ಭಾರತ್‌ ಜೋಡೋ ಸಂಘ ಆರ್ಥಿಕ ಹೊರೆ : ಸತೀಶ್‌

Published : Jun 05, 2026, 09:42 AM IST
Satish Jarkiholi

ಸಾರಾಂಶ

ಸಚಿವ ಸಂಪುಟದಲ್ಲಿ ತೆಗೆದುಕೊಂಡ ನಿರ್ಧಾರಗಳ ಪೈಕಿ ಭಾರತ್‌ ಜೋಡೋ ಯುವ ಸಂಘ ಸ್ಥಾಪನೆಗೆ ಹೆಚ್ಚಿನ ಅನುದಾನ ಬೇಕಾಗುತ್ತದೆ. ಆದರೂ, ಅನುದಾನ ಹೊಂದಾಣಿಕೆ ಮಾಡಿಕೊಂಡು ಸಚಿವ ಸಂಪುಟ ನಿರ್ಧಾರಗಳನ್ನು ಅನುಷ್ಠಾನಗೊಳಿಸುತ್ತೇವೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

  ಬೆಂಗಳೂರು :  ಸಚಿವ ಸಂಪುಟದಲ್ಲಿ ತೆಗೆದುಕೊಂಡ ನಿರ್ಧಾರಗಳ ಪೈಕಿ ಭಾರತ್‌ ಜೋಡೋ ಯುವ ಸಂಘ ಸ್ಥಾಪನೆಗೆ ಹೆಚ್ಚಿನ ಅನುದಾನ ಬೇಕಾಗುತ್ತದೆ. ಆದರೂ, ಅನುದಾನ ಹೊಂದಾಣಿಕೆ ಮಾಡಿಕೊಂಡು ಸಚಿವ ಸಂಪುಟ ನಿರ್ಧಾರಗಳನ್ನು ಅನುಷ್ಠಾನಗೊಳಿಸುತ್ತೇವೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಧ್ಯಕ್ಷತೆಯ ಮೊದಲ ಸಚಿವ ಸಂಪುಟ ಸಭೆ ನಿರ್ಧಾರಗಳ ಕುರಿತು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್‌ ಜಾರಕಿಹೊಳಿ, ನೂತನ ಮುಖ್ಯಮಂತ್ರಿ ಅವರ ಮೊದಲ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳು ಒಂದಷ್ಟು ಆರ್ಥಿಕ ಹೊರೆಯಾಗುತ್ತದೆ. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್‌ ವಿತರಿಸಲು ಹೆಚ್ಚಿನ ಅನುದಾನ ಬೇಕಿಲ್ಲ. ವಿದ್ಯುತ್‌ ಸಂಪರ್ಕಕ್ಕೆ ಒಸಿ-ಸಿಸಿ ನೀಡುವಲ್ಲಿ ವಿನಾಯಿತಿ ಸೇರಿ ಇನ್ನಿತರ ನಿರ್ಧಾರಗಳಿಗೆ ಹಣದ ಅಗತ್ಯವಿಲ್ಲ. ಆದರೆ, ಭಾರತ್‌ ಜೋಡೋ ಯುವ ಸಂಘ ಸ್ಥಾಪನೆಗೆ ಹೆಚ್ಚಿನ ಅನುದಾನ ಬೇಕಾಗುತ್ತದೆ. ಅದಕ್ಕೆ ಅನುದಾನ ಹೊಂದಿಸಿಕೊಂಡು ಅನುಷ್ಠಾನ ಮಾಡುತ್ತೇವೆ ಎಂದರು.

ಒಂದೇ ಹುದ್ದೆ ನಿಯಮದಿಂದ ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ:

ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿರುವ ಕುರಿತು ಮಾತನಾಡಿದ ಸತೀಶ್‌ ಜಾರಕಿಹೊಳಿ, ಕಾಂಗ್ರೆಸ್‌ನಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮವಿದೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿಲ್ಲ. ಹಾಗೆಂದ ಮಾತ್ರಕ್ಕೆ ನನಗೆ ಕೈ ತಪ್ಪಿದೆ ಎಂದಲ್ಲ. ನನಗೆ ಮೊದಲೇ ಅದು ತಿಳಿದಿತ್ತು. ಆದರೂ ಸಚಿವ ಸ್ಥಾನದ ಜತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮನವಿ ಮಾಡಿದ್ದೆ. ಅಂತಿಮವಾಗಿ ಹೈಕಮಾಂಡ್‌ ಸಚಿವ ಸ್ಥಾನ ನೀಡಿದೆ ಎಂದರು.

ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧೆಯಾಗುತ್ತೀರಿ ಎಂದು ನೀಡಲಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧಿ ಎಂದು ತೋರಿಸಲು ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೇಳಲಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗುವುದಕ್ಕೆ ಮುಂಚೆ ಕೆಪಿಸಿಸಿ ಅಧ್ಯಕ್ಷರಾಗಿರಲಿಲ್ಲ. ಮುಖ್ಯಮಂತ್ರಿಯಾಗುವುದಕ್ಕೆ ಅಧ್ಯಕ್ಷರಾಗಿರಬೇಕು ಅಂತೇನಿಲ್ಲ. ನನಗೆ ಅಧ್ಯಕ್ಷ ಸ್ಥಾನದ ಜತೆಗೆ ಸಚಿವ ಸ್ಥಾನವನ್ನೂ ನೀಡಿ ಎಂದು ಕೇಳಿದ್ದೆ ಎಂದು ತಿಳಿಸಿದರು.

ಬಿ.ಕೆ.ಹರಿಪ್ರಸಾದ್‌ ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧಿಯೇ ಎಂಬುದಕ್ಕೆ ಮಾತನಾಡಿ, ಯಾಕಾಗಬಾರದು? ಅವರೂ ಹಿರಿಯ ನಾಯಕರು. ಇನ್ನೂ ಎರಡು ವರ್ಷಗಳಿವೆ ಎಂದರು.

ಸರ್ಕಾರದಲ್ಲಿ ಏನು ಮಾಡಿದ್ರೂ ಅದು ಆರ್ಥಿಕ ಹೊರೆಯೇ: ಸಿಎಂ 

  ಬೆಂಗಳೂರು :  ಇದು, ಗ್ರಾಪಂಗೊಂದು ಭಾರತ್‌ ಜೋಡೋ ಯುವಕರ ಸಂಘ ಮಾಡಲು ಹೊರಟಿರುವ ಸರ್ಕಾರದ ನಿರ್ಧಾರದಿಂದ ಸ್ವಲ್ಪ ಆರ್ಥಿಕ ಹೊರೆಯಾಗುತ್ತದೆ ಎಂಬ ಸಚಿವ ಸತೀಶ್‌ ಜಾರಕಿಹೊಳಿ ಹೇಳಿಕೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ನೀಡಿದ ಪ್ರತಿಕ್ರಿಯೆ.

ಗುರುವಾರ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಸತೀಶ್‌ ಜಾರಕಿಹೊಳಿ ಅವರ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಅವರು, ಸರ್ಕಾರದಲ್ಲಿ ಏನು ಕೆಲಸ ಮಾಡಿದರೂ ಆರ್ಥಿಕ ಹೊರೆಯೇ ಆಗುತ್ತದೆ. ಪತ್ರಿಕಾ ಗೋಷ್ಠಿ ಮಾಡಿದರೂ ಕಾಫಿ, ತಿಂಡಿ ಕೊಡುವುದು ಕೂಡ ಆರ್ಥಿಕ ಹೊರೆಯೇ ತಾನೆ ಎಂದು ಹಾಸ್ಯ ಮಾಡಿದರು. ಆಗ ಕೆಲ ಮಾಧ್ಯಮ ಪ್ರತಿನಿಧಿಗಳು ಅದಕ್ಕೇ ಏನೋ ಇವತ್ತು ಕನಿಷ್ಠ ನೀರು, ಬಿಸ್ಕೆಟ್‌ ಕೂಡ ಕೊಟ್ಟಿಲ್ಲ ಎಂದು ಚಟಾಕಿ ಹಾರಿಸಿದ್ದು ಸಭೆಯನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು.

ಕಾಫಿ, ತಿಂಡಿ ಕೂಡ

ಆರ್ಥಿಕ ಹೊರೆ!

ಸರ್ಕಾರದಲ್ಲಿ ಏನೇ ಮಾಡಿದರೂ ಅದರಿಂದ ಆರ್ಥಿಕ ಹೊರೆ ಆಗುತ್ತದೆ. ಮಾಧ್ಯಮದವರಿಗೆ ಪತ್ರಿಕಾಗೋಷ್ಠಿ ಏರ್ಪಡಿಸಿ ಕಾಫಿ, ತಿಂಡಿ ಕೊಡುವುದು ಕೂಡ ಆರ್ಥಿಕ ಹೊರೆಯೇ ತಾನೆ?

- ಡಿ.ಕೆ.ಶಿವಕುಮಾರ್‌, ಸಿಎಂ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಮೊನ್ನೆ ಸಿಕ್ಸರ್‌ ನಿನ್ನೆ ಬೌನ್ಸರ್‌!
100% ನಿಜವಾದ ಪಟ್ಟಿ - ಹೊಸ ಸಚಿವರಿಗೆ ಖಾತೆಗಳ ಹಂಚಿಕೆ-ಯಾರಿಗೆ ಯಾವುದು?