ಕಾರವಾರ: ಉತ್ತರ ಕನ್ನಡದ ಪಾಲಿಗೆ 2024 ಅಭಿವೃದ್ಧಿ ಶೂನ್ಯ ಹಾಗೂ ಭರವಸೆಯೂ ಇಲ್ಲದ ವರ್ಷ. ಎಲ್ಲ ಕ್ಷೇತ್ರಗಳಲ್ಲೂ ಜಿಲ್ಲೆಯ ಪ್ರಗತಿ ಕುಂಠಿತಗೊಂಡ ವರ್ಷ.
ಯಾವುದೆ ಕ್ಷೇತ್ರದಲ್ಲೂ ಅಭಿವೃದ್ಧಿ ಕಾಣಿಸುತ್ತಿಲ್ಲ. 2025ರಲ್ಲೂ ಅಭಿವೃದ್ಧಿ ಕಾಣುವ ಭರವಸೆ ಇಲ್ಲ. ಇರುವ ಸೌಲಭ್ಯಗಳು, ಯೋಜನೆಗಳ ನಿರ್ವಹಣೆಯೂ ಸರಿಯಾಗಿ ಆಗುತ್ತಿಲ್ಲ.
ಜಿಲ್ಲೆಯಲ್ಲಿ ಪ್ರವಾಸಿ ತಾಣಗಳಿಗೆ ಬರ ಇಲ್ಲ. ಧಾರ್ಮಿಕ, ನೈಸರ್ಗಿಕ, ಮಾನವ ನಿರ್ಮಿತ ಹೀಗೆ ವಿವಿಧ ಪ್ರವಾಸಿ ತಾಣಗಳಿವೆ. ಆದರೆ ಈ ಪ್ರವಾಸಿ ತಾಣಗಳಲ್ಲಿ ಈ ಹಿಂದೆ ಇದ್ದ ಚಟುವಟಿಕೆಗೂ ಬೀಗ ಬಿತ್ತು. ಹೊಸದಾಗಿ ಯಾವುದೆ ಪ್ರವಾಸಿ ಆಕರ್ಷಣೆಯೂ ತಲೆ ಎತ್ತಲಿಲ್ಲ. ಪ್ರವಾಸಿ ತಾಣಗಳಲ್ಲಿ ಸುರಕ್ಷತಾ ಸಿಬ್ಬಂದಿಗೂ ಜೀವರಕ್ಷಕ ಉಪಕರಣಗಳಿಲ್ಲದೆ ಪ್ರವಾಸಿಗರು ಜೀವ ಕಳೆದುಕೊಂಡು ಜಿಲ್ಲೆಯ ಪ್ರವಾಸದ ಬಗ್ಗೆಯೇ ಹೊರ ಜಿಲ್ಲೆಯ ಜನತೆ ಭಯಪಡುವಂತಾಯಿತು.ಜಿಲ್ಲೆಯ ಜನತೆಯ ಬಹುಕಾಲದ ಕನಸು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ. ಅಪಘಾತ, ಹೃದಯಾಘಾತ ಅಥವಾ ತುರ್ತು ಸಂದರ್ಭದಲ್ಲಿ ಚಿಕಿತ್ಸೆಗಾಗಿ ಜನತೆ ದೂರದ ಗೋವಾ, ಮಂಗಳೂರು, ಮಣಿಪಾಲ, ಬೆಳಗಾವಿ, ಹುಬ್ಬಳ್ಳಿ-ಧಾರವಾಡದ ಆಸ್ಪತ್ರೆಗಳಿಗೆ ರೋಗಿ, ಗಾಯಾಳುಗಳನ್ನು ಕರೆದೊಯ್ಯಬೇಕು. ಆದರೆ ಅಷ್ಟು ದೂರ ಕ್ರಮಿಸುವುದರೊಳಗೆ ರೋಗಿಗಳ ಪ್ರಾಣಪಕ್ಷಿ ಹಾರಿಹೋದ ಉದಾಹರಣೆಗಳು ಸಾಕಷ್ಟಿವೆ. 2024ರಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಆ ನಿಟ್ಟಿನಲ್ಲಿ ಯಾವುದೆ ಪ್ರಕ್ರಿಯೆ ನಡೆಯದೆ ಜನತೆ ನಿರಾಶರಾದರು. ಜತೆಗೆ ಸದ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ದೊರೆಯುವ ಭರವಸೆಯೂ ಕ್ಷೀಣವಾಗಿದೆ.
ಕೃಷಿ, ಮೀನುಗಾರಿಕೆ, ತೋಟಗಾರಿಕೆ, ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ, ಕೈಗಾರಿಕೆ... ಹೀಗೆ ಯಾವುದೆ ಕ್ಷೇತ್ರದಲ್ಲಿ ಯಾವುದೆ ಯೋಜನೆ ಬಂದಿಲ್ಲ. ಬರುವ ಲಕ್ಷಣಗಳೂ ಗೋಚರವಾಗಿಲ್ಲ. ಜಿಲ್ಲೆಯ ಪ್ರಗತಿ ಬಗ್ಗೆ ಹೇಳಲು ಏನೂ ಉಳಿದಿಲ್ಲ. ಹೇಗೆ ನೋಡಿದರೂ ನಿರಾಸೆ ಎನ್ನುವಂತಾಗಿದೆ.