ಮೂರು ಹಂತದಲ್ಲಿ ಫುಡ್ ಪಾರ್ಕ್‌ ಅಭಿವೃದ್ಧಿ

KannadaprabhaNewsNetwork | Published : Dec 29, 2023 1:32 AM

ಸಾರಾಂಶ

ತಿಕೋಟಾ ತಾಲೂಕಿನ ಲೋಹಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಟ್ಟಂಗಿಹಾಳ ಗ್ರಾಮದ ಫುಡ್ ಪಾರ್ಕ್ ಅಭಿವೃದ್ಧಿಗಾಗಿ ಕಾಯ್ದಿರಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಫುಡ್ ಪಾರ್ಕ್ ಅಭಿವೃದ್ಧಿಗಾಗಿ ಮೂರು ಹಂತಗಳಲ್ಲಿ ಯೋಜನೆ ಸಿದ್ಧಪಡಿಸಲಾಗಿದೆ. ಪ್ರಸ್ತುತ ರಸ್ತೆ ಸಂಪರ್ಕ, ಚರಂಡಿ ವ್ಯವಸ್ಥೆ, ನೀರು ಸರಬರಾಜು ಹಾಗೂ ವಿದ್ಯುತ್ ಸರಬರಾಜು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ. ಇದನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮುಖಾಂತರ ಅಭಿವೃದ್ಧಿಪಡಿಸಲು ಯೋಜನೆಯು ನಗರ ಯೋಜನಾ ಅನುಮೋದನೆ ಹಂತದಲ್ಲಿರುತ್ತದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಹೇಳಿದರು.

ತಿಕೋಟಾ ತಾಲೂಕಿನ ಲೋಹಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಟ್ಟಂಗಿಹಾಳ ಗ್ರಾಮದ ಫುಡ್ ಪಾರ್ಕ್ ಅಭಿವೃದ್ಧಿಗಾಗಿ ಕಾಯ್ದಿರಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಫುಡ್ ಪಾರ್ಕ್ ಅಭಿವೃದ್ಧಿಗಾಗಿ ಸುಮಾರು 75 ಎಕರೆ ಭೂಮಿಯನ್ನು ಕರ್ನಾಟಕ ಆಹಾರ ನಿಯಮಿತ (ಫುಡ್ ಕರ್ನಾಟಕ ಲಿ.) ಸಂಸ್ಥೆಗೆ ಮೀಸಲಿಡಲಾಗಿದೆ. ಇಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳಿಗೆ ಅವಕಾಶ ನೀಡಲಾಗುತ್ತದೆ. ಮೊದಲ ಹಂತದಲ್ಲಿ ೨೫ ಎಕರೆ ಭೂಮಿಯನ್ನು ಅಭಿವೃದ್ಧಿಪಡಿಸಿ ಇಂಡಸ್ಟ್ರಿಯಲ್ ಫ್ಲಾಟ್‌ಗಳನ್ನು ತಯಾರಿಸಲಾಗುತ್ತದೆ. ಕೃಷಿ ಕೈಗಾರಿಕೆ ಮಾಡುವುವರಿಗೂ ಅವಕಾಶ ನೀಡಲಾಗುತ್ತದೆ. ಎರಡನೇ ಹಂತದಲ್ಲಿ ಕೋಲ್ಡ್ ಸ್ಟೋರೇಜ್ ಹಾಗೂ ಮೂಲಸೌಕರ್ಯ ಅಭಿವೃದ್ಧಿಪಡಿಸುವುದು ಮತ್ತು ಮೂರನೇ ಹಂತದಲ್ಲಿ ಒಳಚರಂಡಿ ಸಂಸ್ಕರಣಾ ಘಟಕದ ಮೂಲಕ ಬಳಸಿದ ನೀರನ್ನು ಮರು ಬಳಕೆ ಮಾಡುವ ಉದ್ದೇಶದಿಂದ ಶುದ್ಧೀಕರಣ ಘಟಕ ನಿರ್ಮಾಣ ಮಾಡಲಾಗುತ್ತದೆ ಎಂದರು.

ಈ ವೇಳೆ ಅಲ್ಲಿನ ಸ್ಥಿತಿಗತಿ ಹಾಗೂ ಸದರಿ ಕಾಮಗಾರಿಯನ್ನು ಕಡಿಮೆ ಸಮಯದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸುವ ವಿಧಾನದ ಕುರಿತು ಚರ್ಚೆ ನಡೆಸಿದರು. ಈ ಕಾಮಗಾರಿಗೆ ಸಂಪರ್ಕ ಹೊಂದುವ ಎರಡು ರಸ್ತೆಗಳನ್ನು ಅಭಿವೃದ್ಧಿಪಡಿಸಲು ಹಾಗೂ ಹತ್ತಿರದ ಭೂತನಾಳ ಕೆರೆಯ ಮುಖಾಂತರ ನೀರು ಸರಬರಾಜು ಮಾಡುವುದು, ವಿದ್ಯುತ್ ಸರಬರಾಜು ಮಾಡುವ ಕುರಿತು ಆಯಾ ಇಲಾಖಾ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು. ಸ್ಥಳದ ಸುತ್ತ ಮುತ್ತಲಿನ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಕೃಷಿ ಉತ್ಪನ್ನಗಳ ರಫ್ತಿನ ಕುರಿತು ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಪ್ರಶಾಂತ ಬಾರಿಗಿಡದ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಆ.ಡಬ್ಲ್ಯೂ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಹುಲ್ ಭಾವಿದೊಡ್ಡಿ, ತಿಕೋಟಾ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪುರ, ವಲಯ ಅರಣ್ಯಾಧಿಕಾರಿ ಗಿರೀಶ ಹಲಕುಡೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್.ಪಾಟೀಲ, ಹೆಸ್ಕಾಂ ಇಲಾಖೆಯ ವಿಭಾಗಾಧಿಕಾರಿ ಬಿ.ಒ. ರಾಠೋಡ, ಲೋಹಗಾಂವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪದ್ಮಿನಿ ಬಿರಾದಾರ ಮುಂತಾದವರು ಇದ್ದರು.ಕೋಟ್..

ಫುಡ್ ಪಾರ್ಕ್ ಅಭಿವೃದ್ಧಿಗಾಗಿ ಮೂರು ಹಂತಗಳಲ್ಲಿ ಯೋಜನೆ ಸಿದ್ಧಪಡಿಸಲಾಗಿದೆ. ಪ್ರಸ್ತುತ ರಸ್ತೆ ಸಂಪರ್ಕ, ಚರಂಡಿ ವ್ಯವಸ್ಥೆ, ನೀರು ಸರಬರಾಜು ಹಾಗೂ ವಿದ್ಯುತ್ ಸರಬರಾಜು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ. ಇದನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮುಖಾಂತರ ಅಭಿವೃದ್ಧಿ ಪಡಿಸಲು ಯೋಜನೆಯು ನಗರ ಯೋಜನಾ ಅನುಮೋದನೆ ಹಂತದಲ್ಲಿರುತ್ತದೆ.

ರಾಹುಲ್ ಶಿಂಧೆ. ಜಿ.ಪಂ ಸಿಇಒ

Share this article