ಕನ್ನಡಪ್ರಭ ವಾರ್ತೆ ಮೈಸೂರುಅಧಿಕಾರಿ ವರ್ಗದವರು ಸಾರ್ವಜನಿಕರ ದೂರುಗಳಿಗೆ ಬೇಗ ಸ್ಪಂದಿಸಿದರೆ ನಮಗೆ ಬರುವ ದೂರುಗಳ ಸಂಖ್ಯೆ ಕಡಿಮೆ ಆಗುತ್ತದೆ ಎಂದು ಉಪ ಲೋಕಾಯುಕ್ತ ಕೆ.ಎನ್. ಫಣೀಂದ್ರ ಹೇಳಿದರು.ಜಿಪಂ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ದೂರು ಸ್ವೀಕಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಲೋಕಾಯುಕ್ತರು, ಉಪ ಲೋಕಾಯುಕ್ತರು ಬಂದು ಹೋದಾಗ ಮಾತ್ರ ಅಧಿಕಾರಿಗಳಲ್ಲಿ ಹವಾ ಇರುತ್ತದೆ. ನಂತರ ಮತ್ತದೆ ಪರಿಸ್ಥಿತಿ ಎದುರಾಗುತ್ತದೆ. ಆದ್ದರಿಂದ ಆಗಿಂದಾಗ್ಗೆ ದೂರುಗಳ ಪರಿಶೀಲನೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಲೋಕಾಯುಕ್ತಕ್ಕೆ ಸಲ್ಲಿಸುವ ಆಯ್ದ ಅರ್ಜಿಗಳನ್ನು ಪರಿಗಣಿಸಿ ವಿಲೇವಾರಿ ಮಾಡಲು ಮುಂದಾಗಿದ್ದೇವೆ. ಈಗ 23 ಜಿಲ್ಲೆಗಳಲ್ಲಿ ಇದೇ ರೀತಿಯ ಅರ್ಜಿಗಳ ವಿಚಾರಣೆ ಮಾಡಲಾಗುತ್ತಿದೆ ಎಂದರು.ಸಾರ್ವಜನಿಕರು ನೀಡುವ ದೂರುಗಳಿಗೆ ಕೆಳಹಂತದಲ್ಲಿ ಸ್ಪಂದಿಸಬೇಕು. ಪ್ರತಿಯೊಬ್ಬ ಅಧಿಕಾರಿಯೂ ನಿಯಮಾನುಸಾರ, ಸಮಯೋಚಿತ ಹಾಗೂ ಶೀಘ್ರಗತಿ ಕೆಲಸ ಮಾಡುವಂತಹ ಮೂರು ಅಂಶಗಳನ್ನು ಬೆಳೆಸಿಕೊಂಡು ಕೆಲಸ ಮಾಡಿದರೆ ಲೋಕಾಯುಕ್ತಕ್ಕೆ ಬರುವ ದೂರು ಕಡಿಮೆ ಆಗುತ್ತದೆ ಎಂದು ಅವರು ಹೇಳಿದರು.ಈಗ 258 ಪ್ರಕರಣಗಳ ಅರ್ಜಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಗುರುವಾರ 84, ಶುಕ್ರವಾರ 95, ಶನಿವಾರ 75 ಪ್ರಕರಣಗಳನ್ನು ಆಯ್ಕೆ ಮಾಡಿಕೊಂಡು ವಿಚಾರಣೆ ನಡೆಸಲಾಗುವುದು ಎಂದು ಅವರು ವಿವರಿಸಿದರು.