ಕಾಲಮಿತಿಯೊಳಗೆ 56000 ಹುದ್ದೆ ಭರ್ತಿ: ಸಿಎಂ

Published : Jun 05, 2026, 11:47 AM IST
dk shivakumar

ಸಾರಾಂಶ

ಹದಿನೈದು ದಿನಗಳ ಒಳಗಾಗಿ ಎಲ್ಲಾ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ಬಗ್ಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಆದೇಶಿಸಿದ್ದೇನೆ. 56 ಸಾವಿರ ಹುದ್ದೆಗಳ ಭರ್ತಿಗೆ ಸಮಯ ನಿಗದಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

 ಬೆಂಗಳೂರು :  ಹದಿನೈದು ದಿನಗಳ ಒಳಗಾಗಿ ಎಲ್ಲಾ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ಬಗ್ಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಆದೇಶಿಸಿದ್ದೇನೆ. 56 ಸಾವಿರ ಹುದ್ದೆಗಳ ಭರ್ತಿಗೆ ಸಮಯ ನಿಗದಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ವಿಧಾನಸೌಧದಲ್ಲಿ ಗುರುವಾರ ಮುಖ್ಯ ಕಾರ್ಯದರ್ಶಿ, ಎಲ್ಲಾ ಅಪರ ಮುಖ್ಯಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಇಲಾಖಾ ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಪೊಲೀಸ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿ ಈ ವಿಚಾರ ತಿಳಿಸಿದರು.

ರಾಜ್ಯದಲ್ಲಿ ಖಾಸಗಿ ಉದ್ಯೋಗ ವಿನಿಮಯ ಕೇಂದ್ರವನ್ನೂ ಸ್ಥಾಪಿಸಲಾಗುವುದು. ಎಲ್ಲಾ ಖಾಸಗಿ, ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಅನುಕೂಲವಾಗುವಂತೆ, ಯುವಕರಿಗೆ ಕೆಲಸ ಸಿಗುವಂತೆ ಸೌಲಭ್ಯ ಕಲ್ಪಿಸಲಾಗುವುದು ಎಂದರು‌. ಸಕಾಲ ವಿಚಾರದಲ್ಲಿ ಜನರಿಗೆ ಹೆಚ್ಚಿನ ಅನುಕೂಲವಾಗಬೇಕು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಕಡ್ಡಾಯವಾಗಿ ಆಯಾ ಜಿಲ್ಲೆಗಳಲ್ಲಿರುವ ತಾಲೂಕುಗಳಿಗೆ ಹೋಗಿ ಪರಿಶೀಲನೆ ಮಾಡಬೇಕು ಎಂದು ಸೂಚಿಸಿದ್ದೇನೆ. ಇನ್ನು, ಕರ್ನಾಟಕ ಭವನ ಕಾರ್ಯಾಚರಣೆಯಲ್ಲಿ ನನಗೆ ತೃಪ್ತಿಯಿಲ್ಲ. ಹೀಗಾಗಿ ನಾನು ದೆಹಲಿಗೆ ಹೋಗಿ, ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಸಭೆ ಮಾಡಿ ಕೆಲ ವಿಭಾಗಗಳನ್ನು ರಚಿಸಲಾಗುವುದು. ದೆಹಲಿಯಲ್ಲಿರುವ ನಮ್ಮ ರಾಜ್ಯದ ಅಧಿಕಾರಿಗಳು, ರಾಜ್ಯದ ಯೋಜನೆಗಳ ಅನುಷ್ಠಾನಕ್ಕೆ ಗರಿಷ್ಠ ಪ್ರಯತ್ನ ಮಾಡಬೇಕು ಎಂದರು.

ಎಸ್‌ಐಆರ್‌ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳಬಾರದು: ಮುಖ್ಯಮಂತ್ರಿ

ರಾಜ್ಯದಲ್ಲಿ ಈಗ ವಿಶೇಷ ತೀವ್ರ ಮತ ಪರಿಷ್ಕರಣೆ(ಎಸ್‌ಐಆರ್‌) ನಡೆಯುತ್ತಿದೆ. ಯಾವುದೇ ಒಬ್ಬ ಮತದಾರನೂ ಮತದಾನದ ಹಕ್ಕು ಕಳೆದುಕೊಳ್ಳಬಾರದು. ಈ ಪ್ರಕ್ರಿಯೆಗೆ ಅಗತ್ಯವಾದ ಎಲ್ಲಾ ದಾಖಲೆಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಇದೇ ವೇಳೆ ಮುಖ್ಯಮಂತ್ರಿ ತಿಳಿಸಿದರು. ಕೇರಳ ಹೊರತುಪಡಿಸಿ ಬೇರೆ ರಾಜ್ಯಗಳಲ್ಲಿ 90 ಲಕ್ಷ, 20 ಲಕ್ಷ ಜನರ ಎಸ್‌ಐಆರ್‌ನಿಂದ ಮತದಾನದ ಹಕ್ಕು ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಹಾಗೆ ಆಗಬಾರದು. ನಮ್ಮ ಸ್ಥಳೀಯ ಸಂಸ್ಥೆಗಳಲ್ಲಿ ನಿವಾಸ ಧೃಢೀಕರಣ ಪತ್ರ ನೀಡಲು ಅವಕಾಶವಿದೆ. ಈ ಪ್ರಕ್ರಿಯೆಯಲ್ಲಿ ಅಗತ್ಯವಿರುವ ಎಲ್ಲಾ ದಾಖಲೆ ನೀಡಬೇಕು. ಅಗತ್ಯ ಪ್ರದೇಶಗಳಲ್ಲಿ ಸಹಾಯ ಕೇಂದ್ರಗಳ ಸ್ಥಾಪಿಸುವುದು ಸೇರಿ ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳಲು ನಿರ್ದೇಶನ ನೀಡಿದ್ದೇನೆ. ಜೊತೆಗೆ ಈ ಪ್ರಕ್ರಿಯೆಯಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳದಿದ್ದರೆ ಸವಲತ್ತುಗಳನ್ನು ಜನ ಕಳೆದುಕೊಳ್ಳಲಿದ್ದಾರೆ. ಸಿಎಂ ಹಾಗೂ ಡಿಸಿಎಂ ಸೇರಿ ಎಲ್ಲಾ ಮತದಾರರು ಎನ್ಯುಮರೇಷನ್ ಅರ್ಜಿ ತುಂಬಿ, ಸಹಿ ಹಾಕಿ, ದಾಖಲೆ ಸಮೇತ ಸಲ್ಲಿಕೆ ಮಾಡಬೇಕು. ಇಲ್ಲವಾದರೆ ಮತದಾನದ ಹಕ್ಕು ಕಳೆದುಕೊಳ್ಳುತ್ತಾರೆ ಎಂದು ಜಾಗೃತಿ ಮೂಡಿಸಬೇಕು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕೆಪಿಎಸ್‌ ನಿರ್ಮಾಣಕ್ಕೆ ಸಿಎಸ್‌ಆರ್‌ ನಿಧಿ ವಿನಿಯೋಗಕ್ಕೆ ಶೀಘ್ರ ಪತ್ರ

