ಮಾಜಿ ಸ್ಪೀಕರ್ ರಮೇಶ್‌ ಕುಮಾರ್‌ ತೋಟದಲ್ಲಿ ಭೂ ಒತ್ತುವರಿ ಸರ್ವೇ ಮತ್ತೆ ಮುಂದೂಡಿಕೆ

KannadaprabhaNewsNetwork |  
Published : Dec 21, 2024, 01:16 AM ISTUpdated : Dec 21, 2024, 04:14 AM IST
೨೦ಕೆಎಲ್‌ಆರ್-೬ಶುಕ್ರವಾರ ನಿಗದಿಯಾದಂತೆ ಶ್ರೀನಿವಾಸಪುರ ಅಡ್ಡಗಲ್ ಬಳಿಯ ಹೊಸಹುಡ್ಯ ಸರ್ವೆ ನಂ-೧ ಮತ್ತು ೨ ರಲ್ಲಿ ಒತ್ತುವರಿಗೆ ತೆರವಿಗೆ ಆಗಮಿಸಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು. | Kannada Prabha

ಸಾರಾಂಶ

ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಗ್ರಾಮದ ಬಳಿಯ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ತೋಟದಲ್ಲಿ ಕಳೆದ ಎರಡು ದಶಕಗಳಿಂದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಅರಣ್ಯ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಂಟಿ ಸರ್ವೆ ಕಾರ್ಯದ ಪ್ರಹಸನ ನಡೆಯುತ್ತಲೇ ಇದೆ

 ಕೋಲಾರ : ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಗ್ರಾಮದ ಬಳಿಯ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ತೋಟದಲ್ಲಿ ಕಳೆದ ಎರಡು ದಶಕಗಳಿಂದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಅರಣ್ಯ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಂಟಿ ಸರ್ವೆ ಕಾರ್ಯದ ಪ್ರಹಸನ ನಡೆಯುತ್ತಲೇ ಇದೆ, ಶುಕ್ರವಾರ ನಡೆಯಬೇಕಿದ್ದ ಜಂಟಿ ಸರ್ವೇ ಕಾರ್ಯವನ್ನು ಜನವರಿ 2ಕ್ಕೆ ಮುಂದೂಡಲಾಯಿತು.

ನಿಗದಿಯಂತೆ ಶುಕ್ರವಾರ ಜಂಟಿ ಸರ್ವೇ ಕಾರ್ಯ ನಡೆಯಬೇಕಿತ್ತು. ಆದರೆ ರಮೇಶ್ ಕುಮಾರ್ ಅವರ ಬೆನ್ನಿಗೆ ನಿಂತ ಸರ್ಕಾರ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ರಾತ್ರೋ ರಾತ್ರಿ ಕಂದಾಯ ಇಲಾಖೆ ಪ್ರಾದೇಶಿಕ ಆಯುಕ್ತರಿಂದ ಜಿಲ್ಲಾಧಿಕಾರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಶುಕ್ರವಾರ ನಡೆಯಬೇಕಿದ್ದ ಸರ್ವೇ ಕಾರ್ಯದಲ್ಲಿ ಕಂದಾಯ ಇಲಾಖೆ ಮತ್ತು ಭೂಮಾಪನಾ ಇಲಾಖೆ ಅಧಿಕಾರಿಗಳು ಭಾಗವಹಿಸಲಿಲ್ಲ.