ಸಾರ್ವಜನಿಕ ಹಿತಾಶಕ್ತಿಯುಳ್ಳ ತಾಂತ್ರಿಕ, ತನಿಖಾ, ಪೊಲೀಸ್ ವರದಿ ಬರುವಂತಹ ಅರ್ಜಿಗಳನ್ನು ತಾತ್ಕಾಲಿಕವಾಗಿ ತೀರ್ಮಾನ ಮಾಡದೆ ಖಾಸಗಿ, ವ್ಯಕ್ತಿಗತ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುವುದು. ಲೋಕಾಯುಕ್ತಕ್ಕೆ ಬಂದಿರುವ ದೂರಿನ ಅರ್ಜಿಗಳ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಹಂತದಲ್ಲಿ ಪರಿಶೀಲಿಸಿ ಮಾಹಿತಿ ಪಡೆಯಲಾಗಿದೆ. ಎರಡು ತಿಂಗಳಿಂದ ಅಧಿಕಾರಿಗಳು ಸಭೆ ನಡೆಸಿ ಪರಿಹಾರ ಕಲ್ಪಿಸಿದ್ದಾರೆ ಎಂದರು.ರಾಜ್ಯದಲ್ಲಿರುವ ಎಂಟು ಲಕ್ಷ ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿಯ ಮೇಲೆ ರಾಜ್ಯದ 8 ಕೋಟಿ ಜನರ ಜವಾಬ್ದಾರಿ ಇರುತ್ತದೆ. ಸರ್ಕಾರಿ ಅಧಿಕಾರಿಗಳ ಕೆಲಸ ಸುಲಭವಲ್ಲ. ಸಾರ್ವಜನಿಕರ ಸೇವೆ ಮಾಡುವ ಮನೋಭಾವ ಹೊಂದಿರುವಂತಹ ವ್ಯಕ್ತಿಯ ನಿರ್ಮಾಣಕ್ಕೆ ದೇವರ ಆಶೀರ್ವಾದ ಮಾಡಿದ್ದಾನೆಂದು ಭಾವಿಸಿಕೊಳ್ಳಬೇಕು. ನಾವು ಅದನ್ನು ಸಮರ್ಥವಾಗಿ ನಿರ್ವಹಿಸಿದರೆ ಜನರ ಸಮಸ್ಯೆಗಳು ದೂರವಾಗಲಿದೆ ಎಂದು ಅವರು ಹೇಳಿದರು.ಕಾನೂನಿನ ಮೂಲಕ ಕೆಲಸ ಮಾಡಿಕೊಡಬೇಕು. ಆದರೆ, ಕಾನೂನು ಮೀರಿ ಕೆಲಸ ಮಾಡಿದರೆ ಅದು ಲಂಚ, ಆಮಿಷಕ್ಕೆ ಒಳಗಾದಂತಾಗಲಿದೆ. ಅಧಿಕಾರಿಗಳು ಮತ್ತು ನೌಕರರು ಮೂರು ತಪ್ಪುಗಳನ್ನು ಮಾಡಬಾರದು. ಕೆಸಿಎಸ್‌ಆರ್ ನಿಯಮದಡಿ ಕೆಲಸ ಮಾಡಬೇಕಾದ ಅಧಿಕಾರಿಯು ಅದರ ವಿರುದ್ಧ ಹೋಗಬಾರದು. ಕರ್ತವ್ಯ ವ್ಯಾಪ್ತಿ, ಅಧಿಕಾರವನ್ನು ನೋಡಬೇಕು. ತಮ್ಮ ಅಧಿಕಾರವನ್ನು ಹೇಗೆ ಚಲಾಯಿಸಬೇಕು ಎನ್ನುವುದು ಗೊತ್ತಿರುವ ಕಾರಣ ಬೇರೆ ಅಧಿಕಾರವನ್ನು ಚಲಾಯಿಸಬಾರದು. ಇದರಿಂದಾಗಿ ಅಧಿಕಾರ ವ್ಯಾಪ್ತಿ ಮೀರಿದಂತಾಗಲಿದೆ ಎಂದರು.