ಒಕ್ಕಲೆಬ್ಬಿಸಲು ಹೊರಟಿರುವುದು ಸರಿಯಲ್ಲ. ಪ್ರಾಣ ಹೋದರೂ ಪರವಾಗಿಲ್ಲ, ಅಂತಿಮ ಅಧಿಸೂಚನೆ ವಾಪಸ್ಸಾಗುವವರೆಗೂ ಧರಣಿ ಸತ್ಯಾಗ್ರಹ ನಿಲ್ಲುವುದಿಲ್ಲ .

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ರಾಜ್ಯ ಸರ್ಕಾರ ಬಲವಂತವಾಗಿ ಕೆಐಎಡಿಬಿ ಮೂಲಕ ಫಲವತ್ತಾದ ಕೃಷಿ ಭೂಮಿ ವಶಪಡಿಸಿಕೊಳ್ಳಲು ಮುಂದಾದಲ್ಲಿ 1985ರಲ್ಲಿ ರಾಮಕೃಷ್ಣ ಹೆಗಡೆ ಸರ್ಕಾರ ಉರುಳಿದಂತೆ ಕಾಂಗ್ರೆಸ್ ಸರ್ಕಾರವೂ ಉರುಳಲಿದೆ ಎಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಎಚ್ಚರಿಕೆ ನೀಡಿದರು.

ಜಿಲ್ಲಾಡಳಿತ ಭವನದ ಎದುರು ಮಾ.16ರಿಂದ ಪ್ರಾರಂಭವಾಗಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹದ ನಾಲ್ಕನೇ ದಿನದಲ್ಲಿ ರೈತರೊಟ್ಟಿಗೆ ರಸ್ತೆ ಮೇಲೆಯೇ ಯುಗಾದಿ ಹಬ್ಬ ಆಚರಿಸಿ ಮಾಧ್ಯಮದೊಟ್ಟಿಗೆ ಮಾತನಾಡಿ, ಈ ರೈತರು ಜನಜಾನುವಾರುಗಳೊಂದಿಗೆ ಯುಗಾದಿ ಆಚರಿಸಬೇಕಿತ್ತು. ಆದರೆ ಭೂಮಿ ಕಸಿದುಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ಮೊಂಡಾಟದ ಕಾರಣವಾಗಿ ರಸ್ತೆ ಮೇಲೆ ಹಬ್ಬ ಆಚರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸ್ಥಿತಿ ನಿರ್ಮಿಸಿರುವ ರಾಜ್ಯ ಸರಕಾರಕ್ಕೆ ಧಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

2823 ಎಕರೆಗೂ ಹೆಚ್ಚು ಫಲವತ್ತಾದ ಕೃಷಿ ಭೂಮಿಯನ್ನು ಹೊಂದಿರುವ ಜಂಗಮಕೋಟೆ ಹೋಬಳಿ 13ಹಳ್ಳಿಗಳ ರೈತರನ್ನು ಕೈಗಾರಿಕೆ ಸ್ಥಾಪನೆ ಹೆಸರಿನಲ್ಲಿ ಒಕ್ಕಲೆಬ್ಬಿಸಲು ಹೊರಟಿರುವುದು ಸರಿಯಲ್ಲ. ಪ್ರಾಣ ಹೋದರೂ ಪರವಾಗಿಲ್ಲ, ಅಂತಿಮ ಅಧಿಸೂಚನೆ ವಾಪಸ್ಸಾಗುವವರೆಗೂ ಧರಣಿ ಸತ್ಯಾಗ್ರಹ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.

ಈ ವೇಳೆ ಯಣ್ಣಂಗೂರು ಮೂರ್ತಿ, ಗುಮ್ಮಣ್ಣ, ಅಶ್ವತ್ಥ ನಾರಾಯಣಗೌಡ, ನಡಿಪಿನಾಯಕನಹಳ್ಳಿ ಹೊಂಬೇಗೌಡ, ದೇವರಾಜು, ಕುಮಾರ್, ಬಸವಾಪಟ್ಟಣ ನಂಜುಂಡಪ್ಪ, ಭರತ್‌ ಕುಮಾರ್, ಬೈರೇಗೌಡ, ಗೋಪಾಲ್ ಮೋಹನ್, ತೊಟ್ಲುಗಾನಹಳ್ಳಿ ಕೃಷ್ಣಪ್ಪ, ಚಿಕ್ಕಬಳ್ಳಾಪುರ ರಾಮಾಜಿನಪ್ಪ ಮತ್ತಿತರರು ಇದ್ದರು.

ಧರಣಿ ಸ್ಥಳದಲ್ಲಿಯೇ ಯುಗಾದಿ ಆಚರಣೆ:

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಹಾಗೂ ಜಂಗಮಕೋಟೆ ಹೋಬಳಿ ರೈತ ಹೋರಾಟಗಾರರು ಸರಕಾರಕ್ಕೆ ಚೆಲ್ಲಾಟ ರೈತರಿಗೆ ಪ್ರಾಣ ಸಂಕಟ ಶೀರ್ಷಿಕೆಯಡಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲೇ ಯುಗಾದಿ ಹಬ್ಬ ಆಚರಿಸಲಾಯಿತು. ಧರಣಿ ಸ್ಥಳದಲ್ಲಿಯೇ ಹೆಣ್ಣುಮಕ್ಕಳು ಹೋಳಿಗೆ ಮಾಡಿದರೆ, ಯುವ ರೈತರು ಅನ್ನ ಸಾಂಬಾರು ಮಾಡಿ ರಸ್ತೆ ಮೇಲೆಯೇ ಊಟ ಮಾಡುವ ಮೂಲಕ ಸರ್ಕಾರಕ್ಕೆ ಹಿಡಿ ಶಾಪ ಹಾಕಿದರು.

ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ನೇತೃತ್ವದಲ್ಲಿ ಪೂಜೆ ಸಲ್ಲಿಸಿ, ರೈತರಿಗೆ, ಮಾಧ್ಯಮದವರಿಗೆ ಹೋಳಿಗೆ ಊಟ ಉಣಬಡಿಸಿದರು. ಅಂತೆಯೇ ಪ್ರತಿಭಟನೆ ೫ನೇ ದಿನವಾದ ಶುಕ್ರವಾರ ವರ್ಷತೊಡಕನ್ನು ಕೂಡ ಇಲ್ಲಿಯೇ ಆಚರಿಸುವ ಮೂಲಕ ಸರಕಾರಕ್ಕೆ ಸೆಡ್ಡುಹೊಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೇಮೆ ನೀರಿನ ವಿಚಾರದಲ್ಲಿ ಭಿನ್ನಾಭಿಪ್ರಾಯ ಬೇಡ
ತುಮಕೂರಿನಲ್ಲಿ ಗುಡ್ಡೆ ಮಾಂಸಕ್ಕೆ ಹೆಚ್ಚಿದ ಬೇಡಿಕೆ