ಅರಣ್ಯ ಇಲಾಖೆಗೆ ಮಾಹಿತಿ ಇಲ್ಲ

ಡಿ.20 ರಂದು ನಿಗದಿ ಮಾಡಲಾಗಿದ್ದ ಸರ್ವೆ ಕಾರ್ಯ ಪೂರ್ವ ತಯಾರಿಗಳು ಗುರುವಾರ ರಾತ್ರೋ ರಾತ್ರಿ ನಿಂತು ಹೋದವು, ಆದರೆ ಈ ಮಾಹಿತಿ ಅರಣ್ಯ ಇಲಾಖೆಗೆ ಅಧಿಕೃತವಾಗಿ ತಲುಪದ ಹಿನ್ನೆಲೆಯಲ್ಲಿ ಶುಕ್ರವಾರ ನಿಗದಿಯಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಅಡ್ಡಗಲ್ ಗ್ರಾಮದ ಬಳಿಯ ಹೊಸಹುಡ್ಯ ಸರ್ವೆ ನಂ-1 ಮತ್ತು 2 ರಲ್ಲಿ ಒತ್ತುವರಾಗಿದೆ ಎನ್ನಲಾದ 61.39 ಎಕರೆ ರಮೇಶ್ ಕುಮಾರ್ ಅವರ ತೋಟಕ್ಕೆ ಬಂದಿದ್ದರು.ಶುಕ್ರವಾರ ಬೆಳಗ್ಗೆ ೧೧ ಗಂಟೆಯಿಂದ ಸುಮಾರು ಎರಡು ಗಂಟೆಗಳ ಕಾಲ ಸ್ಥಳ ಮಹಜರು ಮಾಡಿದ ನಂತರ ಕಂದಾಯ ಇಲಾಖೆ ಅಧಿಕಾರಿಗಳು ಭೂಮಾಪನಾ ಇಲಾಖೆ ಅಧಿಕಾರಿಗಳು ಬಾರದ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ಹಿಂತಿರುಗಿದ್ದಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕುಂಡಲು ವಿವರಿಸಿದರು. ಹೈಕೋರ್ಟ್‌ ಆದೇಶಕ್ಕೆ ವ್ಯತಿರಿಕ್ತ ಸೂಚನೆ

ಹೈಕೋರ್ಟ್ ನೀಡಿದ್ದ ನಿರ್ದೇಶನದಂತೆಯೇ ಜಂಟಿ ಸರ್ವೇ ಕಾರ್ಯವನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರೇ ನಿರ್ವಹಿಸಬೇಕು ಎಂದು ಸೂಚನೆ ನೀಡಿತ್ತು. ಆದರೆ ಕಂದಾಯ ಇಲಾಖೆ ಪ್ರಾದೇಶಿಕ ಆಯುಕ್ತರು ಅದಕ್ಕೆ ವ್ಯತಿರಿಕ್ತ ಆದೇಶ ಪತ್ರ ಬರೆದು ಜ.2 ರಂದು ಜಂಟಿ ಸರ್ವೆ ಕಾರ್ಯ ನಡೆಸುವಂತೆ ಸೂಚನೆ ನೀಡಿದ್ದಾರೆ. ಪರಿಣಾಮವಾಗಿ ಇಂದು ನಿಗದಿ ಮಾಡಿದ್ದ ಜಂಟಿ ಸರ್ವೇ ಕಾರ್ಯ ನಡೆಯದೆ ಅರಣ್ಯ ಇಲಾಖೆಯವರು ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ವಾಪಸ್ಸಾದರು.

ಜಂಟಿ ಸರ್ವೇ ಕಾರ್ಯ ನಡೆಯುತ್ತದೆ ಅನ್ನೋ ನಿಟ್ಟಿನಲ್ಲಿ ರಮೇಶ್ ಕುಮಾರ್ ಅವರ ಬೆಂಬಲಿಗರು ನೂರಾರು ಸಂಖ್ಯೆಯಲ್ಲಿ ಸೇರಿದ್ದರು, ಆದರೆ ರಮೇಶ್ ಕುಮಾರ್ ಹಾಜರಾಗಿರಲಿಲ್ಲ. ಅವರ ಬೆಂಬಲಿಗರು ದೂರದಲ್ಲಿ ಮೂಕಪ್ರೇಕ್ಷಕರಾಗಿ ನಿಂತಿದ್ದರು.ಜನವರಿ 2 ರಂದು ನಡೆಯುವ ಸರ್ವೇ ಕಾರ್ಯದಲ್ಲಿ ರಮೇಶ್ ಕುಮಾರ್ ಹಾಜರಿರುತ್ತಾರೆ ಎಂದು ಅವರ ಬೆಂಬಲಿಗರಾದ ದಿಂಬಾಲ ಅಶೋಕ್ ತಿಳಿಸಿದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