ಬಿಜೆಪಿ ಧರ್ಮದ ಹೆಸರಿನಲ್ಲಿ ದ್ವೇಷದ ಬೀಜ ಬಿತ್ತುತ್ತಿದೆ : ಸಚಿವ ಡಾ.ಎಂ.ಸಿ.ಸುಧಾಕರ್

KannadaprabhaNewsNetwork | Updated : Dec 21 2024, 04:11 AM IST

ಸಾರಾಂಶ

ಬಿಜೆಪಿ ದೇಶದೆಲ್ಲೆಡೆ ದ್ವೇಷದ ಮಾರುಕಟ್ಟೆ ತೆರೆದಿದ್ದು, ಪ್ರತಿ ನಿತ್ಯ, ಧರ್ಮದ ಹೆಸರಲ್ಲಿ ದ್ವೇಷದ ಬೀಜ ಬಿತ್ತುತ್ತಿದೆ ಎಂದು ಸಚಿವ ಡಾ.ಎಂ.ಸಿ.ಸುಧಾಕರ್ ಅಭಿಪ್ರಾಯಪಟ್ಟರು.

 ಚಿಕ್ಕಬಳ್ಳಾಪುರ : ಬಿಜೆಪಿ ದೇಶದೆಲ್ಲೆಡೆ ದ್ವೇಷದ ಮಾರುಕಟ್ಟೆ ತೆರೆದಿದ್ದು, ಪ್ರತಿ ನಿತ್ಯ, ಧರ್ಮದ ಹೆಸರಲ್ಲಿ ದ್ವೇಷದ ಬೀಜ ಬಿತ್ತುತ್ತಿದೆ. ಅದೊಂದೇ ಅವರ ಅಜೆಂಡಾ. ಈಗ ಅವರು ಪ್ರಜಾಸತ್ತಾತ್ಮಕ ಮೌಲ್ಯವನ್ನೇ ಹೈಜಾಕ್ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಈ ಬಾರಿಯ ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ದೇಶದ ರಾಜಕೀಯ ಹಾಗೂ ಕಾಂಗ್ರೆಸ್ ಹೋರಾಟಕ್ಕೆ ಹೊಸ ತಿರುವು ನೀಡಲಿದೆ ಎಂದು ಸಚಿವ ಡಾ.ಎಂ.ಸಿ.ಸುಧಾಕರ್ ಅಭಿಪ್ರಾಯಪಟ್ಟರು. 

ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ನಗರ ಹೊರವಲಯದ ಶ್ರೀಸಿಯರಾ ಹೋಟೆಲ್ ನಲ್ಲಿ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ಮೋದಿ, ಶಾ ವಿರುದ್ಧ ಹೋರಾಟ

ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಸರ್ವಾಧಿಕಾರಿ ಆಡಳಿತದ ವಿರುದ್ಧ ಕಾಂಗ್ರೆಸ್‌ ಹೋರಾಟ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನ ಬಹಳ ಪ್ರಮುಖವಾಗಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಈ ಸಭೆಯನ್ನು ಯಶಸ್ವಿಗೊಳಿಸಲಿದ್ದು, ಡಿ. 26ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಡಿ.27 ರಂದು ಬೆಳಗ್ಗೆ 10-30 ಗಂಟೆಗೆ ಬೆಳಗಾವಿಯ ಎಐಸಿಸಿ ಶತಮಾನೋತ್ಸವ ಸಂಭ್ರಮದ ಐತಿಹಾಸಿಕ ಸಭೆ ನಡೆಯಲಿದೆ ಎಂದರು.

