;Resize=(412,232))
ಬೆಂಗಳೂರು : ಮಾಜಿ ಮುಖ್ಯಮಂತ್ರಿಗಳೂ ಆದ ಸಂಸದ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದ ಬಿಜೆಪಿ ಸಂಸದರ ನಿಯೋಗ ಗುರುವಾರ ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ಸಿ.ಆರ್.ಪಾಟೀಲ್ ಅವರನ್ನು ಭೇಟಿ ಮಾಡಿ ಕರ್ನಾಟಕದ ನೀರಾವರಿ ಯೋಜನೆಗಳ ಕುರಿತು ಚರ್ಚೆ ಮಾಡಿದರು.
ಕರ್ನಾಟಕದಲ್ಲಿ ಮಳೆ ಕೊರತೆಯಿಂದ ಬರದ ಪರಿಸ್ಥಿತಿ ಕುರಿತು ಮಾಹಿತಿ ನೀಡಿ ಕೇಂದ್ರ ಸರ್ಕಾರ ಸಹಕಾರ ನೀಡುವಂತೆ ಕೋರಿದರು. ಸಂಸದರಾದ ಜಗದೀಶ ಶೆಟ್ಟರ್, ಗೋವಿಂದ ಕಾರಜೋಳ, ವಿಶ್ವೇಶ್ವರ ಹೆಗಡೆ ಕಾಗೇರಿ, ಪಿ.ಸಿ.ಮೋಹನ್, ಪಿ.ಸಿ.ಗದ್ದಿಗೌಡರ ಈ ನಿಯೋಗದಲ್ಲಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಕರ್ನಾಟಕದಲ್ಲಿ ಪ್ರಸ್ತುತ ಕುಡಿಯುವ ನೀರಿಗೆ ಮಾತ್ರ ಸಾಲುವಷ್ಟು ನೀರಿದ್ದು, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು. ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರದ ಪರ ವಾದ ಮಂಡಿಸುತ್ತಿರುವ ಕಾನೂನು ತಂಡ ಮತ್ತು ಪ್ರಾಧಿಕಾರಗಳಲ್ಲಿನ ರಾಜ್ಯದ ಪ್ರಾತಿನಿಧ್ಯ ತೀರಾ ದುರ್ಬಲವಾಗಿದೆ ಎಂದು ವಾಗ್ದಾಳಿ ನಡೆಸಿದರು.
ನಮ್ಮ ಜಲಾಶಯಗಳಲ್ಲಿ ಪ್ರಸ್ತುತ ಇರುವ ನೀರು ಕರ್ನಾಟಕದ ಕುಡಿಯುವ ನೀರಿನ ಅಗತ್ಯಗಳಿಗೆ ಮಾತ್ರ ಸಾಕಾಗುತ್ತದೆ. ಹೀಗಾಗಿ ಬೇರೆ ಉದ್ದೇಶಗಳಿಗೆ ನೀರು ಬಳಕೆ ಮಾಡುತ್ತಿಲ್ಲ. ಇಂಥ ಸಂದರ್ಭದಲ್ಲಿ ತಮಿಳುನಾಡು ನೀರು ಬಿಡುವಂತೆ ಒತ್ತಡ ಹೇರುತ್ತಿದೆ. ಇದು ದೀರ್ಘ ಕಾಲದ ಪ್ರಕರಣವಾಗಿದ್ದರೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ರಾಜ್ಯದ ನೈಜ ಪರಿಸ್ಥಿತಿಯನ್ನು ಬಲವಾಗಿ ಮಂಡಿಸುವಲ್ಲಿ ರಾಜ್ಯದ ಪ್ರತಿನಿಧಿಗಳು ವಿಫಲರಾಗಿದ್ದಾರೆ. ಇದೇ ಕಾರಣಕ್ಕೆ ತಮಿಳುನಾಡು ಪದೇ ಪದೆ ನೀರಿಗಾಗಿ ಒತ್ತಡ ಹೇರುತ್ತಿದೆ. ಈ ಕುರಿತು ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆಗೆ ಮಾತನಾಡಿದೆ. ಅವರೂ ಇದೇ ಅಭಿಪ್ರಾಯ ಹೊಂದಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಈಗಾಗಲೇ ರೈತರು ಹೋರಾಟ ನಡೆಸುತ್ತಿದ್ದಾರೆ. ರಾಜ್ಯದ ರೈತರ ಹಿತ ಕಾಯುವುದು ರಾಜ್ಯ ಸರ್ಕಾರದ ಕರ್ತವ್ಯ. ನಮ್ಮ ಸರ್ಕಾರದ ಅವಧಿಯಲ್ಲೂ ಇಂಥ ಆದೇಶಗಳು ಬಂದಾಗ ನಾವು ದೃಢವಾಗಿ ನಿಂತು ನೀರು ಹರಿಸಿರಲಿಲ್ಲ. ಈಗಿನ ಸರ್ಕಾರವೂ ಅದೇ ರೀತಿ ದೃಢ ನಿರ್ಧಾರ ತೆಗೆದುಕೊಂಡು ನಮ್ಮ ರೈತರ ಮತ್ತು ಕುಡಿಯುವ ನೀರಿನ ಹಿತಾಸಕ್ತಿ ಕಾಯಬೇಕು ಹಾಗೂ ಕಾನೂನು ಹೋರಾಟ ನಡೆಸಬೇಕು ಎಂದು ಅವರು ಆಗ್ರಹಿಸಿದರು.