ಕನ್ನಡಪ್ರಭ ವಾರ್ತೆ ಪಾವಗಡ ರಾಜ್ಯ ಸರ್ಕಾರದ ಶಾಸಕರು ಹಾಗೂ ಸಚಿವರು ಸರ್ವಾಧಿಕಾರಕ್ಕಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಆಸಕ್ತಿ ವಹಿಸುತ್ತಿಲ್ಲ. ಅಧಿಕಾರ ವಿಕೇಂದ್ರಿಕರಣವಾದರೆ ಕಾಮಗಾರಿಗಳ ಮೇಲೆ ಹಿಡಿತ ತಪ್ಪಲಿದೆ ಎಂಬ ಭಯ ಆವರಿಸಿದೆ. ಇದನ್ನು ಧಿಕ್ಕರಿಸಿಯೇ ಜೆಡಿಎಸ್‌ನಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಅಂಜಿನಪ್ಪ ರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದರು.
ಸರ್ಕಾರ ಮತ್ತು ಸ್ಥಳೀಯ ಆಡಳಿತದ ವೈಫಲ್ಯ ಖಂಡಿಸಿ, ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ನೇತೃತ್ವದಲ್ಲಿ ತಾಲೂಕು ಜಾತ್ಯತೀತ ಜನತಾ ದಳದ ವತಿಯಿಂದ ಸೋಮವಾರ ಗುಜ್ಜನಡುದಿಂದ ಪಾವಗಡವರೆಗೆ 23ಕಿಮೀ ಪಾದಯಾತ್ರೆ ಹಮ್ಮಿಕೊಂಡಿದ್ದು ಮಧ್ಯಾಹ್ನದ 4ಗಂಟೆ ಬಳಿಕ ಪಾವಗಡಕ್ಕೆ ಆಗಮಿಸಿ ಇಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾರ್ಲಾಪಣೆ ಸಲ್ಲಿಸಿದ ಬಳಿಕ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಮಾತನಾಡಿದರು.ಜಿಪಂ, ತಾಪಂ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡುವ ಮೂಲಕ ಗ್ರಾಮೀಣ ಜನತೆಗೆ ಅನ್ಯಾಯವೆಸಗುತ್ತಿದ್ದಾರೆ. ಪಾದಯಾತ್ರೆಯನ್ನು ಚುನಾವಣೆ ಗಿಮಿಕ್ ಎಂದು ಶಾಸಕರು ಮೂದಲಿಸಿದ್ದು, ಇಷ್ಟು ದಿನ ಶಾಸಕರು ಏನು ಮಾಡುತ್ತಿದ್ದರು? ಪಾದಯಾತ್ರೆ ಸುದ್ದಿ ತಿಳಿದು ಸುದ್ದಿಗೋಷ್ಠಿ ನಡೆಸಿದ್ದಾರಷ್ಟೇ. ಸರ್ಕಾರದ ಬಳಿ ಅನುದಾನವಿದ್ದರೆ ಕಾಮಗಾರಿ ಯಾವ ಕಾರಣಕ್ಕೆ ವಿಳಂಬ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ರಸ್ತೆ, ಮೋರಾರ್ಜಿ ದೇಸಾಯಿ ಶಾಲೆ ಸಮಸ್ಯೆ, ಸೇರಿದಂತೆ ಅನೇಕ ವಿಚಾರಗಳನ್ನು ಇಟ್ಟುಕೊಂಡು ಹೋರಾಟ ನಡೆಸಿದ್ದೇವೆ. ಇದರ ಜೊತೆಗೆ ವೈದ್ಯರ ಕೊರತೆ, ಪಡಿತರ ಚೀಟಿ ಸಮಸ್ಯೆ ಸಹ ಹೆಚ್ಚಾಗಿದೆ. ಒಂದು ವೇಳೆ ಸ್ಥಳೀಯ ಆಡಳಿತ ಹಾಗೂ ಶಾಸಕರು ಈ ಎಲ್ಲ ವಿಷಯ ಕುರಿತು ಆಸಕ್ತಿ ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಜೆಡಿಎಸ್‌ನಿಂದ ಉಗ್ರಹೋರಾಟಕ್ಕೆ ಸಜ್ಜಾಗುವುದು ಎಚ್ಚರಿಸಿದರು.ತಾಲೂಕು ಜೆಡಿಎಸ್ ಅಧ್ಯಕ್ಷ ಎನ್.ಎ.ಈರಣ್ಣ, ಸಾಯಿಸುಮನ್ , ಎನ್.ತಿಮ್ಮಾರೆಡ್ಡಿ, ಬಲರಾಮರೆಡ್ಡಿ ರಾಜಶೇಖರಪ್ಪ, ಗೋವಿಂದಬಾಬು, ಎಸ್.ವಿ.ಗೋವಿಂದಪ್ಪ, ಎಂ.ಕೆ.ನಾರಾಯಣಪ್ಪ, ಕೊತ್ತೂರು ನಾಗೇಶ್, ಬೆಸ್ಕಾಂ ನಿವೃತ್ತಧಿಕಾರಿ ಅಲ್ಕುಂದಪ್ಪ, ಗಡ್ಡಂ ತಿಮ್ಮರಾಜು, ಮನುಮಹೇಶ್, ಗುಟ್ಟಹಳ್ಳಿ ಮಣಿ, ನಾಗೇಂದ್ರ, ಗೋಪಾಲ್ , ಜಾಲೋಡು ಪರಮೇಶ್ ಕಾರ್ಯಕರ್ತರು ಇದ್ದರು.