ಒಂದು ಖಾತೆ ಮಾಡಿಕೊಡಲು ಹದಿನೈದು ದಿನ ಕಾಲ ಇದ್ದರೂ ಅರ್ಜಿ ಸಲ್ಲಿಸಿದ ಮರುದಿನವೇ ಆತನ ಖಾತೆ ಬದಲಾವಣೆಯಾದರೆ ಅದು ಕಾನೂನು ಮೀರಿ ನಡೆದುಕೊಂಡ ಪ್ರಕರಣ ಆಗಲಿದೆ. ಅದೇ ರೀತಿ ವಿಧವಾ ವೇತನಕ್ಕೆ ಅರ್ಜಿ ಸಲ್ಲಿಸಿದರೂ ವಿಳಂಬ ಮಾಡಿದರೆ ಅದು ನಿರೀಕ್ಷೆ ಇಟ್ಟುಕೊಂಡು ಕಾದು ಕುಳಿತುಕೊಳ್ಳು ಮನಸ್ಥಿತಿ ಬರಲಿದೆ. ಮಾಡಬೇಕಾದ ಕೆಲಸವನ್ನು ನಿಗಧಿತ ಅವಧಿಯೊಳಗೆ ಮಾಡದೆ ನಾನು ಹೀಗೆಯೇ ಮಾಡೋದು ಎನ್ನುವುದು ಸರಿಯಲ್ಲ ಎಂದು ಅವರು ಕಿವಿಮಾತು ಹೇಳಿದರು.ಭ್ರಷ್ಟಾಚಾರ ಮುಕ್ತ ಆಡಳಿತ ನೀಡಬೇಕು. ಸರ್ಕಾರಿ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು. ಸಮಾಜ ಹೇಳುವಂತೆ ದುಡ್ಡು ಇಲ್ಲದಿದ್ದರೆ ಒಂದು ಹುಲ್ಲು ಕಡ್ಡಿಯು ಅಲುಗಾಡದು ಎನ್ನುವಂತಾಗಿದೆ. ಹಾಗಾಗಿ, ಅಧಿಕಾರಿಗಳು ನಿಯಮಾನುಸಾರ, ಸಮಯೋಚಿತ ಹಾಗೂ ಶೀಘ್ರದಲ್ಲೇ ಕೆಲಸ ಎಂಬಂತೆ ಅಂಶಗಳನ್ನು ಅನುಸರಿಸಬೇಕು ಎಂದರು.ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಮೈಸೂರು ಜಿಲ್ಲೆಯಲ್ಲಿ ದೂರು ಸ್ವಲ್ಪ ಕಡಿಮೆ ಇದೆ. ಇದನ್ನು ಶೂನ್ಯಕ್ಕೆ ತರಬೇಕು. ಕೆಳಹಂತದ ಅಧಿಕಾರಿಗಳು ದೂರಿಗೆ ಸ್ಪಂದಿಸಿದರೆ ಲೋಕಾಯುಕ್ತಕ್ಕೆ ದೂರು ಸಲ್ಲಿಸುವುದು ಕಡಿಮೆ ಆಗಲಿದೆ. ಇದಕ್ಕೆ ಅವಕಾಶ ಕೊಡಬಾರದು. ದೂರುದಾರರು ಎದುರುದಾರರ ವಿರುದ್ಧ ದ್ವೇಷ ಸಾಧಿಸುವುದು, ವೈಯಕ್ತಿಕ ವಿಚಾರಗಳನ್ನು ಮಾತನಾಡುವುದಲ್ಲ. ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.ಲೋಕಾಯುಕ್ತ ಸಂಸ್ಥೆ ಕಾರ್ಯದರ್ಶಿ ಕಿರಣ್ ವಿ. ಪಾಟೀಲ್, ಜಂಟಿ ನಿಬಂಧಕ (ವಿಚಾರಣೆ) ವಿ.ಎನ್. ಮಿಲನ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಎಸ್ಪಿ ಎನ್. ವಿಷ್ಣುವರ್ಧನ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಕೆ. ಅಮರನಾಥ್, ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ್ ಇದ್ದರು.