ದೇಶ ಆಸ್ತಿ ಏಕ ವ್ಯಕ್ತಿ ಕೈಗೆ

ಪರಿಶಿಷ್ಟ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳು ಸೇರಿ ಸಾಮಾನ್ಯ ವರ್ಗದ ಬಡವರಿಗೆ ರಕ್ಷಣೆ ಸಿಗಬೇಕು ಎಂಬ ಉದ್ದೇಶದಿಂದ ಜಾತಿಗಣತಿ ಬಗ್ಗೆ ಚರ್ಚೆ ನಡೆಯಲಿದೆ. ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡಲಾಗುತ್ತಿದೆ. ದೇಶದ ಎಲ್ಲಾ ಆಸ್ತಿಗಳು ಒಬ್ಬ ವ್ಯಕ್ತಿಯ ಕೈಗೆ ಸೇರುತ್ತಿವೆ. ಹೀಗಾಗಿ ಸಮಾನತೆ ಎಂಬುದೇ ದೇಶದಲ್ಲಿ ಇಲ್ಲವಾಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ದೆಹಲಿಯಲ್ಲಿ ಸಂಸತ್ತಿನಲ್ಲಿ ನಡೆದಂತಹ ಡಾ. ಬಿಆರ್ ಅಂಬೇಡ್ಕರ್ ಅವರ ಬಗ್ಗೆ ಹೀಯಾಳಿಸಿದ ಗೃಹ ಸಚಿವರ ಅಮಿತ್ ಶಾ ಅವರ ನಡೆಯನ್ನು ಖಂಡಿಸಿದರು. ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ನಡೆದ ಸಿಟಿ ರವಿ ಪ್ರಕರಣದ ಬಗ್ಗೆ ಮಾತನಾಡಿ ಸಿ.ಟಿ. ರವಿ ರವರು ನಾನು ಒಟ್ಟಿಗೆ ವಿಧಾನ ಸಭೆ ಪ್ರವೇಶಿಸಿದೆವು. ಅವರು ಎತ್ತರಕ್ಕೆ ಬೆಳೆದರು, ಇಂತಹ ಕೀಳು ಮಟ್ಟಕ್ಕೆ ಮಾತನಾಡಬಾರದಿತ್ತು. ಅವರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಲೇಬೇಕು ಎಂದರು.

ನಂದಿಬೆಟ್ಟಕ್ಕೆ ರೋಪ್‌ ವೇ

ನಂದಿ ಬೆಟ್ಟಕ್ಕೆ ಅತಿ ಶೀಘ್ರದಲ್ಲಿಯೇ ರೋಪ್ ವೇ ಅನ್ನು ಪರಿಸರಕ್ಕೆ ಹಾನಿ ಆಗದಂತೆ ನಿರ್ಮಾಣ ಮಾಡಲಾಗುವುದು. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಇನ್ನೂ ಸಮಿತಿಗಳ ರಚನೆ ಆಗದಿರುವ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ಈಗಾಗಲೇ ಚಿಂತಾಮಣಿ ಬಾಗೇಪಲ್ಲಿ ತಾಲ್ಲೂಕುಗಳಲ್ಲಿ ಆಗಿದೆ ಶೀಘ್ರದಲ್ಲಿಯೇ ಚಿಕ್ಕಬಳ್ಳಾಪುರದಲ್ಲೂ ಸಮಿತಿಗಳ ರಚನೆ ಆಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಎನ್. ಕೇಶವ್ ರೆಡ್ಡಿ, ಮಾಜಿ ಶಾಸಕರಾದ ಕೆ.ಪಿ.ಬಚ್ಚೇಗೌಡ, ಅನಸೂಯಮ್ಮ, ಜಿ ಪಂ ಮಾಜಿ ಅಧ್ಯಕ್ಷ ಗಂಗರೆ ಕಾಲುವೆ ನಾರಾಯಣಸ್ವಾಮಿ. ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ನಂದಿ ಅಂಜನಪ್ಪ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಕೆ.ಸಿ.ರಾಜಾಕಾಂತ್, ಮುನೇಗೌಡ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ್, ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಸಿ.ಎನ್.ನಾರಾಯಣಸ್ವಾಮಿ,ಕಾರ್ಯದರ್ಶಿ ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಜಯರಾಮ್, ಡಿವಿಆರ್ ರಾಜೇಶ್, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಡಗಲ್ ಶ್ರೀಧರ್,ಕೆಪಿಸಿಸಿ ಕಾರ್ಮಿಕ ರಾಜ್ಯ ಕಾರ್ಯದರ್ಶಿ ಕೋನಪಲ್ಲಿ ಕೋದಂಡ, ನಗರಸಭೆ ಸದಸ್ಯ ಎಸ್. ಎಂ.ರಫೀಕ್, ವಕೀಲರಾದ ಶಾಹಿದ್, ವಿನೋದ್,ಮುಖಂಡರುಗಳಾದ ಉಷಾ ಶ್ರೀನಿವಾಸ್ ಬಾಬು, ಮಮತಾ ಮೂರ್ತಿ, ಮಂಗಳ ಪ್ರಕಾಶ್, ನಾರಾಯಣಮ್ಮ,ಕೃಷ್ಣಪ್ಪ ,ನರೇಂದ್ರ,ನಾರಾಯಣಸ್ವಾಮಿ, ಕೃಷ್ಣಮೂರ್ತಿ, ಏಜಾಜ್. ಡಾಬಾ ನಾಗರಾಜ್, ಕಳವಾರ ಶ್ರೀಧರ್, ಪೆದ್ದನ್ನ, ಬಾಬಜಾನ್ ಇದ್ದರು

Share this article