ಸರ್ಕಾರ ಪ್ರಸ್ತುತ ಕೈಗೊಂಡಿರುವ ಕರ್ನಾಟಕ ಪಬ್ಲಿಕ್‌ ಶಾಲೆಗಳ ನಿಮಾಣಕ್ಕೆ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ(ಸಿಎಸ್‌ಆರ್‌) ನಿಧಿಯ ಹಣ ವಿನಿಯೋಗಿಸುವಂತೆ ರಾಜ್ಯದ ಎಲ್ಲಾ ಕೈಗಾರಿಕೆ, ಕಾರ್ಪೊರೇಟ್‌ ಸಂಸ್ಥೆಗಳಿಗೆ ಶೀಘ್ರ ಪತ್ರ ಬರೆಯಲಾಗುವುದು ಎಂದು ಸಿಎಂ ತಿಳಿಸಿದರು. ರಾಜ್ಯದಲ್ಲಿ ಸುಮಾರು 8 ಸಾವಿರ ಕೋಟಿಯಷ್ಟು ಸಿಎಸ್ಆರ್ ನಿಧಿ ಇದ್ದು, ಯಾವ ಸಂಸ್ಥೆ ಯಾವ ಉದ್ದೇಶಕ್ಕೆ ವಿನಿಯೋಗಿಸುತ್ತಿದೆ ಎಂಬ ಮಾಹಿತಿ ಇಲ್ಲ. ಹೀಗಾಗಿ ಇನ್ನು ಮುಂದೆ ಈ ನಿಧಿ ಬಳಕೆ ಸಂಬಂಧ ಸಂಸ್ಥೆಗಳು ಸರ್ಕಾರಕ್ಕೆ ಮಾಹಿತಿ ನೀಡಬೇಕು. ನಾವು ಈಗಾಗಲೇ ಸಿಎಸ್ಆರ್ ನಿಧಿಯಲ್ಲಿ ಪ್ರತಿ ಮೂರು ಗ್ರಾಪಂಗೆ ಒಂದರಂತೆ ಕೆಪಿಎಸ್ ಶಾಲೆಗಳ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಸರ್ಕಾರ ಕೂಡ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಈ ಕ್ಷೇತ್ರಕ್ಕೆ ನಿಮ್ಮ ಸಿಎಸ್ಆರ್ ನಿಧಿ ಬಳಸುವಂತೆ ಮನವಿ ಮಾಡಿ ಪತ್ರ ಬರೆಯಲಾಗುವುದು. ಪ್ರಾಥಮಿಕ ಶಿಕ್ಷಣದ ಬಳಿಕ ಆರೋಗ್ಯ ಕ್ಷೇತ್ರದಲ್ಲಿ ಈ ನಿಧಿ ಬಳಸಲಾಗುವುದು ಎಂದು ವಿವರಿಸಿದರು.

ಇತಿಹಾಸ ಓದಲು, ಇತಿಹಾಸ ಬರೆಯಲು ನನಗೆ ಇಷ್ಟವಿಲ್ಲ. ಇತಿಹಾಸ ಸೃಷ್ಟಿ ಮಾಡಿ ಸಾಕ್ಷಿಗುಡ್ಡೆ ಬಿಟ್ಟುಹೋಗಬೇಕು. ಪ್ರಮಾಣ ವಚನ ಸ್ವೀಕರಿಸಿದ ದಿನ ನಾವು ಕೈಗೊಂಡಿರುವ ಆರು ತೀರ್ಮಾನಗಳನ್ನು ಜಾರಿಗೊಳಿಸುವ ಸಂಬಂಧ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಅಧಿಕಾರ ಬೇಕಾದರೆ ಡಿಕೆ ಜತೆ ಹೋಗಿ: ಹರಿಪ್ರಸಾದ್
ಭಾರತ್‌ ಜೋಡೋ ಸಂಘ ಆರ್ಥಿಕ ಹೊರೆ : ಸತೀಶ್‌