ಎನ್‌ಎಚ್‌ ಗುಣಮಟ್ಟಕ್ಕೆ ಸಂಸದ ಬೋಸ್‌ ತಾಕೀತು

KannadaprabhaNewsNetwork |  
Published : Mar 21, 2026, 01:15 AM IST
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಜಿಲ್ಲಾ ಅಭಿವೃದ್ದಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ | Kannada Prabha

ಸಾರಾಂಶ

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಗುಣಮಟ್ಟದಿಂದ ನಿರ್ವಹಿಸಬೇಕು. ಅಪಘಾತಗಳಿಗೆ ಅವಕಾಶವಾಗದಂತೆ ಸಮರ್ಪಕವಾಗಿ ಎಲ್ಲ ಮುಂಜಾಗ್ರತಾ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳುವಂತೆ ಸಂಸದ ಸುನೀಲ್ ಬೋಸ್ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

- ಪರಿಶೀಲನಾ ಸಭೆ

- ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಖಡಕ್‌ ಸೂಚನೆ

---

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಗುಣಮಟ್ಟದಿಂದ ನಿರ್ವಹಿಸಬೇಕು. ಅಪಘಾತಗಳಿಗೆ ಅವಕಾಶವಾಗದಂತೆ ಸಮರ್ಪಕವಾಗಿ ಎಲ್ಲ ಮುಂಜಾಗ್ರತಾ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳುವಂತೆ ಸಂಸದ ಸುನೀಲ್ ಬೋಸ್ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾ ಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕ್ಷೇತ್ರದ ವಿವಿಧ ಭಾಗಗಳಲ್ಲಿ ಕಾಮಗಾರಿ ನಿರ್ವಹಿಸಲಾಗುತ್ತಿದೆ. ಕಾಮಗಾರಿಗಳು ಕಳಪೆ ಎಂಬ ದೂರುಗಳು ಬರುತ್ತಿವೆ. ಅಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು. ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಾಮಗಾರಿಗಳು ನಿರ್ವಹಣೆಯಾಗಬೇಕು. ರಸ್ತೆ ಸುರಕ್ಷತಾ ಕ್ರಮಗಳಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ಹಿಂದಿನ ಸಭೆಯಲ್ಲೂ ಹೆದ್ದಾರಿ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಕೈಗೊಂಡು ವಿದ್ಯುತ್ ದೀಪ ಅಳವಡಿಕೆ, ಗುಂಡಿ ಮುಚ್ಚುವುದು, ಅಪಘಾತ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಕೆಲಸ ಕೈಗೊಳ್ಳಲು ಸೂಚಿಸಲಾಗಿತ್ತು. ನಾನೂ ಸಹ ಖುದ್ದಾಗಿ ಹಲವೆಡೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಆದರೆ ಇನ್ನೂ ಸಹ ಜವಾಬ್ದಾರಿಯುತವಾಗಿ ಅಧಿಕಾರಿಗಳು ಕಾಮಗಾರಿ ನಿರ್ವಹಿಸಿಲ್ಲ. ಇನ್ನು ಮುಂದೆ ಇಂತಹ ಧೋರಣೆ ಸಲ್ಲ ಎಂದು ಎಚ್ಚರಿಸಿದರು.

ಗುಂಡ್ಲುಪೇಟೆ-ನಂಜನಗೂಡು ಮಾರ್ಗದಲ್ಲಿ ವಾಹನ ದಟ್ಟಣೆ ಹೆಚ್ಚಾಗಿವೆ. ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ಈ ರಸ್ತೆಯಲ್ಲಿ ಅಪಘಾತಗಳು ಹೆಚ್ಚುತ್ತಿವೆ. ಸೂಚನಾ ಫಲಕ ಮತ್ತು ಕನ್ನಡಿಗಳಂತಹ ಸುಗಮ ಸಂಚಾರಕ್ಕೆ ಮಾರ್ಗದರ್ಶನ ಮಾಡುವ ಫಲಕಗಳನ್ನು ಅಳವಡಿಸಬೇಕು ಎಂದು ನಿರ್ದೇಶನ ನೀಡಿದರು.

