ಹಾವೇರಿ: ಹಾವೇರಿಯಲ್ಲಿ ರಾಜ್ಯ ಸರ್ಕಾರ ಫೆ. 13ರಂದು ಶೂನ್ಯ ಸಾಧನೆಯ ಸಮಾವೇಶ ಮಾಡುವುದರಿಂದ ಯಾವುದೇ ಅರ್ಥ ಇಲ್ಲ. ಭ್ರಷ್ಟಾಚಾರದಲ್ಲಿ ಮುಳುಗಿರುವ ಈ ಸರ್ಕಾರದ ಬಗ್ಗೆ ಜನರಿಗೆ ಭ್ರಮ ನಿರಸನ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ರಾಜ್ಯ ಸರ್ಕಾರ ಮನೆಗಳನ್ನು ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮನೆಗಳನ್ನು ನೀಡುವುದು ಯಡಿಯೂರಪ್ಪ ಕಾಲದಲ್ಲಿ ಆಗಿದೆ. ಇಡಿ ರಾಜ್ಯದ ಮನೆಗಳನ್ನು ಅಲ್ಲಿ ಕೊಡುವುದರಲ್ಲಿ ಅರ್ಥ ಏನಿದೆ? ಇನ್ನೊಬ್ಬರ ಸಾಧನೆಯನ್ನು ತಮ್ಮ ಸಾಧನೆ ಎಂದು ಹೇಳಿಕೊಳ್ಳುವುದರಲ್ಲಿ ಕಾಂಗ್ರೆಸ್ ನಿಸ್ಸೀಮ ಇದೆ ಎಂದು ಆರೋಪಿಸಿದರು.
ಜಿ ರಾಮ್ ಜಿ ಯೋಜನೆಯ ಬಗ್ಗೆ ಗ್ರಾಮ ಪಂಚಾಯಿತಿಯ ಎಲ್ಲ ಸದಸ್ಯರು ಅಧ್ಯಕ್ಷರನ್ನು ಫೆ. 7ರಂದು ಕರೆದು ಜಿ ರಾಮ್ ಜಿ ಯ ಪ್ರಯೋಜನ ಏನು? 100 ದಿನದಿಂದ 125 ದಿನಕ್ಕೆ ಹೆಚ್ಚಳ ಮಾಡಿರುವುದು, ನೇರ ಹಣ ವರ್ಗಾವಣೆ ಮಾಡಿರುವುದರ ಪ್ರಯೋಜನದ ಬಗ್ಗೆ ಜನರಿಗೆ ತಿಳಿಸಲು ಸಮಾವೇಶ ಮಾಡಲು ತೀರ್ಮಾನ ಮಾಡಿದ್ದೇವೆ. ಮಹಾತ್ಮಾಗಾಂಧಿ ರಾಮ ರಾಜ್ಯದಿಂದ ಗ್ರಾಮ ರಾಜ್ಯ ಅಂತ ಹೇಳಿದ್ದಾರೆ. ರಾಮ ಮತ್ತು ಗಾಂಧಿಜಿಯನ್ನು ಬೇರ್ಪಡಿಸಲು ಸಾಧ್ಯವಿಲ್ಲ ಅನ್ನುವುದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದರು.ರಾಜ್ಯದ ಅನುದಾನವಿಲ್ಲ
ಕೇಂದ್ರದಿಂದ ಹೇಗೆ ರಾಜ್ಯಗಳಿಗೆ ಅನುದಾನ ಬರುತ್ತದೆ. ಹಾಗೇ ಗ್ರಾಮ ಪಂಚಾಯಿತಿ, ತಾಲೂಕು, ಜಿಲ್ಲಾ ಪಂಚಾಯಿತಿಗಳಿಗೆ, ನಗರ ಸ್ಥಳೀಯ ಸಂಸ್ಥೆಗಳಿಗೆ ಎಸ್‌ಎಫ್‌ಸಿಯಿಂದ ₹2000 ಕೋಟಿ ರಾಜ್ಯ ಸರ್ಕಾರ ನೀಡಬೇಕು. ಅದನ್ನು ಕೊಡದೇ ಇವರು ಗ್ರಾಮ ವೀಕೇಂದ್ರೀಕರಣದ ಬಗ್ಗೆ ಮಾತನಾಡುತ್ತಾರೆ. ಯಾಕೆ ಹಣ ಬಿಡುಗಡೆ ಮಾಡಿಲ್ಲ ಅದನ್ನು ಮೊದಲು ಹೇಳಬೇಕು ಎಂದು ಆಗ್ರಹಿಸಿದರು.