ತುಂಗಭದ್ರಾ ಜಲಾಶಯಕ್ಕೆ ಶೂನ್ಯ ಒಳಹರಿವು!

KannadaprabhaNewsNetwork |  
Published : Sep 19, 2026, 02:00 AM IST
ತುಂಗಭದ್ರಾ ಜಲಾಶಯ | Kannada Prabha

ಸಾರಾಂಶ

ತುಂಗಭದ್ರಾ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಶೂನ್ಯವಾಗಿದೆ. ಸೆಪ್ಟೆಂಬರ್ 10ರಿಂದ ಸೆ. 19ರ ವರೆಗೆ 9 ದಿನಗಳಿಂದ ಜಲಾಶಯಕ್ಕೆ ಒಂದು ಹನಿ ನೀರು ಹರಿದು ಬಂದಿಲ್ಲ. ಈ ಬೆಳವಣಿಗೆ ಅಚ್ಚುಕಟ್ಟು ಪ್ರದೇಶದ ಲಕ್ಷಾಂತರ ರೈತರಲ್ಲಿ ಆತಂಕ ಮೂಡಿಸಿದೆ.

ಎಸ್. ನಾರಾಯಣ್

ಮುನಿರಾಬಾದ್: ತುಂಗಭದ್ರಾ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಶೂನ್ಯವಾಗಿದೆ!

ಸೆಪ್ಟೆಂಬರ್ 10ರಿಂದ ಸೆ. 18ರ ವರೆಗೆ 9 ದಿನಗಳಿಂದ ಜಲಾಶಯಕ್ಕೆ ಒಂದು ಹನಿ ನೀರು ಹರಿದು ಬಂದಿಲ್ಲ. ಈ ಬೆಳವಣಿಗೆ ಅಚ್ಚುಕಟ್ಟು ಪ್ರದೇಶದ ಲಕ್ಷಾಂತರ ರೈತರಲ್ಲಿ ಆತಂಕ ಮೂಡಿಸಿದೆ.

ಸಾಮಾನ್ಯವಾಗಿ ಪ್ರತಿ ವರ್ಷ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ತುಂಗಭದ್ರಾ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರಿನ ಒಳಹರಿವು ಇರುತ್ತದೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಜಲಾಶಯದ ಒಳಹರಿವು ಪ್ರತಿನಿತ್ಯ 15,000 ಕ್ಯುಸೆಕ್‌ಗಿಂತ ಅಧಿಕವಿತ್ತು. ಇದು ಭೀಕರ ಪರಿಸ್ಥಿತಿಯನ್ನು ತೋರಿಸುತ್ತದೆ.

ಎರಡನೇ ಬಾರಿ ಶೂನ್ಯ ಒಳಹರಿವು: ಪ್ರಸಕ್ತ ಸಾಲಿನಲ್ಲಿ ಜೂ. 20ರಿಂದ ಜು. 5ರ ವರೆಗೆ 16 ದಿನಗಳ ವರೆಗೆ ಜಲಾಶಯಕ್ಕೆ ಶೂನ್ಯ ಒಳಹರಿವು ಇತ್ತು. ಕಳೆದ ವರ್ಷ ಜು. 4ರಂದು ತುಂಗಭದ್ರಾ ಜಲಾಶಯಕ್ಕೆ 73,000 ಕ್ಯುಸೆಕ್ ನೀರಿನ ಒಳಹರಿವು ಬಂದಿತ್ತು ಹಾಗೂ ಜು. 5ರಂದು ಜಲಾಶಯದ ಗೇಟುಗಳಿಂದ ನದಿಗೆ 64,000 ಕ್ಯುಸೆಕ್ ನೀರನ್ನು ಹರಿಸಲಾಗಿತ್ತು. ಈ ಬಾರಿ ಜಲಾಶಯ ಭರ್ತಿಯಾಗಿಲ್ಲ, ಗೇಟ್‌ಗಳನ್ನು ತೆರೆಯಲಾಗಿಲ್ಲ.

ಆತಂಕದಲ್ಲಿ ಅಚ್ಚುಕಟ್ಟು ಪ್ರದೇಶದ ರೈತರು: ಕಳೆದ ವರ್ಷ ತುಂಗಭದ್ರಾ ಜಲಾಶಯದ ಶಿಥಿಲಗೊಂಡ ಗೇಟ್‌ಗಳನ್ನು ಬದಲಾಯಿಸಿದ ಹಿನ್ನೆಲೆಯಲ್ಲಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಎರಡನೇ ಬೆಳೆಗೆ (ಹಿಂಗಾರು ಬೆಳಗೆ) ನೀರು ಲಭ್ಯವಾಗಲಿಲ್ಲ. ಇದರಿಂದ ರೈತರಿಗೆ ಭಾರಿ ಹೊಡೆತ ಬಿದ್ದಿತ್ತು. ಜಲಾಶಯದ ನೂತನ ಗೇಟುಗಳ ಅಳವಡಿಕೆ ಹಿನ್ನೆಲೆಯಲ್ಲಿ ಸುಮಾರು ₹8,000 ಕೋಟಿ ಮೌಲ್ಯದ ಹಿಂಗಾರು ಬೆಳೆಗಳನ್ನು ರೈತರು ಬೆಳೆಯಲಿಲ್ಲ. ಇದರಿಂದ ಈ ಭಾಗದ ಆರ್ಥಿಕತೆ ಮೇಲೆ ಭಾರಿ ಪೆಟ್ಟು ಬಿದ್ದಿತ್ತು.

ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಜಲಾಶಯದ ಒಳಹರಿವು ಕಡಿಮೆಯಾದ ಹಿನ್ನೆಲೆಯಲ್ಲಿ ರೈತರ ಗದ್ದೆಗಳಿಗೆ ತಡವಾಗಿ ನೀರು ಹರಿಸಲಾಯಿತು. ಗದ್ದೆಗಳಿಗೆ 90 ದಿನಗಳ ವರೆಗೆ ಅಂದರೆ ಆ. 11ರಿಂದ ನ. 11ರ ವರೆಗೆ ನೀರು ಹರಿಸಲು ಐಸಿಸಿ ಸಭೆಯಲ್ಲಿ ನಿರ್ಧರಿಸಲಾಯಿತು.

ಕೊಪ್ಪಳ, ರಾಯಚೂರು, ವಿಜಯನಗರ, ಬಳ್ಳಾರಿ, ಆಂಧ್ರದ ಕರ್ನೂಲ್, ಕಡಪ, ಅನಂತಪುರ ಜಿಲ್ಲೆಗಳ ಸುಮಾರು 20 ಲಕ್ಷಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಜಲಾಶಯದ ನೀರಿನ ನಂಬಿ ಬೆಳೆ ಬೆಳೆಯುತ್ತಾರೆ. ನಾಟಿ ಮಾಡಿದ ರೈತರು, ಬೆಳೆಗಳು ಒಣಗಿ ಹೋಗುವ ಆತಂಕ ವ್ಯಕ್ತಪಡಿಸಿದ್ದಾರೆ.

ಉತ್ತಮ ಮಳೆಯಾದರೆ ಸಮಸ್ಯೆ ಪರಿಹಾರ: ತುಂಗಭದ್ರಾ ಜಲಾಶಯದಲ್ಲಿ ನೀರಿನ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಮಲೆನಾಡಿನಲ್ಲಿ ಮಳೆಯಾಗದ ಕಾರಣ ಜಲಾಶಯದ ನೀರಿನ ಒಳಹರಿವು ಸ್ಥಗಿತಗೊಂಡಿದೆ. ಮಲೆನಾಡಿನಲ್ಲಿ ಉತ್ತಮ ಮಳೆಯಾದರೆ ಈ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ನೀರಾವರಿ ಇಲಾಖೆಯ ಅಧೀಕ್ಷಕ ಅಭಿಯಂತರ ಶ್ರೀನಿವಾಸ್ ಮಲ್ಲಿಗವಾಡ ಹೇಳಿದರು.ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನ. 11ರ ವರೆಗೆ ರೈತರ ಮುಂಗಾರು ಬೆಳೆಗಳಿಗೆ ನೀರು ಹರಿಸುವುದಾಗಿ ತೆಗೆದುಕೊಂಡು ತೀರ್ಮಾನ ಪಾಲಿಸಬೇಕು. ಈಗಾಗಲೇ ಲಕ್ಷಾಂತರ ಎಕರೆ ಪ್ರದೇಶದಲ್ಲಿ ನಾಟಿ ಕಾರ್ಯ ಸಂಪೂರ್ಣವಾಗಿದೆ. ನೀರು ನೀಡಿ ಬೆಳೆಗಳನ್ನು ರಕ್ಷಿಸುವ ಜವಾಬ್ದಾರಿ ನೀರಾವರಿಯ ಇಲಾಖೆ ಅಧಿಕಾರಿಗಳ ಮೇಲೆ ಇದೆ ಎಂದು ತುಂಗಭದ್ರಾ ರೈತ ಸಂಘದ ರಾಜ್ಯಾಧ್ಯಕ್ಷ ಪುರುಷೋತ್ತಮ್ ಗೌಡ ಹೇಳಿದರು.ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆ ಇರುವುದು ನಿಜ, ಆದರೆ ಅಚ್ಚುಕಟ್ಟು ಪ್ರದೇಶದ ರೈತರು ಆತಂಕ ಪಡಬಾರದು. ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ನ. 11ರ ವರೆಗೆ ಗದ್ದೆಗಳಿಗೆ ನೀರು ಹರಿಸಲಾಗುವುದು. ಸಮಿತಿ ಸಭೆ ನಡೆದ ದಿನಾಂಕದಂದು ಜಲಾಶಯದಲ್ಲಿ 98 ಟಿಎಂಸಿ ನೀರು ಶೇಖರಣೆ ಯಾಗಿತ್ತು. ಬಳಿಕ ಜಲಾಶಯಕ್ಕೆ ಹೆಚ್ಚುವರಿಯಾಗಿ 18 ಟಿಎಂಸಿಯಷ್ಟು ನೀರು ಹರಿದು ಬಂದಿದೆ ಎಂದು ಕಾಡಾ ಅಧ್ಯಕ್ಷ ಹಸನ್‌ಸಾಬ್ ದೋಟಿಹಾಳ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಕ್ರಮ ವಹಿಸಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್
ದಸರಾ ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಿ: ಬಿ.ಬಿ. ಅಸೂಟಿ