ಇದೇ ವೇಳೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಮಾತನಾಡಿ ನಗರ ವ್ಯಾಪ್ತಿಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸುತ್ತಿವೆ. ಹೀಗಾಗಿ ಬೈಪಾಸ್‌ಗಳನ್ನು ನಿರ್ಮಿಸುವಂತೆ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ತಿಳಿಸಲಾಗಿತ್ತು. ಆದರೂ ಸಹ ಇನ್ನೂ ಕ್ರಮ ಕೈಗೊಂಡಿಲ್ಲ. ಎಲ್ಲೆಲ್ಲಿ ಅಗತ್ಯವಿದೆಯೋ ಅಂತಹ ಕಡೆ ತುರ್ತಾಗಿ ಕಾಮಗಾರಿ ಕೈಗೊಂಡು ಅಪಘಾತಗಳನ್ನು ತಡೆಯಬೇಕು ಎಂದರು.

ಶಾಸಕ ಎ.ಆರ್‌. ಕೃಷ್ಣಮೂರ್ತಿ ಮಾತನಾಡಿ, ಬಹುತೇಕವಾಗಿ ಸರ್ವೀಸ್ ರಸ್ತೆಗಳನ್ನು ನಿರ್ಮಿಸಿಲ್ಲ. ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಹೆದ್ದಾರಿಯಲ್ಲಿ ಬೀದಿ ದೀಪಗಳಿಲ್ಲ. ಚರಂಡಿ ವ್ಯವಸ್ಥೆಯನ್ನು ಮಾಡಿಲ್ಲ. ಅಗರ ಮಾಂಬಳ್ಳಿ ಇನ್ನಿತರ ಕಡೆ ಗುಣಮಟ್ಟದ ಕಾಮಗಾರಿ ಆಗಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ 2-3 ದಿನಗಳಿಂದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಹಾನಿ ಸಂಬಂಧ ಅಧಿಕಾರಿಗಳಿಂದ ವಿವರ ಪಡೆದ ಸಂಸದರು ಕ್ಷೇತ್ರಗಳಿಗೆ ಭೇಟಿ ನೀಡಿ ಬೆಳೆ ನಷ್ಟ ಸಂಬಂಧ ವರದಿ ನೀಡಬೇಕು. ಅರಣ್ಯ ವಾಸಿಗಳಿಗೆ ಮನೆಗಳನ್ನು ಒದಗಿಸುವ ಪ್ರಕ್ರಿಯೆ ಜರೂರಾಗಿ ನಡೆಯಬೇಕು. ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ಅಗತ್ಯಕ್ಕನುಗುಣವಾಗಿ ಸಮಾನವಾಗಿ ಮನೆಗಳ ಹಂಚಿಕೆಯಾಗಬೇಕು ಎಂದು ತಿಳಿಸಿದರು.

ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇ-ಸ್ವತ್ತು ನೀಡಲು ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಎಂಬ ದೂರುಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಅಧಿಕಾರಿಗಳು ನಿಗದಿತ ಅವಧಿಯೊಳಗೆ ಇ-ಸ್ವತ್ತು ನೀಡಬೇಕು. ಜನರನ್ನು ಅಲೆದಾಡಿಸದೇ ಕಾಲಮಿತಿಯಲ್ಲಿ ಸೌಲಭ್ಯಗಳನ್ನು ತಲುಪಿಸಬೇಕು. ಕಸ ವಿಲೇವಾರಿ ಸಮರ್ಪಕವಾಗಿ ಆಗಬೇಕು. ಪ್ರಸ್ತುತ ಬೇಸಿಗೆ ಇರುವುದರಿಂದ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಂಸದ ಸುನೀಲ್ ಬೋಸ್ ಸೂಚಿಸಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ. ಚಂದ್ರು, ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್‌ ಮುನ್ನಾ, ಜಿಲ್ಲಾಧಿಕಾರಿ ಶ್ರೀರೂಪಾ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್‌ ಮೀನಾ, ಸಭೆಯಲ್ಲಿದ್ದರು.

---

20ಸಿಎಚ್ಎನ್‌11

ಜಿಲ್ಲಾ ಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಸಂಸದ ಸುನೀಲ್‌ ಬೋಸ್ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೇಮೆ ನೀರಿನ ವಿಚಾರದಲ್ಲಿ ಭಿನ್ನಾಭಿಪ್ರಾಯ ಬೇಡ
ತುಮಕೂರಿನಲ್ಲಿ ಗುಡ್ಡೆ ಮಾಂಸಕ್ಕೆ ಹೆಚ್ಚಿದ ಬೇಡಿಕೆ